ರೋಣ: ತಾಲೂಕಿನ ಕೋತಬಾಳ, ಹಿರೇಹಾಳ, ನೈನಾಪುರ, ಮಾಡಲಗೇರಿ ಮಾರ್ಗವಾಗಿ ಸಂಚರಿಸುವ ರೋಣ-ನೈನಾಪುರ ಬಸ್ ಪ್ರತಿನಿತ್ಯ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬರುತ್ತಿರುವುದನ್ನು ಖಂಡಿಸಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಹಿರೇಹಾಳ ಗ್ರಾಮದಲ್ಲಿ ಗದಗ-ಬಾಗಲಕೋಟೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಬಸನಗೌಡ ಅಚ್ಚನಗೌಡ್ರ ಮಾತನಾಡಿ, ನೈನಾಪುರ ಮಾಡಲಗೇರಿ ಗ್ರಾಮದಿಂದ ಪ್ರತಿನಿತ್ಯ ಸಂಚರಿಸುವ ರೋಣ-ನೈನಾಪುರ ಬಸ್ ನಿಗದಿತ ಸಮಯಕ್ಕೆ ಸಂಚರಿಸದೇ ಒಂದು ಗಂಟೆ ತಡವಾಗಿ ಸಂಚರಿಸುತ್ತಿದೆ. ಇದರಿಂದಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತೊಂದರೆ ಉಂಟಾಗುತ್ತಿದೆ. ಬೆಳಗ್ಗೆ 8.15ಕ್ಕೆ ಮಾಡಲಗೇರಿ ಗ್ರಾಮಕ್ಕೆ ಆಗಮಿಸಬೇಕಿರುವ ಬಸ್ 9.15ಕ್ಕೆ ಬರುತ್ತಿದೆ. ಇದರಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಬಸ್‌ಗಾಗಿ ನಾವು ಕಾಯುತ್ತ ಕುಳಿತುಕೊಳ್ಳಬೇಕು. ಬಸ್ ತಡವಾಗಿ ಬರುತ್ತಿರುವ ಕಾರಣದಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಬಸ್ ಬರುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ನೈನಾಪುರ, ಮಾಡಲಗೇರಿ, ಕುರಹಟ್ಟಿ ಗ್ರಾಮಗಳ ವಿದ್ಯಾರ್ಥಿಗಳು ಐದು ಕಿ.ಮೀ ವರೆಗೂ ಕಾಲ್ನಡಿಗೆಯಲ್ಲಿ ಹಿರೇಹಾಳ ಗ್ರಾಮಕ್ಕೆ ನಡೆದುಕೊಂಡು ಬಂದು ರೋಣಕ್ಕೆ ತೆರಳಬೇಕು.
ಗದಗ-ಬಾಗಲಕೋಟ ಬಸ್‌ಗಳಲ್ಲಿ ಕೆಲವರು ಪಾಸ್ ಇರುವುದರಿಂದ ಬಸ್‌ನಲ್ಲಿ ಹತ್ತಿಸಿಕೊಳ್ಳುವುದಿಲ್ಲ. ಇದರಿಂದಾಗಿ ನಮಗೆ ಪ್ರತಿನಿತ್ಯ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಆಗುತ್ತಿಲ್ಲ. ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಇದುವರೆಗೂ ಅಧಿಕಾರಿಗಳು ನಮ್ಮ ಸಮಸ್ಯೆಗೆ ಪರಿಹಾರ ನೀಡಿಲ್ಲ. ಶೀಘ್ರ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರೋಣ ಪಿಎಸ್‌ಐ ಪರಮೇಶ್ವರ ಕವಟಗಿ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಮನವೊಲಿಸಲು ಯತ್ನಿಸಿದರು. ಸಾರಿಗೆ ಇಲಾಖೆ ಅಧಿಕಾರಿಗಳು ಬಂದು ಸಮಸ್ಯೆಬಗೆಹರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿ ಸರ್ಪರಾಜ ಡಲಾಯತ್ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದುಕೊಂಡರು.
ರೇಣುಕಾ ಹೂಸೂರ, ಅನ್ನಪೂರ್ಣಾ ಮಿಟ್ಟಲಕೊಡ, ಪವಿತ್ರಾ ಭೀಮನಗೌಡ್ರ, ಭೀಮವ್ವ ಪೂಜಾರ, ಲಕ್ಷ್ಮೀ ಭೀಮನಗೌಡ್ರ, ಹನಮನಗೌಡ ಭೀಮನಗೌಡ್ರ, ಕುಮಾರ ಜೋಗಿ, ಮಹಾಗುಂಡಪ್ಪ ಬಾವಿ, ರಾಜೇಶ್ವರಿ ರಾಯನಗೌಡ್ರ, ಯಲ್ಲಮ್ಮ ಬಾವಿ, ಸೇರಿದಂತೆ ಇದ್ದರು.