Advertisement

ಬಸ್‌ ದಾರಿ ಮರೆತ ವಿದ್ಯಾರ್ಥಿಗಳು

01:32 AM Sep 07, 2019 | Lakshmi GovindaRaju |

ಬೆಂಗಳೂರು: ಮೆಟ್ರೋ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳು, ದ್ವಿಚಕ್ರ ವಾಹನಗಳ ಭರಾಟೆಯಲ್ಲಿ ಸಾಮಾನ್ಯ ಪ್ರಯಾಣಿಕರು ಮಾತ್ರವಲ್ಲ; ರಿಯಾಯ್ತಿ ಪಾಸುಗಳನ್ನು ಪಡೆಯುವ ವಿದ್ಯಾರ್ಥಿಗಳು ಕೂಡ ಬಿಎಂಟಿಸಿ ಬಸ್‌ಗಳಿಂದ ವಿಮುಖರಾಗುತ್ತಿದ್ದಾರೆ. ಹೀಗೆ ಕಾಯಂ ಪ್ರಯಾಣಿಕ ವರ್ಗವೊಂದು ದೂರ ಉಳಿಯುತ್ತಿರುವುದು ಸಂಸ್ಥೆಯ ನಿದ್ದೆಗೆಡಿಸಿದೆ.

Advertisement

ಒಂದೆಡೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಆಗುತ್ತಿದೆ. ಆದರೆ, ಇದೇ ಗತಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಪಡೆಯುವ ರಿಯಾಯ್ತಿ ಪಾಸುಗಳನ್ನು ಪಡೆಯುವವರ ಸಂಖ್ಯೆ ಬೆಳೆಯುತ್ತಿಲ್ಲ. ಬದಲಿಗೆ ಕಡಿಮೆ ಆಗುತ್ತಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ, ಸುಮಾರು 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿ ಪಾಸುಗಳ ಸಂಖ್ಯೆ ಖೋತಾ ಆಗಿದೆ. ಇದರೊಂದಿಗೆ ಸರ್ಕಾರದಿಂದ ಬರಬೇಕಾದ ಸಬ್ಸಿಡಿ ಹಣಕ್ಕೂ ಕತ್ತರಿ ಬೀಳಲಿದೆ. ಇದು ಸಂಸ್ಥೆಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

2017ರಲ್ಲಿ ರಿಯಾಯ್ತಿ ಪಾಸುಗಳನ್ನು ಪಡೆದವರ ಸಂಖ್ಯೆ 3.73 ಲಕ್ಷ. 2018ರಲ್ಲಿ ಇದು 3.35 ಲಕ್ಷಕ್ಕೆ ಕುಸಿದಿದ್ದು, ಪ್ರಸಕ್ತ ಸಾಲಿನಲ್ಲಿ ಆಗಸ್ಟ್‌ 30ರವರೆಗೆ 2.97 ಲಕ್ಷ ವಿದ್ಯಾರ್ಥಿಗಳಿಗೆ ಪಾಸು ವಿತರಿಸಲಾಗಿದ್ದು, ಇದು ವರ್ಷಾಂತ್ಯಕ್ಕೆ ಹೆಚ್ಚು-ಕಡಿಮೆ 3.30 ಲಕ್ಷ ದಾಟಲಿದೆ ಎಂದು ಅಂದಾಜಿಸಲಾಗಿದೆ. ಈ ಮಧ್ಯೆ ಬಹುತೇಕರು ಪಾಸುಗಳನ್ನು ಪಡೆದ ಹಿನ್ನೆಲೆಯಲ್ಲಿ ಕೌಂಟರ್‌ಗಳನ್ನು ಕಡಿಮೆ ಮಾಡಲಾಗಿದೆ. ಇನ್ನು ಇದೇ ಮೂರು ವರ್ಷಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಸರ್ಕಾರಿ, ಅನುದಾನಿತ, ಖಾಸಗಿ ಸೇರಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ 2017-18ರಲ್ಲಿ 15.98 ಲಕ್ಷ, 2018-19ರಲ್ಲಿ 16.19 ಲಕ್ಷ ಹಾಗೂ 2019-20ರಲ್ಲಿ 16.10 ಲಕ್ಷ ಸಂಖ್ಯೆ ಇದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಹಾಗಿದ್ದರೆ, ಉಳಿದ ವಿದ್ಯಾರ್ಥಿಗಳು ಯಾವ ಮಾದರಿಯ ಸಾರಿಗೆ ಸೇವೆಯತ್ತ ಮುಖಮಾಡಿರಬಹುದು ಎಂದು ಸಂಸ್ಥೆಯು ಲೆಕ್ಕಾಚಾರ ಹಾಕುತ್ತಿದೆ.

