ಮೈಸೂರು: ರಾಷ್ಟ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಎಲ್ಲಾ ಆಯಾಮಗಳು ವಿಫಲವಾಗಿದ್ದು, ಸಮಾಜದ ಪರಿವರ್ತಕರಾಗಿ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದನ್ನು ಆದರ್ಶವಾಗಿಸಿಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಹೇಳಿದರು.
ಹುಲಗಾದ್ರಿ ಟ್ರಸ್ಟ್ ಹಾಗೂ ಅಮೆರಿಕದ ನಿವಾಸಿ ಡಾ ಮೀರಾ ಸ್ವಾನಾಥನ್ ಇವರ ಸಹಭಾಗಿತ್ವದಲ್ಲಿ ನಗರದ ಎನ್‌ಐಇ ಡೈಮೆಂಡ್ ಜ್ಯುಬಲಿ ನ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಬೃಹತ್ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ವಿಫಲಾವಾಗಿವೆ.
ಪ್ರಜಾಪ್ರಭುತ್ವದ ಆಶಯಗಳನ್ನೇ ಅಲುಗಾಡಿಸಿದ್ದು, ಅಮೂಲಾಗ್ರವಾದ ಬದಲಾವಣೆಯೊಂದೇ ದೇಶದ ಆಶಾಕಿರಣವಾಗಿದೆ ಎಂದರು. ದೇಶದಲ್ಲಿ 30 ವರ್ಷಗಳ ಹಿಂದೆ 36 ಎಂಜಿನಿಯರಿಂಗ್ ಕಾಲೇಜುಗಳು ಮಾತ್ರವೇ ಇತ್ತು. ಆದರೆ, ಇಂದು 10,900 ಎಂಜನಿಯರಿಂಗ್ ಕಾಲೇಜುಗಳಿದ್ದು, ಪ್ರತಿವರ್ಷ 16 ಲಕ್ಷ ಮಂದಿ ಎಂಜಿನಿಯರಿಂಗ್ ಪದವಿ ಪಡೆದು ಹೊರಬರುತ್ತಿದ್ದಾರೆ.
ಅವರಲ್ಲಿ ನಿಜವಾದ ಅರ್ಹತೆ ಇರುವ ಶೇ.17 ಮಾತ್ರವಿದ್ದು, ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಅಲ್ಲದೇ ಎಲ್ಲರೂ ವೈದ್ಯರು, ಎಂಜಿನಿಯರ್ ಆಗಬೇಕೆಂದರೆ ಸಂಶೋಧಕರಾಗುವವರು ಯಾರು ಎಂದು ಪ್ರಶ್ನಿಸಿದರು. ದೇಶದಲ್ಲಿ ಸಂಶೋಧಕರ ಕೊರತೆ ಇದೆ ಎಂಬುದನ್ನು ಅರಿತು ಮುನ್ನಡೆಯುವ ಮೂಲಕ ಸಮಾಜದ ಪರಿವರ್ತಕರಾಗಿ ಸಂಸ್ಕೃತಿಯನ್ನು ಉಳಿಸಿ-ಬೆಳೆಸಲು ನಿಮ್ಮ ಸೇವೆ ಆದರ್ಶವಾಗಲಿ ಎಂದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಮಾತನಾಡಿ, ಇತ್ತೀಚಿಗೆ ಯುವಜನತೆಯ ಹಣದ ವ್ಯಾಮೋಹದಿಂದ ಸಮಾಜವನ್ನು ವೃದ್ಧಾಶ್ರಮದತ್ತ ದೂಡಿದೆ. ಹೀಗಾಗಿ ಯುವಜನತೆ ನಿಮ್ಮ ಬುದ್ಧಿವಂತಿಕೆಯನ್ನು ಹಣಕ್ಕೆ ಮಾರಾಟ ಮಾಡಿಕೊಳ್ಳದೆ, ಸಮಾಜಕ್ಕೆ ಉಪಯೋಗವಾಗುವಂತೆ ನೋಡಿಕೊಳ್ಳಬೇಕಿದೆ. ಜೀವನದಲ್ಲಿ ಅಂಕಗಳಿಕೆ ಎಂಬುದು ಚಿಕ್ಕ ಭಾಗವಾಗಿದ್ದು, ಅಂಕ ಗಳಿಕೆಯನ್ನೇ ಮುಖ್ಯ ಗುರಿಯನ್ನಾಗಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ 1000 ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 60 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಯಿತು. ಶಾಸಕ ಎಸ್.ಎ. ರಾಮದಾಸ್, ಮೈಸೂರು ಮೆಡಿಕಲ್ ಕಾಲೇಜಿನ ನಿವೃತ್ತ ನಿರ್ದೇಶಕಿ ಡಾ. ಗೀತಾ ಅವಧಾನಿ. ಎನ್‌ಐಇ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರ್. ಹುಲಗಾದ್ರಿ ಟ್ರಸ್ಟ್, ಆದರ್ಶ ಸೇವಾ ಸಂಘದ ಮುಖ್ಯಸ್ಥ ಜಿ.ಆರ್.ನಾಗರಾಜ್, ಕಾರ್ಯದರ್ಶಿ ರಾಮಕೃಷ್ಣ, ರಘೋತ್ತಮ, ವೆಂಕಟರಾಮ್ ಇತರರಿದ್ದರು.