ಹುಬ್ಬಳ್ಳಿ: ಜೀವನದಲ್ಲಿ ಉನ್ನತ ಗುರಿ ಇರಿಸಿಕೊಳ್ಳುವ ಮೂಲಕ, ಮತ್ತೂಬ್ಬರ ಬಳಿ ಕೈ ಚಾಚದೆ ಬೆಳೆಯಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ರಾಜ್ಯಸಭೆ ಮಾಜಿ ಸದಸ್ಯ ಡಾ|ಬಸವರಾಜ ಪಾಟೀಲ ಸೇಡಂ ಹೇಳಿದರು.
ಕೆಎಲ್‌ಇ ಸಂಸ್ಥೆಯ ಪಿ.ಸಿ.ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ 10ನೇ ಪದವಿ ಪ್ರದಾನ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಇಂದು ವಿವಿಧ ಹಂತದಲ್ಲಿ ಅಧ್ಯಯನ ಮಾಡುವವರೆಲ್ಲರೂ ಉನ್ನತ ಹುದ್ದೆಗಳೇ ಬೇಕು, ಸರಕಾರಿ ಕೆಲಸವೇ ಬೇಕು ಎನ್ನುವ ಮಹದಾಸೆಯೊಂದಿಗೆ ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ ಅಲೆದಾಟ ಶುರುವಿಟ್ಟುಕೊಳ್ಳುತ್ತಾರೆ. ಆದರೆ ಜೀವನದಲ್ಲಿ ಒಂದು ಕೊಠಡಿಯೊಳಗೆ ಕುಳಿತು ಮತ್ತೂಬ್ಬರ ಆದೇಶ ಪಾಲಿಸುವವರಾಗದೇ ಸ್ವಂತ ಉದ್ಯೋಗ ಆರಂಭಿಸುವ ಮೂಲಕ ರಾಜನಂತೆ ಮೆರೆಯಬೇಕು. ಸಾಮರ್ಥ್ಯವನ್ನು ಓರೆಗೆ ಹಚ್ಚುವ ಮೂಲಕ ಜೀವನದಲ್ಲಿ ಅಂದುಕೊಂಡ ಗುರಿ ಸಾಧಿಸಲು ಮುಂದಾಗಬೇಕೆಂದರು.
ತಾಯ್ನಾಡಿನ ಅನ್ನ ಉಂಡು, ಹೊರದೇಶಗಳಿಗೆ ತೆರಳಿ ಅಲ್ಲಿ ಉದ್ಯೋಗ ಮಾಡುವ ಮೂಲಕ ತಾಯ್ನಾಡಿಗೆ ತೆಗಳುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಮೊದಲು ನಾವು ಸರಿಯಾಗಿದ್ದೇವೆ ಎನ್ನುವುದನ್ನು ಅರಿತು ಮುಂದೆ ಮಾತನಾಡಬೇಕು. ನಮ್ಮ ದೇಶದ ಆತ್ಮ ಗ್ರಾಮೀಣ ಭಾಗದಲ್ಲಿದ್ದು, ಇಂದು ಗ್ರಾಮೀಣ ಭಾಗ ಯಾರಿಗೂ ಬೇಡವಾಗುತ್ತಿದೆ. ದೇಶದ ಬೆನ್ನೆಲಬು ರೈತ, ಆದರೆ ಇಂದು ರೈತನನ್ನೇ ಭಿಕ್ಷುಕನಂತೆ ಮಾಡಲಾಗುತ್ತಿದೆ. ಸರಕಾರ ನೀಡುವ ಉಚಿತ ಸೌಲಭ್ಯಗಳೇ ಮಾರಕವಾಗುತ್ತಿವೆ. ಭೂಮಿಯ ಮೇಲಿರುವ ಸಕಲ ಜೀವರಾಶಿಗೆ ಆಧಾರವೇ ರೈತ ಎನ್ನುವುದನ್ನು ಮರೆಯದೇ ರೈತನ ಶ್ರೇಯೋಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು ಎಂದರು.