ವಿದ್ಯಾರ್ಥಿಗಳಿಗೆ ಇತ್ತೀಚಿನ ದಿನಗಳಲ್ಲಿ ಆಯಾ ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಸಾರಿಗೆ ಸೌಲಭ್ಯವನ್ನೂ ಕಲ್ಪಿಸುತ್ತಿದ್ದು, ಪ್ರವೇಶ ಶುಲ್ಕದ ಜತೆಗೆ ಸಾರಿಗೆ ಸೇವೆ ಶುಲ್ಕವನ್ನು ಪಡೆಯುತ್ತಿವೆ. ಹಾಗಾಗಿ, ಬಹುತೇಕರು ಬಸ್‌ಗಳಿಗಾಗಿ ಕಾಯುವ ಪ್ರಮೇಯವೇ ಬರುವುದಿಲ್ಲ. ಶಾಲಾ ಆಡಳಿತ ಮಂಡಳಿಗಳು ಸ್ವತಃ ಇದೇ ಸಾರಿಗೆ ಸಂಸ್ಥೆಗಳಿಂದ ಕಡಿಮೆ ಬೆಲೆಯಲ್ಲಿ ವಾಹನಗಳನ್ನು ಪಡೆಯುತ್ತವೆ. ನಂತರ ಅದನ್ನು ದುರಸ್ತಿಗೊಳಿಸಿ, ಬಣ್ಣ ಬಳಿದು “ಶಾಲಾ ವಾಹನ’ ಫ‌ಲಕ ಹಾಕಲಾಗುತ್ತದೆ. ಮೂರ್‍ನಾಲ್ಕು ಲಕ್ಷ ರೂ.ಗಳಿಗೆ ಈ ವಾಹನಗಳು ದೊರೆಯುತ್ತವೆ. ಕೇವಲ ಮಕ್ಕಳನ್ನು ಕರೆತರುವುದು ಹಾಗೂ ಬಿಟ್ಟುಬರುವುದು ಮಾತ್ರ ಈ ವಾಹನಗಳ ಕೆಲಸ. ಇದರಿಂದ ತಮಗೆ ಆದಾಯವೂ ಬರುತ್ತದೆ. ವಿದ್ಯಾರ್ಥಿಗಳಿಗೆ ಸಮಯವೂ ಉಳಿಯುತ್ತದೆ ಎಂಬ ಲೆಕ್ಕಾಚಾರ ಆಡಳಿತ ಮಂಡಳಿಗಳದ್ದು.

ಸೆಳೆಯುವ ಪ್ರಯತ್ನ ನಡೆದಿದೆ: ಇದಲ್ಲದೆ, ಮೆಟ್ರೋ ನಾಲ್ಕೂ ದಿಕ್ಕುಗಳಿಗೆ ಸಂಪರ್ಕ ಕಲ್ಪಿಸಿರುವುದು, ಕಡಿಮೆ ಬಾಡಿಗೆ ದರದಲ್ಲಿ ದೊರೆಯುವ ಕ್ಯಾಬ್‌ಗಳು, ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಗಾಗಿ ಬಾಡಿಗೆ ಸ್ಕೂಟರ್‌ಗಳು ಹಾಗೂ ಸ್ವಂತ ವಾಹನಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆ ಆಗುತ್ತಿರುವುದು ಕೂಡ ಬಿಎಂಟಿಸಿಯಲ್ಲಿ ಪಾಸಿಗಾಗಿ ಬೇಡಿಕೆ ಇಡುವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಲು ಪ್ರಮುಖ ಕಾರಣವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

