ಚಿಕ್ಕಬಳ್ಳಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಸ್ತು, ಸ್ವತ್ಛತೆ, ಸೇವೆ, ದೇಶಭಕ್ತಿ ಮೂಡಿಸುವ ಅನೇಕ ಚಟುವಟಿಕೆಗಳನ್ನು ಮಾಡುತ್ತಿದ್ದು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ದೇಶ ಭಕ್ತಿ ಚಿಂತನೆ ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ತಿಳಿಸಿದರು.
ನಗರದ ಜೂನಿಯರ್ ಕಾಲೇಜು ಆವರಣದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಜಿಲ್ಲೆಯ ಸ್ಕೌಟ್ಸ್-ಗೈಡ್ಸ್ ಮಕ್ಕಳಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಉತ್ತಮ ನಾಯಕರಾಗಿ: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಾಕಷ್ಟು ಶ್ರಮ ವಹಿಸುತ್ತಿದ್ದು, ವಿದ್ಯಾರ್ಥಿಗಳು ದೇಶಿಯ ಚಿಂತನೆ ಮೈಗೂಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ನಾಯಕರಾಗಿ ಬೆಳೆಯಬೇಕೆಂದರು. ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬರಬೇಕಾದರೆ ಶಿಸ್ತು, ಸಂಯಮ ಬಹಳ ಮುಖ್ಯ. ವಿದ್ಯಾರ್ಥಿಗಳು ಯಾವುದೇ ಸ್ಪರ್ಧೆಯಲ್ಲಿ ಕ್ರೀಡಾ ಸ್ಪೂರ್ತಿಯಿಂದ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದರು.
ಉತ್ತಮ ಸಾಧನೆ ಮಾಡಿ: ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಸಿ.ಬಿ.ಪ್ರಕಾಶ್, ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ದೇಶಭಕ್ತಿ ಗೀತಗಾಯನ ಸ್ಪರ್ಧೆ ಆಯೋಜಿಸಲಾಗುತ್ತಿದೆ. ತಾಲೂಕು ಹಂತದಲ್ಲಿ ವಿಜೇತರಾಗಿ ಜಿಲ್ಲಾ ಹಂತದಲ್ಲಿ ಸೋತ ಮಕ್ಕಳು ಧೃತಿಗೆಡದೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಾಧನೆ ಮಾಡಬೇಕೆಂದರು.
ಜಿಲ್ಲಾ ಗೈಡ್ ಆಯುಕ್ತರಾದ ಮಂಜುಳ ಡಿ.ವಗ್ಗಾರ್, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಶಿವಪುತ್ರಪ್ಪ ಬೂತಲ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಅರುಣ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮನೋಹರ್, ಜಿಲ್ಲಾ ಗೈಡ್ಸ್ ತರಬೇತಿ ಆಯುಕ್ತರಾದ ಅಕ್ಕಯಮ್ಮ, ಗುಡಿಬಂಡೆ ತಾಲೂಕು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ನಾಗಲಿಂಗಪ್ಪ, ಜಿಲ್ಲಾ ಸಂಘಟಕರಾದ ಜೆ.ತಿಮ್ಮರಾಜು, ತೀರ್ಪುಗಾರರಾದ ಭಾರತಿ, ಮಂಜುಳಾ, ಜಿಲ್ಲೆಯ ಸ್ಕೌಟರ್ ಮತ್ತು ಗೈಡರ್ ಇದ್ದರು.
ಗುಡಿಬಂಡೆ ಪ್ರಜಾ ವಿದ್ಯಾಸಂಸ್ಥೆ ಮೊದಲು: ಗೀತಗಾಯನ ಸ್ಪರ್ಧೆಯ ಸ್ಕೌಟ್ಸ್ ವಿಭಾಗದಲ್ಲಿ ಗುಡಿಬಂಡೆ ತಾಲೂಕಿನ ಪ್ರಜಾ ವಿದ್ಯಾ ಸಂಸ್ಥೆ ಶಾಲೆ ಪ್ರಥಮ ಸ್ಥಾನ, ಚಿಂತಾಮಣಿ ತಾಲೂಕಿನ ಕೆ.ರಾಗುಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆ ದ್ವಿತೀಯ, ತೃತೀಯ ಸ್ಥಾನವನ್ನು ಬ್ರೆçಟ್ ಶಾಲೆ ತಂಡ ಪಡೆದು ಕೊಂಡಿತು. ಗೈಡ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ವಿದ್ಯಾನಿಧಿ ಪಬ್ಲಿಕ್ ಶಾಲೆ ಗೌರಿಬಿದನೂರು, ದ್ವಿತೀಯ ಸ್ಥಾನ ನವೋದಯ ಶಾಲೆ ಶಿಡ್ಲಘಟ್ಟ ಹಾಗೂ ಸಂತ ಜೋಸೆಫರ ಕಾನ್ವೆಂಟ್ ಚಿಕ್ಕಬಳ್ಳಾಪುರ ತೃತೀಯ ಸ್ಥಾನ ಪಡೆದುಕೊಂಡಿತು. ಪ್ರತಿ ತಂಡದಲ್ಲಿ 08 ಮಕ್ಕಳಂತೆ ಒಟ್ಟು 140 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.