Advertisement

ಕುರ್ನಾಡು ದತ್ತು ಗ್ರಾಮದಲ್ಲಿ 620 ಕೆ.ಜಿ. ಭತ್ತ ಬೆಳೆದ ವಿದ್ಯಾರ್ಥಿಗಳು

09:32 PM Nov 13, 2019 | mahesh |

ಬಂಟ್ವಾಳ: ಸಾಮಾನ್ಯವಾಗಿ ವಿದ್ಯಾರ್ಥಿ ಗಳ ಪಠ್ಯೇತರ ಚಟುವಟಿಕೆಯ ಭಾಗವಾಗಿ ಕೃಷಿ ಪಾಠವನ್ನು ಮಾಡಲಾಗುತ್ತದೆ. ಆದರೆ ಅದು ಒಂದು ದಿನಕ್ಕೆ ಸೀಮಿತವಾಗಿ ಬಳಿಕ ವಿದ್ಯಾರ್ಥಿಗಳು ಅದನ್ನು ಮರೆತು ಬಿಡುತ್ತಾರೆ. ಆದರೆ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ತಾನು ದತ್ತು ಸ್ವೀಕರಿಸಿದ ಕುರ್ನಾಡು ಗ್ರಾಮದ ಗದ್ದೆಯೊಂದರಲ್ಲಿ ಬೇಸಾಯ ಮಾಡಿ ಬರೋಬ್ಬರಿ 620 ಕೆ.ಜಿ. ಭತ್ತ ಬೆಳೆದಿದೆ.

Advertisement

ಮಳೆಗಾಲ ಆರಂಭದಲ್ಲಿ ಗದ್ದೆಯಲ್ಲಿ ಕಂಡಡೊಂಜಿ ದಿನ ಕಾರ್ಯಕ್ರಮದ ಮೂಲಕ ಸಂಭ್ರಮಿಸಿದ ವಿದ್ಯಾರ್ಥಿಗಳು ಬಳಿಕ ಭತ್ತದ ಬೇಸಾಯದ ಸಂಕಲ್ಪದೊಂದಿಗೆ ಉಳುಮೆ ಕಾಯಕದಲ್ಲಿ ತೊಡಗಿದ್ದಾರೆ. ಪ್ರಾಂಶುಪಾಲ ಪ್ರೊ| ಜೀವನ್‌ದಾಸ್‌ ಮಾರ್ಗದರ್ಶನದಲ್ಲಿ ಎನ್ನೆಸ್ಸೆಸ್‌ ಯೋಜನಾಧಿಕಾರಿ ಅಶೋಕ್‌ ಎಸ್‌., ಸಹ ಶಿಬಿರಾಧಿಕಾರಿ ಪ್ರವೀಣ್‌ ಪಿ. ನೇತೃತ್ವದಲ್ಲಿ ಎನ್ನೆಸ್ಸೆಸ್‌ ಸ್ವಯಂಸೇವಕರು ಈ ಕಾರ್ಯವನ್ನು ಮಾಡಿದ್ದಾರೆ. ಕಾಲೇಜನ್ನು ಬಿಟ್ಟು, ಹೊರಪ್ರಪಂಚದಲ್ಲಿ ಬಿಸಿಲನ್ನು ಲೆಕ್ಕಿಸದೇ ಗದ್ದೆ ಯಲ್ಲಿ ಕಾರ್ಯ ನಿರ್ವ ಹಿಸಿದ ವಿದ್ಯಾರ್ಥಿಗಳು ಶ್ರಮ ವಹಿಸಿದ್ದರು. ಅನುಭವವಿಲ್ಲದಿದ್ದರೂ ಧೂಳು ರಾಚ ದಿರಲೆಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೈರನ್ನು ಬಡಿದರು. ಭತ್ತ ಪ್ರತ್ಯೇಕಿಸಲ್ಪಟ್ಟು ಬಿದ್ದಾಗ ಸಂತಸಪಟ್ಟರು. ಭತ್ತದ ಕೃಷಿ ಯನ್ನು ತಾವೇ ಮಾಡಿ, ಸಂತೃಪ್ತಿ ಹೊಂದಿದರು.

ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆ ಶ್ರೀ ಭಾರತೀ ಸಮೂಹ ಸಂಸ್ಥೆಯ ಈ ಎನ್ನೆಸ್ಸೆಸ್‌ ಘಟಕವು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಯವರಿಗೆ 5 ಸೇರು ಭತ್ತವನ್ನು ಸಮರ್ಪಿಸಿ, ಉಳಿದ ಬೆಳೆಯನ್ನು ಎನ್ನೆಸ್ಸೆಸ್‌ ವಾರ್ಷಿಕ ವಿಶೇಷ ಶಿಬಿರ ಹಾಗೂ ಬಿಸಿಯೂಟ ಯೋಜನೆಗೆ ಬಳಸಲು ನಿರ್ಧರಿಸಿದೆ. 618 ಕೆ.ಜಿ. ಭತ್ತ ಅಂದರೆ 360 ಕೆ.ಜಿ. ಅಕ್ಕಿಯನ್ನು ತಾವೇ ಕೈಯಾರೆ ಬೆಳೆಸಿದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಎಂಆರ್‌ 4, ಭದ್ರಾ ತಳಿಯ ಬೇಸಾಯ
ಸುಮಾರು ಅರ್ಧ ಎಕ್ರೆ ವಿಸ್ತೀರ್ಣದ ಗದ್ದೆಯಲ್ಲಿ ಎಂಆರ್‌4 ಹಾಗೂ ಭದ್ರಾ ತಳಿಯನ್ನು ವಿದ್ಯಾರ್ಥಿಗಳು ಬೇಸಾಯ ಮಾಡಿದ್ದರು. ಮಕ್ಕಳೇ ನೇಜಿ ನೆಟ್ಟು ಗೊಬ್ಬರ ಹಾಕಿದ್ದು, ಸಂಸ್ಥೆಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್‌ ಗೊಬ್ಬರ ಒದಗಿಸಿದ್ದರು. ಭತ್ತದ ಪೈರು ಬೆಳೆಯುತ್ತಿದ್ದಂತೆ ಗದ್ದೆಗೆ ಆಗಾಗ ಭೇಟಿ ನೀಡಿ, ಕಳೆ ಕೀಳುವ ಕಾಯಕ ಮಾಡುತ್ತಿದ್ದರು.

ಬಲಿತು ಒಣಗಿದ್ದ ತೆನೆಗಳನ್ನು ಕೆಲವು ದಿನಗಳ ಹಿಂದೆ ಕಟಾವು ಮಾಡಲು ಯೋಚಿಸಿದ್ದರು. ಅನುಭವಿ ಕಾರ್ಮಿಕರ ಸಹಾಯಕ್ಕೂ ಮನವಿ ಮಾಡಿದ್ದರು. ಆದರೆ ವಿದ್ಯಾರ್ಥಿಗಳು ಹಿಂದಿನ ದಿನ ಪರೀಕ್ಷೆ ಮುಗಿಸಿ, ಗದ್ದೆಗಿಳಿಯುವ ಹೊತ್ತಿಗೆ ಕಾರ್ಮಿಕರು ಬಂದಿರಲಿಲ್ಲ. ಪ್ರಾಂಶುಪಾಲರು, ಶಿಬಿರಾಧಿಕಾರಿಗಳು, ಮಕ್ಕಳು ಹಿಂಜರಿಯಲಿಲ್ಲ. ಕೊಯ್ಲನ್ನು ಎರಡು ದಿನಗಳಲ್ಲಿ ಮುಗಿಸಿದರು.

Advertisement

ವಿಶೇಷ ಶ್ರಮ ವಹಿಸಿದ್ದಾರೆ
ಬೇಸಾಯ ಕಾರ್ಯದಲ್ಲಿ ಎನ್ನೆಸ್ಸೆಸ್‌ ಸ್ವಯಂಸೇವಕರು ವಿಶೇಷವಾಗಿ ಶ್ರಮಿಸಿದ್ದಾರೆ. ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಅವರೆಲ್ಲರಿಗೆ ಆದ ಸಂತೋಷ, ಆನಂದ ನನಗೆ ಖುಷಿಯನ್ನು ತಂದುಕೊಟ್ಟಿದೆ. ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮ ಪರಂಪರೆಯನ್ನು, ಹಿರಿಯರು ಹಾಕಿಕೊಟ್ಟ ಮಾರ್ಗವನ್ನು ಅರಿತು ಬಾಳಿದಾಗ ಜೀವನ ಯಶಸ್ವಿಯಾಗುತ್ತದೆ.
 -ಪ್ರೊ| ಜೀವನ್‌ದಾಸ್‌, ಪ್ರಾಂಶುಪಾಲರು, ಶ್ರೀ ಭಾರತೀ ಪದವಿ ಕಾಲೇಜು

 ಅತೀವ ಸಂತಸ ತಂದಿದೆ
ಎನ್ನೆಸ್ಸೆಸ್‌ ಘಟಕವು ಒಂದು ಗ್ರಾಮವನ್ನು ದತ್ತು ಸ್ವೀಕರಿಸಬೇಕು ಎಂಬ ನಿಯಮವಿದೆ. ಅಲ್ಲಿ ಇಂತಹ ಕಾರ್ಯ, ವಿವಿಧ ಉಚಿತ ಶಿಬಿರಗಳನ್ನು ಆಯೋಜಿಸಬೇಕು. ಇಲಾಖೆಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಿದ್ದೇವೆ. ಭತ್ತದ ಬೆಳೆಯ ಸಾಧನೆ ಅತೀವ ಆನಂದವನ್ನು ತಂದಿದೆ.
-ಅಶೋಕ್‌ ಎಸ್‌., ಎನ್ನೆಸ್ಸೆಸ್‌ ಯೋಜನಾಧಿಕಾರಿ, ಉಪನ್ಯಾಸಕರು, ಶ್ರೀ ಭಾರತೀ ಪದವಿ ಕಾಲೇಜು.

- ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next