ವಾಡಿ: ಪದವಿ, ಇಂಜಿನಿಯರಿಂಗ್, ಡಿಪ್ಲೋಮಾ, ಸ್ನಾತಕೋತ್ತರ ಪದವಿಗಳ ಸೆಮಿಸ್ಟರ್ ಪರೀಕ್ಷೆ ನಡೆಸಲು ತೀರ್ಮಾನಿ ಸಿದ ಸರ್ಕಾರದ ತೀರ್ಮಾನ ಖಂಡಿಸಿ ವಿದ್ಯಾರ್ಥಿಗಳು ಅಖೀಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ವಿವಿಧ ಗ್ರಾಮಗಳ ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳಿಗೆ ಮತ್ತು ನಾಲವಾರ ಉಪ ತಹಶೀಲ್ದಾರಗೆ ಮನವಿ ಪತ್ರ ಸಲ್ಲಿಸಿ ಪರೀಕ್ಷೆ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ವಿದ್ಯಾರ್ಥಿಗಳಿಗೆ ಕಳೆದ ಸೆಮಿಸ್ಟರ್‌ನ ಪರೀಕ್ಷೆ ನಡೆಸುತ್ತೇವೆ ಎನ್ನುವ ಅವೈಜ್ಞಾನಿಕ ಮತ್ತು ಅತಾರ್ಕಿಕವಾದ ನಿರ್ಧಾರ ಕೈಗೊಂಡಿದ್ದನ್ನು ಹಿಂಪಡೆಯಬೇಕು.
ಸಂಬಂಧಪಟ್ಟವರ ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ಹಾಗೂ ಅಪ್ರಜಾತಾಂತ್ರಿಕವಾಗಿ ನಿರ್ಧಾರ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಆಫ್ ಲೈನ್ ತರಗತಿಗಳು ಆರಂಭವಾಗುವ ಮುನ್ನ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ವ್ಯಾಕ್ಸಿನ್ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಒಂದು ವಾರದಿಂದ ಎಐಡಿಎಸ್‌ಒ ವತಿಯಿಂದ ನಡೆಸಲಾದ ಗೂಗಲ್ ಫಾರ್ಮ್ ಸಮೀಕ್ಷೆಯಲ್ಲಿ ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಳೆದ ಸೆಮಿಸ್ಟರ್ ಪರೀಕ್ಷೆಯನ್ನು ಪ್ರಚಲಿತ ಸೆಮಿಸ್ಟರ್ ನಡುವೆ ನಡೆಸುವುದು ಬೇಡ ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಆದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ.
ಹೀಗಾಗಿ ಬುಧವಾರ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಮುಖಂಡರಾದ ಗೋವಿಂದ ಯಳವಾರ, ಸುನೀಲ ಪೂಜಾರಿ, ಪ್ರಕಾಶ ಪವಾರ, ಸಿದ್ದರಾಜ ಮದ್ರಿ, ದತ್ತು ಹುಡೇಕರ, ವಿರೇಶ ಪಾಟೀಲ, ಮರಲಿಂಗ್ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.