ಮಾಗಡಿ: ವಿದ್ಯಾರ್ಥಿ ಜೀವನದಲ್ಲಿಯೇ ರಾಷ್ಟ್ರ ಧ್ವಜದ ಮೌಲ್ಯ ತಿಳಿದುಕೊಳ್ಳಬೇಕು. ದೇಶಭಕ್ತಿ ದೇಶ ಪ್ರೇಮ ಬೆಳೆಸಿಕೊಳ್ಳುವ ಸಾಮಾಜಿಕ ಜವಾಬ್ದಾರಿ ಹಾಗೂ ಬದ್ಧತೆ ಮರೆಯಬೇಕು ಎಂದು ಶಾಸಕ ಎ. ಮಂಜುನಾಥ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ 75ನೇ ಸ್ವಾತಂತ್ರೊತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಮನೆ ಮನೆಗೆ ತಿರಂಗ ಧ್ವಜ ವಿತರಣಾ ಸಮಾರಂಭದಲ್ಲಿ ಮಾತ ನಾಡಿದ ಅವರು, ಲಕ್ಷಾಂತರ ಮಹಾನೀಯರ ತ್ಯಾಗ ಬಲಿದಾನದಿಂದ ಪಡೆದಿರುವ ಸ್ವಾತಂತ್ರ್ಯ ವನ್ನು ಸದೃಢವಾಗಿ ಕಟ್ಟಿಕೊಂಡು ಬರಲಾಗುತ್ತಿದೆ. ಈ ದೇಶದ ಪ್ರತಿಯೊಬ್ಬ ನಾಗರಿಕರು ರಾಷ್ಟ್ರಧ್ವಜಕ್ಕೆ ಗೌರವ ಕೊಡುವ ಗುರುತರ ಜವಾಬ್ದಾರಿ ಇರಬೇಕು ಎಂದರು.
ಯುವಶಕ್ತಿಯ ಭವಿಷ್ಯಕ್ಕಾಗಿ ಕೈಗಾರಿಕೆ ಸ್ಥಾಪನೆ: ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡುತ್ತಿರುವುದು ನನ್ನ ಭವಿಷ್ಯಕ್ಕಲ್ಲ, ಈ ತಾಲೂಕಿನ ಲಕ್ಷಾಂತರ ಯುವಶಕ್ತಿಯ ಭವಿಷ್ಯಕ್ಕಾಗಿ ಶ್ರಮ ವಹಿಸುತ್ತಿರುವುದು. ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಇರಬೇಕು. ಇದಕ್ಕಾಗಿ ನಾನು ಹೋರಾಟ ಸಂಕಲ್ಪ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಸಿಕ್ಕರೆ, ಅವರ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂಬ ಸಂಕಲ್ಪದಿಂದ ತಾಲೂಕಿನಲ್ಲಿ ಜಿಟಿಡಿಸಿ ತರಬೇತಿ ಸಂಸ್ಥೆ ತೆರೆಯಲಾಗುತ್ತಿದೆ ಎಂದರು.
ಶಾಲಾ ಕೊಠಡಿ ನಿರ್ಮಾಣಕ್ಕೆ ಒತ್ತು: ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್‌ಗೆ ಸೇರಿದ್ದು, ಬಿ ಗ್ರೇಡ್ ಪಡೆದುಕೊಂಡಿದೆ. ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಟಯೋಟಾ ವತಿಯಿಂದ ಹೈಟೆಕ್ ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಒದಗಿಸುತ್ತಿದ್ದೇನೆ ಎಂದು ತಿಳಿಸಿದರು.
ಪ್ರಾಂಶುಪಾಲ ಕೆ.ಟಿ.ರಮೇಶ್ ಮಾತನಾಡಿ ದರು. ಪ್ರಾಧ್ಯಾಪಕಿ ಡಾ.ಸುಷ್ಮಾ ಕಾರ್ಯಕ್ರಮಗಳ ಕುರಿತು ಪರಿಚಯಿಸಿದರು. ಪ್ರಾಧ್ಯಾಪಕ ಶಿವ ಪ್ರಸಾದ್ ಉಪ್ರಾಸ್ತಾವಿಕವಾಗಿ ಮಾತನಾಡಿ ದರು.75ನೇ ವರ್ಷದ ಅಮೃತ ಮಹೋತ್ಸವದ ಪ್ರಯುಕ್ತ ನಡೆದ ಎನ್‌ಎಸ್ ಎಸ್ ವಿದ್ಯಾರ್ಥಿಗಳಿಗೆ ಶಾಸಕರು ಪ್ರಶಸ್ತಿ ಪ್ರದಾನ ಮಾಡಿದರು.ತಾಲೂಕು ಜೆಡಿಎಸ್ ಉಪಾಧ್ಯಕ್ಷ ಎಂ. ಕೆಂಪೇಗೌಡ, ಯುವ ಅಧ್ಯಕ್ಷ ವಿಜಯಕುಮಾರ್, ಪ್ರಾಧ್ಯಾಪಕ ಎಸ್. ಮಂಜುನಾಥ್, ಚಿದಾನಂದ್, ಡಾ. ಗುರುಮೂರ್ತಿ, ಡಾ.ಭವಾನಿ, ಸೀಮಾ ಕೌಸರ್ ,ಚಂದ್ರಪ್ರಭಾ, ವೀಣಾ, ರೂಪಶ್ರೀ ಇದ್ದರು.