ಹುಬ್ಬಳ್ಳಿ: ಉಕ್ರೇನ್ ಮೇಲೆ ಬಾಂಬ್ ದಾಳಿಯಾಗಿದ್ದು ಗೊತ್ತಿರಲಿಲ್ಲ. ತಾಯಿ ಕರೆ ಮಾಡಿ ಹೇಳಿದಾಗಲೇ ಯುದ್ಧ ಆರಂಭವಾಗಿರೋದು ಗೊತ್ತಾಯಿತು. ದಿನ ಕಳೆದಂತೆ ಭಾರತಕ್ಕೆ ಸುರಕ್ಷಿತವಾಗಿ ಹೋಗುತ್ತೇವಾ ಎನ್ನುವ ಅತಂಕ ಶುರುವಾಗಿತ್ತು. ಆದರೆ ಸ್ವ ನಿರ್ಧಾರ ಮಾಡಿ ಖಾರ್ಕಿವ್ ನಗರ ತೊರೆದ ಪರಿಣಾಮ ಭಾರತಕ್ಕೆ ಸುರಕ್ಷಿತವಾಗಿ ಬಂದೆವು.
ಇದು ಉಕ್ರೇನ್‌ನ ಖಾರ್ಕಿವ್ ನಗರದಿಂದ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ ಹಾವೇರಿಯ ಶಿಗ್ಗಾವಿ ತಾಲೂಕಿ ತರೂರು ಗ್ರಾಮದ ರಂಜಿತಾ ಕಲಕಟ್ಟಿ ಹಾಗೂ ಹಾನಗಲ್ಲನ ಶಿವಾನಿ ಮಡಿವಾಳರ ಅವರ ಸಂತಸ ನುಡಿಗಳು. ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಯುದ್ಧಪೀಡಿತ ದೇಶದಿಂದ ಬಂದ ಘಟನೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮ್ಮ ಮಕ್ಕಳನ್ನು ಅಪ್ಪಿ ಮುದ್ದಾಡಿ ಆನಂದ ಬಾಷ್ಪ ಸುರಿಸಿದರು. ಮಕ್ಕಳು ಸುರಕ್ಷಿತವಾಗಿ ಆಗಮಿಸಿದರಲ್ಲ ಎಂದು ಸರಕಾರಗಳಿಗೆ ಧನ್ಯವಾದ ಅರ್ಪಿಸಿದರು. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೂಗುಚ್ಛ ನೀಡಿ ಬರಮಾಡಿಕೊಂಡು ಯೋಗಕ್ಷೇಮ ವಿಚಾರಿಸಿದರು.
ಖಾರ್ಕಿವ್ ನ್ಯಾಶನಲ್ ವೈದ್ಯಕೀಯ ವಿವಿಯ ನಾಲ್ಕನೇ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಶಿವಾನಿ ಮಡಿವಾಳರ ಮಾತನಾಡಿ, ಅತ್ಯಂತ ಭಯಾನಕ ಪರಿಸ್ಥಿತಿ ಅದು. ಇಂತಹ ದೃಶ್ಯ ನೋಡುತ್ತೇವೆ ಅಂದುಕೊಂಡಿರಲಿಲ್ಲ. ಒಂದು ವಾರ ಜೀವ ಭಯದಲ್ಲೇ ದಿನ ಕಳೆದವು. ಕೊರೆಯುವ ಚಳಿ, ನೀರು, ಊಟದ ಸಮಸ್ಯೆ. ಆಗಾಗ ದೊರೆಯುವ ಒಂದಿಷ್ಟು ತಿಂಡಿ ತಿನಿಸುಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಬಾಂಬ್ ಬಿದ್ದಾಗ ಭೂಮಿಯ ಕಂಪನ ಜೀವದ ಅಂಗು ಬಿಟ್ಟಿದ್ದೆವು. ನೆಟ್‌ವರ್ಕ್ ಸಮಸ್ಯೆ, ವಿದ್ಯುತ್ ಇರುತ್ತಿರಲಿಲ್ಲ. ಶಾಸಕ ಶ್ರೀನಿವಾಸ ಮಾನೆ ಅವರು ನಿತ್ಯವೂ ಕರೆ ಮಾಡಿ ಧೈರ್ಯ ತುಂಬುತ್ತಿದ್ದರು. ನನ್ನ ಸಹಪಾಠಿ ನವೀನೊಂದಿಗೆ ಫೆ.28 ರಂದು ಮಾತನಾಡಿದ್ದೆ. ಮಾರನೇ ದಿನ ಸಂಜೆ ಹೊರಡುವ ನಿರ್ಧಾರದ ಬಗ್ಗೆ ತಿಳಿಸಿದ್ದ. ಆದರೆ ಬೆಳಿಗ್ಗೆ ಅವನ ನಮ್ಮೆಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದ ಎಂದು ಕಣ್ಣೀರಾದರು.
ಖಾರ್ಕಿವ್ ನ್ಯಾಶನಲ್ ವೈದ್ಯಕೀಯ ವಿವಿಯ ಮೂರನೇ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ರಂಜಿತಾ ಕಲಕಟ್ಟಿ ಮಾತನಾಡಿ, ಪೋಲಾಂಡ್ ಗಡಿಗೆ ಬರುತ್ತಿದ್ದಂತೆ ಭಾರತದ ಉತ್ತಮವಾಗಿ ಸ್ಪಂದಿಸಿದ್ದಾರೆ. ಊಟ ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡಿದರು. ಅವರಿಗೆ ಧನ್ಯವಾದ ಅರ್ಪಿಸುತ್ತೇವೆ. ಯುದ್ಧದ ಸಮಯದಲ್ಲಿ ಕಳೆದ ಆ ದಿನಗಳು ನರಕದ ಅನುಭವ ನೀಡಿತು. ಬಾಂಬ್ ಸ್ಪೋಟ ತೀವ್ರಗೊಳ್ಳುತ್ತಿದ್ದಂತೆ ಮೆಟ್ರೋ ಬಂಕರ್‌ಗೆ ತೆರಳಿ ಜೀವ ರಕ್ಷಣೆ ಪಡೆದುಕೊಂಡೆವು. ಸಿಗುತ್ತಿದ್ದ ಚಿಪ್ಸ್, ಚಪಾತಿ, ಬಿಸ್ಕತ್‌ನಲ್ಲಿ ದಿನ ಕಳೆದವು. ನನ್ನ ಹಿರಿಯ ವಿದ್ಯಾರ್ಥಿ ನವೀನಣ್ಣನಿಗೆ ಹಾಗಾದಿದ್ದರೆ ಅವರು ಕೂಡ ನಮ್ಮಂತೆ ವಾಪಸ್ಸು ಬರುತ್ತಿದ್ದರು. ಬಹುತೇಕ ಸ್ನೇಹಿತರು ಖಾರ್ಕಿವ್ ನಗರವನ್ನು ತೊರೆದು ಪೋಲಾಂಡ್ ಗಡಿಗೆ ಹತ್ತಿರಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ಮಾಡಿ ಧೈರ್ಯ ತುಂಬಿದರು. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಂತಸ ವ್ಯಕ್ತಪಡಿದರು.