Advertisement

Bajpe: ಸರಕಾರಿ ಶಾಲೆ ವಿದ್ಯಾರ್ಥಿಗಳಿಂದ ಸುದ್ದಿ ವಾಹಿನಿ!

03:26 PM Aug 05, 2024 | Team Udayavani |

ಬಜಪೆ: ಮುಂದುವರಿದ ಸಮಾಜದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಅದರಲ್ಲೂ ಸರಕಾರಿ ಶಾಲೆಯ ಮಕ್ಕಳು ನಗರದ ಮಕ್ಕಳಿಗೆ ಸರಿಸಮನಾಗಿ ಬೆಳೆಯ ಬೇಕು ಎಂಬ ದೂರದೃಷ್ಟಿಯಿಂದ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ “ನಮ್ಮ ಶಾಲಾ ವಾರ್ತೆಗಳು’ ಯೂಟ್ಯೂಬ್‌ ಸುದ್ದಿ ವಾಹಿನಿಯನ್ನು ಆರಂಭಿಸಲಾಗಿದೆ.

Advertisement

ಪಠ್ಯದ ಜತೆ ಜತೆಯಲ್ಲಿ ಮಕ್ಕಳಲ್ಲಿ ಹಿಂಜರಿಕೆ ದೂರ ಮಾಡುವುದು, ಭಾಷಾ ಶುದ್ಧಿ, ಚಿಂತನಾ ಲಹರಿ, ಸಾಮಾನ್ಯ ಜ್ಞಾನ ವೃದ್ಧಿ ಇತ್ಯಾದಿ ಸಂಕಲ್ಪ ಈ ಸುದ್ದಿ ವಾಹಿನಿ ಆರಂಭದ ಹಿಂದೆ ಇದೆ. ಮುಖ್ಯಶಿಕ್ಷಕಿ ಇಂದಿರಾ ಎನ್‌. ರಾವ್‌ ಮತ್ತು ಶಿಕ್ಷಕರು ಮಕ್ಕಳಿಗೆ ತರಬೇತಿ ಹಾಗೂ ಮಾರ್ಗ ದರ್ಶನ ನೀಡಿ ಮುನ್ನಡೆಸುತ್ತಿದ್ದಾರೆ.

ಚಟುವಟಿಕೆ ಹೀಗಿದೆ…

ಮೊದಲ ಹಂತದಲ್ಲಿ ತಲಾ 10 ವಿದ್ಯಾರ್ಥಿಗಳ ತಂಡವನ್ನು ರಚಿಸಿ ಶಾಲೆಯಲ್ಲಿ ತಿಂಗಳ ಅವಧಿಯಲ್ಲಿ ಆಯೋಜಿಸಿದ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳ ಕಾರ್ಯಕ್ರಮಗಳ ವರದಿಗಳನ್ನು ತಯಾರಿಸುವಂತೆ ಸೂಚಿಸಲಾಗುತ್ತದೆ. ಕನ್ನಡ ಭಾಷಾ ಶಿಕ್ಷಕಿ ವಿದ್ಯಾಗೌರಿ ಮಾರ್ಗದರ್ಶನ ನೀಡುತ್ತಾರೆ.

ವಿದ್ಯಾರ್ಥಿಗಳು ಸಿದ್ಧಪಡಿಸಿದ ವರದಿಗಳನ್ನು ಮರುಓದಿನ ಮುಖಾಂತರ ಸಂಕ್ಷಿಪ್ತಗೊಳಿಸಿ ವ್ಯಾಕರಣಬದ್ಧವಾಗಿ ನೇರ್ಪುಗೊಳಿಸಲಾಗುತ್ತದೆ. ಪರಿಷ್ಕೃತ ವರದಿಯನ್ನು ವಾರ್ತಾ ಪ್ರಸಾರದ ಸಂದರ್ಭ ಹಿನ್ನೆಲೆ ಧ್ವನಿಯಾಗಿ ಹೇಗೆ ಪ್ರಸ್ತುತಪಡಿಸಬೇಕು ಎನ್ನುವುದನ್ನು ಇಬ್ಬರು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಲಾ ಗುತ್ತದೆ.

Advertisement

ಶಾಲೆಯ ಕಂಪ್ಯೂಟರ್‌ ಕೊಠಡಿಯಲ್ಲಿ ಗ್ರೀನ್‌ ಸ್ಕ್ರೀನ್‌ ಬಳಸಿ ಶಿಕ್ಷಕರ ಮೊಬೈಲ್‌ನಲ್ಲಿ ವಿದ್ಯಾರ್ಥಿ ಓದುತ್ತಿರುವ ವಾರ್ತೆಯನ್ನು ಮುದ್ರಿಸಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಓದಿದ ವಾರ್ತೆಗಳ ಧ್ವನಿ ಹಾಗೂ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿರುವ ಕಾರ್ಯಕ್ರಮಗಳ ವೀಡಿಯೋವನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ದೊರೆಯುವ ವಿನ್‌ ಆ್ಯಪ್‌ ಮೂಲಕ ಸಂಯೋಜಿಸಲಾಗುತ್ತದೆ.

