ಗಜೇಂದ್ರಗಡ: ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಹಾಗೂ ಮಾಹಿತಿ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ದಿಸೆಯಲ್ಲಿ ಎಲ್ಲ ಮಕ್ಕಳು ಕಾನೂನಿನ ಬಗ್ಗೆ ಹೆಚ್ಚು ಗಮನ ಹರಿಸಿ ಕಾನೂನು ಪಾಲನೆಗೆ ಮುಂದಾಗಬೇಕು ಎಂದು ಎಎಸ್‌ಐ ಎಚ್.ಎಲ್. ಭಜೇಂತ್ರಿ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದಡಿ ಸಮೀಪದ ದಿಂಡೂರ ಗ್ರಾಮದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ಮಾಹಿತಿ ನೀಡಿದರು.
ಸಮಾಜದಲ್ಲಿ ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಹಾಗೂ ಬಾಲ್ಯ ವಿವಾಹಗಳಂತಹ ಪಿಡುಗುಗಳು ಕಾಡುತ್ತಿವೆ. ಹೀಗಾಗಿ ಮಕ್ಕಳಿಗೆ ಸಂವಿಧಾನ ನೀಡಿರುವ ಅತ್ಯಮುಲ್ಯ ಹಕ್ಕು ಉಲ್ಲಂಘನೆಯಾಗುತ್ತಿದೆ. ಪಾಲಕರು ತಮ್ಮ ಬದುಕಿನ ಭವಣೆ ನೀಗಿಸಿಕೊಳ್ಳಲು ಚಿಕ್ಕ ಮಕ್ಕಳನ್ನು ಕೆಲಸಗಳಿಗೆ ಕಳುಹಿಸುವುದನ್ನು ನಿಲ್ಲಿಸುವ ಸಂಕಲ್ಪ ತೊಟ್ಟು ಶಿಕ್ಷಣ ನೀಡಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಕರ್ತವ್ಯ, ಬಾಲ ಕಾರ್ಮಿಕ, ಎಫ್‌ಐಆರ್, ಬಾಲ್ಯ ವಿವಾಹ ಹಾಗೂ ಮಕ್ಕಳ ಹಕ್ಕುಗಳು ಹಾಗೂ ಇಲಾಖೆ ಅಧಿಕಾರಿಗಳು ಬಳಸುವ ಪಿಸ್ತೂಲ್, ಗಣಕಯಂತ್ರ, ರೈಫಲ್, ಬಂದಿಖಾನೆ, ವಾಕಿಟಾಕಿ, ದಾಖಲಾತಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಿದರು.
ಪೊಲೀಸ್ ಸಿಬ್ಬಂದಿ ಎಸ್.ವಿ. ಮಂತಾ, ದಾದಾಖಲಂದರ ಆಶೆಖಾನ, ಗೀತಾ ಉಪ್ಪಾರ, ಚಂದ್ರು ಹಾದಿಮನಿ, ಸುರೇಶ ಗೊಂದಿ ಸೇರಿದಂತೆ ಇತರರು ಇದ್ದರು.