ಕವಿವಿ ಕುಲಪತಿ ಪ್ರೊ| ಕೆ.ಬಿ. ಗುಡಸಿ ಮಾತನಾಡಿ, 100 ವರ್ಷದ ಇತಿಹಾಸ ಹೊಂದಿರುವ ಕೆಎಲ್‌ಇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅಂದು ಸಸಿಯಾಗಿ ಬೆಳೆಸಿದ ಸಪ್ತಋಷಿಗಳ ಸಂಸ್ಥೆ ಇಂದು ದೇಶ-ವಿದೇಶಗಳಲ್ಲಿ ತನ್ನ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳಿಗೆ ವರ್ಷದ ಪದ್ಧತಿ, ಸೆಮಿಸ್ಟರ್ ಪದ್ಧತಿ ಸೇರಿದಂತೆ ಹಲವಾರು ಮಾದರಿಯಲ್ಲಿ ಅಧ್ಯಯನಕ್ಕೆ ಅನುಕೂಲ ಮಾಡಲಾಗಿದ್ದು, ಹಿಂದಿನ ಗುರುಕುಲದ ಮಾದರಿ ನೆನಪಿಸಿದಂತಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರಕಾರ 2020ರಲ್ಲಿ ಜಾರಿಗೆ ತಂದಿರುವ ಎನ್‌ಇಪಿ ಜಾರಿಗೊಳಿಸಿರುವ ವಿಶ್ವವಿದ್ಯಾಲಯಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮೊದಲ ಸ್ಥಾನದಲ್ಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿಯೇ ಕೌಶಲ್ಯಾಭಿವೃದ್ಧಿ ತರಬೇತಿ ಸಹ ಸಿಗುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಿಗುವ ಅವಕಾಶಗಳ ಸದ್ಬಳಕೆಗೆ ಅವಕಾಶ ದೊರೆತಂತಾಗುತ್ತದೆ ಎಂದರು.
ಪ್ರಾಚಾರ್ಯ ಡಾ| ಎಲ್.ಡಿ. ಹೊರಕೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಸಂಜೀವ ಇನಾಮದಾರ, ಧಿರೇಂದ್ರ ವಾದಿರಾಜ ಮೊದಲಾದವರು ಇದ್ದರು.
ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಣೆ: ಸಂಸ್ಥೆಯಲ್ಲಿ ಅಧ್ಯಯನ ಮಾಡಿ ರ್‍ಯಾಂಕ್‌ಗಳಿಸಿದ ಪಲ್ಲವಿ ಅತ್ತಾರ(ಬಿಎಸ್ಸಿ), ದೀಪಾ ಪೈ(ಬಿಸಿಎ), ರತ್ನವ್ವ ಯಲಬುರ್ಗಿ(ಎಂಎಸ್ಸಿ ಕಂಪ್ಯೂಟರ್ ಸೈನ್ಸ್), ಅಮಿತ ಖಂಡಕೆ(ಎಂಎಸ್ಸಿ ಬಯೋಟೆಕ್ನಾಲಜಿ), ವಿದ್ಯಾಶ್ರೀ ಪಾಟೀಲ(ಎಂಎಸ್ಸಿ ಕೆಮೆಸ್ಟ್ರಿ), ಖಾಜಿ ಸಾಧಿಯಾ ಎಂ.ಜಿ.(ಎಂಎಸ್ಸಿ ಫಿಜಿಕ್ಸ್)ನಲ್ಲಿ ರ್‍ಯಾಂಕ್‌ಗಳಿಗೆ ಪದವಿ ಪ್ರಮಾಣ ಪತ್ರ ಪಡೆದುಕೊಂಡರು. ಮಹಾವಿದ್ಯಾಲಯದಿಂದ ಬಿಎಸ್ಸಿಯಲ್ಲಿ 370ರಲ್ಲಿ 316, ಬಿಸಿಎ 144ರಲ್ಲಿ 124, ಎಂಎಸ್ಸಿ ಕಂಪ್ಯೂಟರ್ ಸೈನ್ಸ್ 2ಕ್ಕೆ 2, ಎಂಎಸ್ಸಿ ಬಯೋಟೆಕ್ನಾಲಜಿ 9ಕ್ಕೆ 9, ಕೆಮೆಸ್ಟ್ರಿ 16ಕ್ಕೆ 12, ಫಿಜಿಕ್ಸ್ 4ಕ್ಕೆ 4 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಸಾಧನೆ ಮಾಡಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.