ಸುದ್ದಿಗೆ ಪೂರಕ ಅಡಿಬರೆಹಗಳನ್ನು ಶಿಕ್ಷಕಿ ರಮ್ಯಾ ಮಾರ್ಗದರ್ಶನದಲ್ಲಿ ತಯಾರಿಸಿ ವರದಿಗೆ ಅಂತಿಮ ರೂಪ ನೀಡಲಾಗುತ್ತದೆ. ಬಳಿಕ ಡಾ| ಅನಿತ್‌ಕುಮಾರ್‌ ಮಾರ್ಗ ದರ್ಶನದಲ್ಲಿ ಸಂಕಲನ ಕಾರ್ಯವನ್ನು ಪೂರೈಸಿ ಶಾಲೆಯ ಯೂಟ್ಯೂಬ್‌ ಚಾನೆಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಅದರ ಲಿಂಕ್‌ ಅನ್ನು ಪ್ರತೀ ತರಗತಿಯ ವಿದ್ಯಾರ್ಥಿಗಳ ಹೆತ್ತವರು / ಶಿಕ್ಷಕರು ಇರುವ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ಹಂಚಲಾಗುತ್ತದೆ.

ಸಕಾರಾತ್ಮಕ ಚಟುವಟಿಕೆ ತೊಡಗಿ

ಪ್ರೌಢಾವಸ್ಥೆಯಲ್ಲಿ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಕ್ಕೆ ಶೀಘ್ರವಾಗಿ ಹೊಂದಿಕೊಳ್ಳುತ್ತಾರೆ ಪ್ರತಿಯೊಬ್ಬರಿಗೂ ಬೆರಳ ತುದಿಯಲ್ಲಿ ಲಭಿಸುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿ ಗಳನ್ನು ಈ ರೀತಿಯ ಸಕಾರಾತ್ಮಕ ಚಟುವ ಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಎಲ್ಲ ಶಿಕ್ಷಕರ ಅಭಿಪ್ರಾಯ. ಒಂದು ವರ್ಷದಲ್ಲಿ 100 ಮಂದಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮೊದಲ ಶಾಲಾ ವಾರ್ತೆ ಸಂಚಿಕೆಯಲ್ಲಿ ವಿದ್ಯಾರ್ಥಿಗಳಾದ ಮೇಘನಾ, ಹರ್ಷಿತಾ, ಅನ್ವಿತಾ, ಆಶಾಲತಾ, ದರ್ಶಿನಿ, ವೀಕ್ಷಿತಾ, ಅಕ್ಕಮಾದೇವಿ, ಪ್ರತೀಕ್ಷಾ, ಸೃಷ್ಟಿ, ಮೌಲ್ಯಾ, ಅಪ್ಸಾನಾ ಬಾನು, ಸಾನ್ವಿ ಪಾಲ್ಗೊಂಡಿದ್ದಾರೆ.

ತಂತ್ರಜ್ಞಾನ ಸದ್ಬಳಕೆ

ಗ್ರಾಮೀಣ ವಿದ್ಯಾರ್ಥಿಗಳಾದರೂ ತಂತ್ರಜ್ಞಾನವನ್ನು ಬಳಸಿಕೊಂಡು ನಗರದ ವಿದ್ಯಾರ್ಥಿಗಳಿಗೆ ನಾವೇನೂ ಕಮ್ಮಿಯಿಲ್ಲ ಎಂಬುದನ್ನು ನಮ್ಮ ಶಾಲೆಯ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಶಾಲೆಯಲ್ಲಿ ನಡೆಯುವ ಪ್ರತೀ ತಿಂಗಳಿನ ಕಾರ್ಯಕ್ರಮಗಳನ್ನು ಚಿತ್ರೀಕರಿಸಿಕೊಂಡು ಟಿವಿ ವಾಹಿನಿಗಳ ಮಾದರಿಯಲ್ಲೇ ವಾರ್ತೆಯ ರೂಪದಲ್ಲಿ “ನಮ್ಮ ಶಾಲಾ ವಾರ್ತೆಗಳು’ ಚಾನೆಲ್‌ ಮೂಲಕ ಬಿತ್ತರಿಸುತ್ತಿದ್ದಾರೆ.

-ಇಂದಿರಾ ಎನ್‌. ರಾವ್‌, ಮುಖ್ಯಶಿಕ್ಷಕಿ

Advertisement

Udayavani is now on Telegram. Click here to join our channel and stay updated with the latest news.

Next