ತಾಲೂಕಿನ ಹಳೆನೇರೆಂಕಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟದ ಮೈದಾನದ ಒಂದು ಭಾಗವನ್ನು ಗದ್ದೆ ಬೇಸಾಯಕ್ಕೆ ಮೀಸಲಿಟ್ಟು ವಿದ್ಯಾರ್ಥಿಗಳಿಗೆ ಕೃಷಿ ಪಾಠ ನಡೆಯುತ್ತಿರುವುದು ವಿಶೇಷ.
Advertisement
ಹಳೆನೇರೆಂಕಿ ಶಾಲೆಯಲ್ಲಿ ಗದ್ದೆ ಬೇಸಾಯ, ತೆನೆ ಹಬ್ಬ, ಹೊಸಕ್ಕಿ ಊಟ ಮುಂತಾದ ತುಳುನಾಡ ಆಚರಣೆಗಳನ್ನು ಮೆಲುಕು ಹಾಕುವ ಪ್ರಾಯೋಗಿಕ ಪ್ರಯತ್ನ ಮೂರು ವರ್ಷಗಳಿಂದ ನಡೆಯುತ್ತಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉಳುಮೆ, ನೇಜಿ ನಾಟಿ ಮಾಡಿ ಕೊನೆಗೆ ಭತ್ತದ ಪೈರನ್ನು ಕಟಾವು ಮಾಡುವ ತನಕ ಭತ್ತ ಬೇಸಾಯದ ಇಡೀ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ.
ಗದ್ದೆ ಬೇಸಾಯವಲ್ಲದೆ ಇಲ್ಲಿನ ವಿದ್ಯಾರ್ಥಿಗಳು ಶಾಲಾ ಕೈತೋಟದಲ್ಲಿ ತರಕಾರಿಯನ್ನೂ ಬೆಳೆಯುತ್ತಿದ್ದಾರೆ. ಸ್ಥಳೀಯ ಶಿಕ್ಷಣ ಪ್ರೇಮಿಗಳು ಹಾಗೂ ಹೆತ್ತವರ ಸಹಯೋಗದಲ್ಲಿ ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಾದ ತರಕಾರಿ ಬೆಳೆಯಲಾಗುತ್ತಿದೆ. ಬೆಳೆಗಳ ಪೋಷಣೆಯ ಸಂಪೂರ್ಣ ಹೊಣೆಯನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದಾರೆ. ಪೇಜಾವರ ಶ್ರೀಗಳು ಬಾಲ್ಯದಲ್ಲಿ ಬರುತ್ತಿದ್ದ ಶಾಲೆ
ಉಡುಪಿಯ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಹುಟ್ಟಿದ ಮನೆ ಈ ಶಾಲೆಯ ಕೂಗಳತೆಯಲ್ಲಿದೆ. ಬಾಲ್ಯದ ದಿನಗಳಲ್ಲಿ ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ತನ್ನ ಅಕ್ಕನ ಜೊತೆ ಅವರೂ ಈ ಶಾಲೆಗೆ ಬರುತ್ತಿದ್ದರಂತೆ. ಹಾಗಾಗಿ ಈ ಶಾಲೆಗೂ ಸ್ವಾಮೀಜಿಗೂ ಹತ್ತಿರದ ನಂಟಿದೆ.
Related Articles
ಮುಖ್ಯ ಶಿಕ್ಷಕ ಸಾಂತಪ್ಪ ಗೌಡ ಹಾಗೂ ಇತರ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಲೆಗೆ ಮುಂಡಾಸು, ವಿದ್ಯಾರ್ಥಿನಿಯರು ಅಡಿಕೆ ಹಾಳೆಯ ಮುಟ್ಟಾಲೆ ಧರಿಸಿ ಸಾಂಪ್ರದಾಯಿಕವಾಗಿ ಗದ್ದೆಗಿಳಿದು ನೇಜಿ ನಾಟಿ ಮಾಡಿ ಪಕ್ಕಾ ಕೃಷಿಕರಂತೆ “ಓ ಬೇಲೆ’ ಪಾಡªನ ಹಾಡಿ ಖುಷಿಪಟ್ಟರು. ಗದ್ದೆಯ ಎಲ್ಲ ಕೆಲಸವನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಶಾಲೆಯಲ್ಲಿ ಬೆಳೆದ ತರಕಾರಿ, ಭತ್ತದ ಪೈರಿಗೆ ನವಿಲುಗಳು ದಾಳಿ ನಡೆಸುವುದು ನಮಗೆ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ಶಿಕ್ಷಕ ನವೀನ್.
Advertisement
ಉತ್ತಮ ಸಹಕಾರಕೃಷಿ ನಮ್ಮ ಹಿರಿಯರ ಜೀವನಾಡಿಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಆಧುನಿಕತೆಯ ಹೆಸರಿನಲ್ಲಿ ಯಾಂತ್ರೀಕೃತ ಬದುಕಿಗೆ ಒಗ್ಗಿಕೊಂಡು ಕೃಷಿ ಪದ್ಧತಿಯನ್ನು ಮುಂದುವರಿಸುವ ಮಂದಿ ಕಡಿಮೆ ಯಾಗಿದ್ದಾರೆ. ಪ್ರಾಯೋಗಿಕ ಕೃಷಿ ಪಾಠದಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕೃಷಿಯತ್ತ ಒಲವು ತೋರಿಸಲಿ ಎನ್ನುವುದು ನಮ್ಮ ಆಶಯ. ಈ ಕಾರ್ಯಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಕ್ಕಳ ಹೆತ್ತವರು ಹಾಗೂ ಶಿಕ್ಷಣ ಪ್ರೇಮಿಗಳಿಂದ ಉತ್ತಮ ಸಹಕಾರ ಸಿಗುತ್ತಿದೆ.
- ಸಾಂತಪ್ಪ ಗೌಡ, ಮುಖ್ಯ ಶಿಕ್ಷಕ