ಬಳ್ಳಾರಿ: ವೈದ್ಯಕೀಯ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯಲ್ಲಿ ಉಂಟಾಗಿರುವ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರು ಎಐಡಿಎಸ್‌ಒ ನೇತೃತ್ವದಲ್ಲಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ರಾಜೀವ್‌ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ ವತಿಯಿಂದ ವೈದ್ಯಕೀಯ ಪರೀಕ್ಷೆಗಳ ಕುರಿತು ಸುತ್ತೋಲೆ ಹೊರಡಿಸಿದೆ. ಈ ಸುತ್ತೂಲೆ ಪ್ರಕಾರ ಎರಡನೇ ವರ್ಷದ ಪರೀಕ್ಷೆಗಳನ್ನು ಜನವರಿ ಮಧ್ಯವಾರಕ್ಕೆ ಮತ್ತು ಅಂತಿಮ ವರ್ಷದ ಪರೀಕ್ಷೆಗಳನ್ನು ಫೆಬ್ರವರಿ ಮಧ್ಯವಾರಕ್ಕೆ ನಡೆಸಲು ನಿರ್ಧರಿಸಲಾಗಿದೆ. ಒಂದು ತಿಂಗಳಲ್ಲಿ ಎರಡು ಪರೀಕ್ಷೆಗಳನ್ನು ನಡೆಸುವಂಥ ಯೂನಿವರ್ಸಿಟಿಯ ಕ್ರಮ ಅವೈಜ್ಞಾನಿಕವಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಳೆದ ಮಾರ್ಚ್ ತಿಂಗಳಲ್ಲಿ ತರಗತಿ ಪ್ರಾರಂಭವಾಗಿದ್ದು, ಜೂನ್ ತಿಂಗಳವರೆಗೂ ಆನ್‌ಲೈನ್‌ನಲ್ಲಿಯೇ ತರಗತಿಗಳು ನಡೆದಿವೆ. ಈ ಕಾರಣದಿಂದ ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಆಗಿಲ್ಲ. ಅಲ್ಲದೆ ಅಂತಿಮ ವರ್ಷದ ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ಆಗಿನ ಅವಶ್ಯಕತೆಗೆ ಓಗೊಟ್ಟು, ಕೋವಿಡ್ ಕರ್ತವ್ಯವನ್ನು ಕೆಲವು ತಿಂಗಳುಗಳ ಕಾಲ ನಿರ್ವಹಿಸಿದ್ದರು. ಇದರೊಂದಿಗೆ ಈ ಬ್ಯಾಚ್‌ನ ವಿದ್ಯಾರ್ಥಿಗಳು ಎರಡು ತಿಂಗಳು ಟೆಲಿ ಕಮ್ಯುನಿಕೇಶನ್ ಕರ್ತವ್ಯ ನಿರ್ವಹಿಸಿದ್ದಾರೆ. ಅಂದರೆ ಒಟ್ಟಾರೆಯಾಗಿ ಈ ಎಲ್ಲ ಕಾರಣಗಳಿಂದ ಶೈಕ್ಷಣಿಕ ವೇಳಾಪಟ್ಟಿ ಕುಸಿದು, ಪರೀಕ್ಷೆ ತಯಾರಿಗೆ ಸಮಯ ಕಡಿಮೆಯಾಗಿದೆ.
ಈಗ ಫೆಬ್ರವರಿ ಮಧ್ಯವಾರಕ್ಕೆ ಪರೀಕ್ಷೆ ಎನ್ನುವುದು ಮತ್ತಷ್ಟು ದುಗುಡಕ್ಕೆ ಕಾರಣವಾಗಿದ್ದು, ಕೂಡಲೇ ಅಂತಿಮ ವರ್ಷದ ಪರೀಕ್ಷೆಯನ್ನು ಮುಂದೂಡಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಈರಣ್ಣ, ಕಾರ್ಯದರ್ಶಿ ಜೆ.ಪಿ. ರವಿಕಿರಣ್, ಉಪಾಧ್ಯಕ್ಷೆ ಜೆ. ಸೌಮ್ಯ, ಕೆ.ಈರಣ್ಣ, ಎಂ.ಶಾಮತಿ, ಕಂಬಳಿ ಮಂಜುನಾಥ್, ನಿಂಗರಾಜ್, ಅನುಪಮಾ, ನಿಹಾರಿಕ, ಸಿದ್ದು ಮತ್ತು ಹಲವು ಸದಸ್ಯರು, ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.