ನಗರ: ವಿಶ್ವ ಪರಿಸರ ದಿನದಂದೇ ಬರುವ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಪುತ್ತೂರು ಸಹಾಯಕ ಕಮಿಷನರ್ ವಿಶೇಷವಾಗಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ. ಪುತ್ತೂರಿನ ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಹಾಗೂ ಜಯಾ ಕೃಷ್ಣಮೂರ್ತಿ ಅವರು ತಮ್ಮ ದಾಂಪತ್ಯ ಜೀವನದ 13ನೇ ವಾರ್ಷಿಕೋತ್ಸವವನ್ನು ಸರಳವಾಗಿ ಮತ್ತು ಮಾದರಿಯಾಗಿ ಆಚರಿಸಿ ಕೊಂಡಿದ್ದಾರೆ. ವಿದ್ಯಾರ್ಥಿನಿಯೊಬ್ಬಳ ಕೋರಿಕೆಯಂತೆ ಇಬ್ಬರೂ ಆಕೆಯ ಮನೆಗೆ ಹೋಗಿ ಮನೆಯಂಗಳದಲ್ಲಿ ಗಿಡ ನೆಟ್ಟು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಈ ವಿದ್ಯಾರ್ಥಿಗಳ ಪೈಕಿ ಹಾರಾಡಿಯ ನೇಹಾ ಎಂಬ ವಿದ್ಯಾರ್ಥಿನಿ ಮೂರು ತಿಂಗಳ ಹಿಂದೆ ನಮ್ಮ ಮನೆಗೆ ಸಹಾಯಕ ಆಯುಕ್ತರು ಬಂದು ಗಿಡ ನೆಟ್ಟು ಪರಿಸರ ದಿನ ಆಚರಿಸಬೇಕೆಂದು ಮನವಿ ಮಾಡಿಕೊಂಡಿದ್ದಳು. ಪರಿಸರ ದಿನಾಚರಣೆಯಂದೇ ತಮ್ಮ ವಿವಾಹ ವಾರ್ಷಿಕೋತ್ಸವವೂ ಇದ್ದ ಕಾರಣ ಅವರು ನೇಹಾ ಅವರ ಮನೆಗೆ ಹೋಗಿ, ಗಿಡ ನೆಟ್ಟು ಖುಷಿಪಟ್ಟರು.
ಮಲೆನಾಡಿನ ಸುಂದರ ಪರಿಸರ ದಲ್ಲಿ ಸಸ್ಯ ಪ್ರಭೇದಗಳು ವಿರಳ ವಾಗುತ್ತಿವೆ. ಪರಾಗಸ್ಪರ್ಶದ ಕೊರತೆಯಿಂದ ಸಸ್ಯ ಸಂಪತ್ತು ವೃದ್ಧಿಸುತ್ತಿಲ್ಲ. ಇಂತಹ ಸಂದರ್ಭ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸಮಾರಂಭಗಳನ್ನು ಸಸಿ ನೆಡಲು ನೆಪವಾಗಿ ಬಳಸಿಕೊಳ್ಳುವುದು ಉಪ ಯುಕ್ತವೂ ಆಗಿದೆ. ನಾನು ಅಂದು ಪ್ರತಿ ವಿದ್ಯಾರ್ಥಿನಿಯರಿಗೆ ತಲಾ 5ರಂತೆ ಹಣ್ಣಿನ ಗಿಡಗಳನ್ನು ಕೊಟ್ಟಿದ್ದೆ. ನಾನು ಕೊಟ್ಟ ಗಿಡಗಳನ್ನು ಉತ್ತಮವಾಗಿ ಬೆಳೆಸಿದ್ದಾರೆ. ಇಂತಹ ಕಾಳಜಿ ಎಲ್ಲರಿಗೂ ಬರಬೇಕು ಎಂದು ಎಚ್.ಕೆ. ಕೃಷ್ಣಮೂರ್ತಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಮನವಿಗೆ ಸ್ಪಂದನೆ
ಕಳೆದ ವರ್ಷ ಪುತ್ತೂರು, ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ಮರಗಳ ತೆರವು ಮಾಡುವ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿನಿಯರು ಮರಗಳನ್ನು ತೆರವು ಮಾಡದಂತೆ ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ರಸ್ತೆ ವಿಸ್ತರಣೆ ವೇಳೆ ಮರ ತೆಗೆಯುವುದು ಅನಿವಾರ್ಯ ಆದ್ದರಿಂದ ವಿದ್ಯಾರ್ಥಿನಿಯರಿಗೆ ಉತ್ತಮ ಜಾತಿಯ 45 ಹಣ್ಣಿನ ಗಿಡಗಳನ್ನು ಕೊಟ್ಟು ಸಹಾಯಕ ಆಯುಕ್ತರು ವಿದ್ಯಾರ್ಥಿಗಳ ಕಾಳಜಿಗೆ ಖುಷಿ ಪಟ್ಟಿದ್ದರು.