ಉಡುಪಿ : ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸ್ಕಾರ್ಫ್ (ಹಿಜಾಬ್) ವಿವಾದಕ್ಕೆ ಸಂಬಂಧಿಸಿ ಕಳೆದ ಮೂರು ವಾರಗಳಿಂದ ತರಗತಿಯಿಂದ ಹೊರಗೆ ಉಳಿದಿರುವ ವಿದ್ಯಾರ್ಥಿನಿಯರು ಗುರುವಾರ ಕಾಲೇಜಿನ ಗೇಟ್ ಬಳಿ ಭಿತ್ತಿಪತ್ರ ಪ್ರದರ್ಶಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಹಿಜಾಬ್ ನಮ್ಮ ಮೂಲಭೂತ ಹಕ್ಕು, ಅದನ್ನು ಪಡೆದೆ ತೀರುತ್ತೇವೆ, ನಮಗೆ ನ್ಯಾಯ ಬೇಕು ನಾವು ಹಿಜಾಬ್ ಹಾಕಿದ ಕಾರಣಕ್ಕಾಗಿ ತರಗತಿಯಿಂದ ಹೊರಗೆ ಕುಳಿತುಕೊಂಡಿದ್ದೇವೆ ಎಂಬ ಭಿತ್ತಿಪತ್ರವನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು. ಗುರುವಾರವೂ ಹಿಜಾಬ್ ಧರಿಸಿ ಕೊಂಡು ಕಾಲೇಜಿಗೆ ಬಂದ ಕಾರಣಕ್ಕೆ ತರಗತಿಗೆ ಪ್ರವೇಶ ಇಲ್ಲದೆ ಕಾಲೇಜಿನಿಂದ ಹೊರಗೆ ಉಳಿದಿದ್ದರು. ಕಳೆದ ಮೂರು ವಾರಗಳಿಂದ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಈ ರೀತಿ ಪ್ರತಿಭಟನೆ ವ್ಯಕ್ತಪಡಿಸಿದರು.
ಈ ವಿಷಯವಾಗಿ ಕುಟುಂಬದ ಸದಸ್ಯರು ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಪ್ರಥಮ ಪಿಯುಸಿಯಲ್ಲಿಯೂ ಸ್ಕಾರ್ಫ್ ಹಾಕಿ ತರಗತಿಗೆ ಬಂದಿದ್ದೇವೆ. ಆಗ ಬಲತ್ಕಾರವಾಗಿ ಸ್ಕಾರ್ಫ್ ತೆಗೆಸಿದ್ದರು. ಈಗ ನಾವು ಹೋರಾಟಕ್ಕೆ ಇಳಿದ ಕಾರಣಕ್ಕೆ ನಮಗೆ ಕಿರುಕುಳ ನೀಡುತ್ತಿದ್ದಾರೆ. ನಮಗೆ ಶಿಕ್ಷಣ ಬೇಕು. ಅದರೊಂದಿಗೆ ನಮ್ಮ ಧಾರ್ಮಿಕ ಹಕ್ಕಿನಂತೆ ಸ್ಕಾರ್ಫ್ ಹಾಕಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿ ಆಲಿಯಾ ಅಸದಿ ಒತ್ತಾಯಿಸಿದರು.
ನಮ್ಮ ಶಿಕ್ಷಣ ಹಾಳಾಗುತ್ತಿದೆ. ಪರೀಕ್ಷೆ ಬರುತ್ತಿದೆ. ನಮಗೆ ಹಿಜಾಬ್ ಹಾಕಲು ಅವಕಾಶ ಕೊಡಿ ಎಂದು ಆಲಿಯಾ ಬಾನು ಮನವಿ ಮಾಡಿದರು.
ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತಲಾ ಮೂವರು ಹಾಗೂ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತಲಾ ಒಬ್ಬರು ಸೇರಿದಂತೆ ಒಟ್ಟು ಎಂಟು ವಿದ್ಯಾರ್ಥಿನಿಯರು ತರಗತಿ ಪ್ರವೇಶ ಇಲ್ಲದೆ ಕಾಲೇಜಿನ ಹೊರಗಡೆ, ಸ್ಟಾಫ್ ರೂಮ್, ಲೈಬ್ರರಿ ಯಲ್ಲಿ ಕುಳಿತು ಮನೆಗೆ ಹೋಗುತ್ತಿದ್ದಾರೆ. ಇವರಲ್ಲಿ ಮೂವರು ಅನಾರೋಗ್ಯದ ಕಾರಣ ಕಾಲೇಜಿಗೆ ಬಂದಿಲ್ಲ. ಉಳಿದ ಐವರು ಭಿತ್ತಿಪತ್ರ ಪ್ರದರ್ಶಿಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಸಮವಸ್ತ್ರ ವಿವಾದವಾಗಿ ಪರಿಗಣಿಸಿ ಈ ಸಂಬಂಧ ಸರಕಾರಕ್ಕೆ ಬರೆದಿದ್ದೇವೆ. ವಿದ್ಯಾರ್ಥಿನಿಯರು ಒಂದುವರೆ ವರ್ಷದಿಂದ ಹಿಜಾಬ್ ಧರಿಸದೇ ತರಗತಿಗೆ ಹಾಜರಾಗಿದ್ದರು. ಕಾಲೇಜಿನಲ್ಲಿ ಶಿಸ್ತು ಅತಿಮುಖ್ಯ. ಸರಕಾರದ ನಿರ್ಧಾರ ಪ್ರಕಟಿಸುವವರೆಗೂ ಹಿಜಾಬ್ ತೆಗೆದು ತರಗತಿಗೆ ಹೋಗಬೇಕು. ಸರಕಾರ ಸಮವಸ್ತ್ರ ಬೇಡ ಎಂದರೆ, ಸಮವಸ್ತ್ರ ಯಾರಿಗೂ ಭೇಡ ಎಂಬ ನಿರ್ಧಾರ ತೆಗೆದುಕೊಳ್ಳಲು ಕಾಲೇಜು ಅಭಿವೃದ್ಧಿ ಸಮಿತಿ ನಿಶ್ಚಯಿಸಿದೆ.
-ಕೆ.ರಘುಪತಿ ಭಟ್, ಸ್ಥಳೀಯ ಶಾಸಕ