ಚನ್ನಪಟ್ಟಣ: ಭವಿಷ್ಯದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳು ಪರಿಸರ ಹಾಗೂ ಪ್ರಕೃತಿ ರಕ್ಷಣೆಯಲ್ಲಿ ಮಹತ್ತರ ಜವಾಬ್ದಾರಿ ವಹಿಸಬೇಕಿದೆ ಎಂದು ಟಯೊಟಾ ಹಾಗೂ ಕಿಲೊರ್ಸ್ಕರ್ ಮೋಟಾರ್ ಘಟಕ 1ರ ವ್ಯವಸ್ಥಾಪಕ ರೇಣುಕಾ ಪ್ರಸಾದ್ ಹೇಳಿದರು.
ಪಟ್ಟಣದ ಹನುಮಂತ ನಗರದ ಸರ್ಕಾರಿ ಕಿರಿಯ ಮಾದರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ನಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಪ್ರಸಕ್ತ ದಿನಗಳಲ್ಲಿ ನಾವು ಸೇವಿಸುತ್ತಿರುವ ಆಹಾರದಿಂದ ಪ್ರಾರಂಭವಾಗಿ ಕುಡಿಯುವ ನೀರು, ಗಾಳಿಯೂ ವಿಷಮಿಶ್ರೀತದಿಂದ ಕೂಡಿರುವುದು ಅನಾರೋಗ್ಯ ಬರಲು ಕಾರಣವಾಗಿದೆ. ಪ್ರಕೃತಿಯನ್ನು ನಾಶಪಡಿಸುತ್ತಿರುವುದರಿಂದಲೇ ಈ ರೀತಿಯ ಅವ್ಯವಸ್ಥೆ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದುರಾಸೆಗೆ ಪ್ರಕೃತಿಗೆ ಕೊಡಲಿ: ವ್ಯವಸ್ಥಾಪಕ ಅಜಯ್‌ಸಿಂಗ್ ಮಾತನಾಡಿ, ವರ್ಷಗಳ ಹಿಂದೆ ಭೂಮಿಯ ಮೇಲೆ ಸುರಿಯುತ್ತಿದ್ದ ಮಳೆಯ ಪ್ರಮಾಣ ಹೇರಳವಾಗಿತ್ತು. ಪ್ರಕೃತಿ ಸಂಪತ್ತು ಹೇರಳವಾಗಿತ್ತು. ಆದರೆ, ಮನುಷ್ಯ ಬುದ್ಧಿವಂತನಾದಂತೆಲ್ಲಾ ತನ್ನ ಐಷಾರಾಮಿ ಜೀವನ ಹಾಗೂ ಹಣದ ದುರಾಸೆಗೆ ಪ್ರಕೃತಿಗೆ ಕೊಡಲಿ ಹಾಕಿದ ಪರಿಣಾಮವೇ ಇಂದು ಮಳೆಯ ಕೊರತೆ ಎದುರಾಗಿ ಪ್ರಕೃತಿಯ ಜೊತೆ ಮಾನವನು ಕೂಡ ಅವನತಿಯನ್ನು ಕಾಣಬಹುದಾಗಿದೆ. ದೇಶದ ರಕ್ಷಣೆ ಹಾಗೂ ಸಂಪತ್ತನ್ನು ಪೋಷಣೆ ಮಾಡಬೇಕಾದ ಕಾಳಜಿ ಹೊಂದಬೇಕಾಗಿರುವ ವಿದ್ಯಾರ್ಥಿಗಳು, ಪ್ರಕೃತಿ ರಕ್ಷಣೆಯನ್ನು ಮಾಡುವುದರ ಮುಖಾಂತರ ಮುಂದೊಂದು ದಿನ ನಡೆಯ ಬೇಕಿದ್ದ ಘೋರ ದುರಂತವನ್ನು ತಪ್ಪಿಸಬೇಕಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ:ಸಹಾಯಕ ವ್ಯವಸ್ಥಾಪಕ ಮಹೇಶ್ ಗಾಣಿಗೇರ್ ಮಾತನಾಡಿ, ಗುಣಮಟ್ಟದ ಶಿಕ್ಷಣವನ್ನು ನೀಡುವ ಶಿಕ್ಷಣ ಸಂಸ್ಥೆಗಳೆಂದರೆ ಅದು ಸರ್ಕಾರಿ ಶಾಲೆಗಳು. ನುರಿತ ಬೋಧಕರನ್ನು ಹೊಂದಿರುವ ಸರ್ಕಾರಿ ಶಾಲೆಗಳಲ್ಲಿ ಅನೇಕ ಮಹಾನೀಯರು ವಿದ್ಯಾಭ್ಯಾಸ ಮಾಡಿದ್ದಾರೆ ಎಂದರು.
ಘಟಕದ ಅಧಿಕಾರಿ ವೆಂಕಟರಮಣಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ರಾಜು, ಸಹಶಿಕ್ಷಕಿ ಇಂದ್ರಮ್ಮ, ಸೂರ್ಯನಾರಾಯಣ್, ಹರಿಪ್ರಸಾದ್, ಬಸವರಾಜ್, ಬಸವರಾಜ್ ಹೊಸಮಣೆ, ಅಂಜನೇಯ ಸ್ವಾಮಿ ದೇವಾಲಯದ ಅಧ್ಯಕ್ಷ ಶಿವರಾಮೇಗೌಡ, ಸಮಾಜ ಸೇವಕ ಟೈಲರ್ ಮಹೇಶ್, ಅಶ್ವಥ್, ಚಿಕ್ಕಣ್ಣಪ್ಪ, ಕಾಂತರಾಜು ಹಾಗೂ ಚನ್ನಪಟ್ಟಣ ಲೀಡರ್ ಅಕಾಡೆಮಿಯ ತಂಡ ಹಾಜರಿದ್ದರು.