ಬೆಂಗಳೂರು: ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ಮೊದಲಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟಗೊಂಡಿದ್ದು, ಎಂಜಿನಿಯರಿಂಗ್ ವಿಭಾಗದಿಂದ 1,40,957 ಅಭ್ಯರ್ಥಿಗಳು ರ್‍ಯಾಂಕ್ ಪಡೆದಿದ್ದಾರೆ.
2019ರ ಸಿಇಟಿಗೆ 1,94,308 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 1,80,315 ಅಭ್ಯರ್ಥಿಗಳು ಸಿಇಟಿಗೆ ಹಾಜರಾಗಿದ್ದರು. ಎಂಜಿನಿಯರಿಂಗ್ ವಿಭಾಗದಿಂದ 1,40,957, ಬಿ.ಎಸ್ಸಿ ಕೃಷಿ ವಿಭಾಗದಿಂದ 1,13,294, ಪಶುವೈದ್ಯಕೀಯ ವಿಭಾಗದಿಂದ 1,18,045, ಯೋಗ ಮತ್ತು ನ್ಯಾಚುರೋಪಥಿ ವಿಭಾಗದಿಂದ 1,17,947, ಬಿ-ಫಾರ್ಮಾದಿಂದ 1,46,546 ಮತ್ತು ಡಿ-ಫಾರ್ಮಾದಿಂದ 1,46,759 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಲ್ಲಿ ಬಹುತೇಕರು ನಗರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಬೆಂಗಳೂರು, ಮಂಗಳೂರು ಮತ್ತು ಮೈಸೂರು ನಗರ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿಸಿದ್ದಾರೆ.
ಎಂಜಿನಿಯರಿಂಗ್ ವಿಭಾಗದಲ್ಲಿ ಮಾರತ್ತಹಳ್ಳಿಯ ಚೈತನ್ಯ ಟೆಕ್ನೊ ಪಿಯು ಕಾಲೇಜಿನ ಜಫಿನ್ ಬಿಜು ಪ್ರಥಮ ಸ್ಥಾನ ಪಡೆದಿದ್ದಾರೆ. ಮೊದಲ ಹತ್ತು ಸ್ಥಾನಗಳಲ್ಲಿ ಬೆಂಗಳೂರಿಗೆ 7, ಮಂಗಳೂರಿಗೆ ಎರಡು ಮತ್ತು ಬಳ್ಳಾರಿಗೆ 1 ಸ್ಥಾನ ಬಂದಿದೆ. ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನದ ಮೊದಲು ಹತ್ತು ಸ್ಥಾನಗಳಲ್ಲಿ ಬೆಂಗಳೂರಿಗೆ 6, ಮಂಗಳೂರಿಗೆ 2 ಮತ್ತು ಮೈಸೂರು, ದಾವಣಗೆರೆಗೆ ತಲಾ ಒಂದು ಸ್ಥಾನ ಲಭಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದರು.
ಬಿ.ಎಸ್ಸಿ . ಕೃಷಿ ವಿಭಾಗದ ಮೊದಲ ಹತ್ತು ಸ್ಥಾನದಲ್ಲಿ ಬೆಂಗಳೂರಿಗೆ 3, ಮಂಗಳೂರಿಗೆ 4, ಮೈಸೂರು, ಹಾಸನ ಮತ್ತು ಶಿವಮೊಗ್ಗಕ್ಕೆ ತಲಾ 1 ಸ್ಥಾನ ಬಂದಿದೆ. ಪಶು ವೈದ್ಯಕೀಯದ ಮೊದಲ ಹತ್ತು ಸ್ಥಾನದಲ್ಲಿ ಬೆಂಗಳೂರಿಗೆ 8, ದಾವಣಗೆರೆ ಮತ್ತು ಮೈಸೂರಿಗೆ ತಲಾ 1 ಸ್ಥಾನ ಬಂದಿದೆ. ಬಿ-ಫಾರ್ಮಾ ಮತ್ತು ಡಿ-ಫಾರ್ಮಾ ವಿಭಾಗದ ಮೊದಲ ಹತ್ತು ಸ್ಥಾನದಲ್ಲಿ ಬೆಂಗಳೂರಿಗೆ 7, ಮಂಗಳೂರು, ಮೈಸೂರು, ಬಳ್ಳಾರಿಗೆ ತಲಾ 1 ಸ್ಥಾನ ಬಂದಿದೆ ಎಂದು ವಿವರ ನೀಡಿದರು.
ಈ ಮಧ್ಯೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್) ಫಲಿತಾಂಶ ಬಂದ ಅನಂತರ ನೀಟ್-2019ರ ಆಧಾರದಲ್ಲಿ ವೈದ್ಯಕೀಯ ಮತ್ತು ದಂತವೈದ್ಯಕೀಯ, ಭಾರತೀಯ ವೈದ್ಯಪದ್ಧತಿ, ಹೋಮಿಯೋಪಥಿ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು. ನ್ಯಾಶನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್(ನಾಟಾ), ಜೆಇಇ ಪೇಪರ್-2 ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕೆ ರ್‍ಯಾಂಕ್‌ಗಳನ್ನು ಪ್ರಕಟಿಸಲಾಗುತ್ತದೆ. ಆನ್‌ಲೈನ್ ಮೂಲಕ ನೀಟ್, ನಾಟಾ ಮತ್ತು ಜೆಇಇ ಪೇಪರ್-2 ಅಂಕಗಳನ್ನು ದಾಖಲಿಸಲು ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರಾಧಿಕಾರವು ಕ್ರಮ ಕೈಗೊಂಡಿರುತ್ತದೆ. 2020ರಿಂದ ಆನ್‌ಲೈನ್‌ನಲ್ಲಿ ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ಉಚಿತ ಶಿಕ್ಷಣ
ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ, ಬಿ-ಫಾರ್ಮಾ, ಡಿ-ಫಾರ್ಮಾ ಕೋರ್ಸ್‌ಗಳಲ್ಲಿ ಮೊದಲು ಐದು ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಾಲೇಜುಗಳ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.