ಮೂಡುಬಿದಿರೆ: ಸರಕಾರ ತಪ್ಪು ಮಾಡಿದಾಗ ಅದನ್ನು ಸರಿದಾರಿಗೆ ತರುವಂಥ ಜವಾಬ್ದಾರಿಯುತ ಕೆಲಸವನ್ನು ವಿರೋಧ ಪಕ್ಷದವರು ನಿರ್ವಹಿಸಬೇಕು. ಶಾಲಾ ಮಂತ್ರಿಮಂಡಲ ಇಂಥ ಚಟುವಟಿಕೆಗಳನ್ನು ನಡೆಸುವ ಮೂಲಕ ಪ್ರಜಾಪ್ರಭುತ್ವ, ಸರಕಾರಿ ವ್ಯವಸ್ಥೆಗಳ ಕುರಿತಾದ ಪರಿಜ್ಞಾನವನ್ನು ಮಕ್ಕಳು ಪಡೆಯಬಹುದು. ಇದಕ್ಕೆ ಶಿಕ್ಷಕರು ಸೂಕ್ತ ತರಬೇತಿ ನೀಡಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಮಾಸ್ತಿಕಟ್ಟೆ ಸ.ಹಿ.ಪ್ರಾ. ಶಾಲಾ ಮಂತ್ರಿಮಂಡಲವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ದಾನಿಗಳು ನೀಡಿರುವ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಉತ್ತಮ ವಿದ್ಯೆ ಗಳಿಸಿ ಮುಂದೆ ನೀವೂ ದಾನಿಗಳಾಗಿ ಅಶಕ್ತರ ಶಿಕ್ಷಣಾಕಾಂಕ್ಷೆಗೆ ಪೂರಕವಾಗಿ ಸ್ಪಂದಿಸುವಂತಾಗಬೇಕು ಎಂದು ಕರೆ ನೀಡಿದರು.
ಇತ್ತೀಚೆಗೆ ತಂದೆಯನ್ನು ಕಳೆದು ಕೊಂಡಿರುವ ವಿದ್ಯಾರ್ಥಿನಿ ಅನನ್ಯಾ ಅವರಿಗೆ ದಾನಿ ಪ್ರಸಾದ್ ಕುಮಾರ್ ನೀಡಿರುವ 5,000 ರೂ. ಮೌಲ್ಯದ ಚೆಕ್ಕನ್ನು ಶಾಸಕರು ಹಸ್ತಾಂತರಿಸಿದರು.
ನೋಟ್ಪುಸ್ತಕ ದಾನಿಗಳಾದ ವಾರ್ಡ್ ನ ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಮತ್ತು ಉದ್ಯಮಿ ಪದ್ಮಲತಾ ರಾಜೇಂದ್ರ ಕುಮಾರ್, ನಿವೃತ್ತ ಸೈನಿಕ ಪ್ರಭಾಕರ ಶೆಟ್ಟಿ, ಉದ್ಯಮಿ ಪೃಥ್ವಿರಾಜ್ ಜೈನ್ ಮುಖ್ಯ ಅತಿಥಿಗಳಾಗಿದ್ದರು.
ಎಸ್‌ಡಿಎಂಸಿ ಅಧ್ಯಕ್ಷ ಸೆಲ್ವಕುಮಾರ್, ಉಪಾಧ್ಯಕ್ಷೆ ಪ್ರಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸೇಸಮ್ಮ ಬಿ. ಸ್ವಾಗತಿ ಸಿದರು. ಶಿಕ್ಷಕಿ ಮೋಹಿನಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಗೀತಾ ನಿರೂಪಿಸಿದರು. ಅಕ್ಷತಾ ವಂದಿಸಿದರು.