Advertisement

ಹೀಗೆ ಪಾಸು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖದಿಂದ ಸಂಸ್ಥೆಗೆ ಅಷ್ಟೇನೂ ನಷ್ಟ ಆಗದಿರಬಹುದು. ಆದರೆ, ಕಾಯಂ ಪ್ರಯಾಣಿಕರನ್ನು ಸಂಸ್ಥೆ ಕಳೆದುಕೊಂಡಂತಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಹೆಚ್ಚು ವಿದ್ಯಾರ್ಥಿಗಳನ್ನು ಇತ್ತ ಸೆಳೆಯುವ ಪ್ರಯತ್ನ ನಡೆದಿದೆ. ಶಾಲೆಗಳಿಗೆ ಭೇಟಿ ನೀಡಿ, ಈ ಬಗ್ಗೆ ತಿಳಿವಳಿಕೆ ನೀಡಿದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಈಚೆಗೆ ಪಾಸು ಪಡೆಯಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿರುವುದು ಕಂಡುಬರುತ್ತಿದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಒತ್ತಡ ಹಾಕಲು ಆಗಲ್ಲ; ನಿರ್ಗಮಿತ ಎಂಡಿ: “ಯಾವುದೇ ಬಸ್‌ ಪಾಸುಗಳ ದರ ಏರಿಕೆ ಮಾಡಿಲ್ಲ. ಮಾರ್ಗಗಳ ಸೇವೆಯನ್ನು ಕಡಿತಗೊಳಿಸಿಲ್ಲ. ಬದಲಿಗೆ ಪಾಸುಗಳ ಗುಣಮಟ್ಟವನ್ನು ಸುಧಾರಿಸಿದ್ದು, ಸ್ಮಾರ್ಟ್‌ ಕಾರ್ಡ್‌ ಪರಿಚಯಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕಬೇಕಿಲ್ಲ. ಆದಾಗ್ಯೂ ಕಡಿಮೆ ಆಗುತ್ತಿದೆ ಎಂದಾದರೆ, ವಿದ್ಯಾರ್ಥಿಗಳು ಬೇರೆ ಮಾದರಿಯ ಸಾರಿಗೆ ಸೇವೆಗೆ ತೆರೆದುಕೊಂಡಿರಬಹುದು. ಬಸ್‌ ಸೇವೆಯಂತೂ ಇದ್ದೇ ಇರುತ್ತದೆ. ಅದರ ಉಪಯೋಗ ಪಡೆದುಕೊಳ್ಳುವುದು ವಿದ್ಯಾರ್ಥಿಗಳಿಗೆ ಬಿಟ್ಟದ್ದು. ನಾವು ಒತ್ತಡ ಹಾಕಲು ಸಾಧ್ಯವಿಲ್ಲ’ ಎಂದು ಬಿಎಂಟಿಸಿಯ ನಿರ್ಗಮಿತ ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ.ಪ್ರಸಾದ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

2016-17ರಿಂದ 2018-19ರವರೆಗೆ ನಿತ್ಯ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಒಂದೇ ರೀತಿ ಅಂದರೆ 44-45 ಲಕ್ಷ ಇದೆ. ವಾಹನ ಬಳಕೆ ಪ್ರಮಾಣ ಶೇ. 89ರಿಂದ ಶೇ. 82.8ಕ್ಕೆ ಇಳಿಕೆಯಾಗಿದೆ. ಸರಾಸರಿ ಆಸನಗಳು 42.8ರಿಂದ 41.3 ಆಗಿದೆ. ಸಂಚಾರ ಆದಾಯ 2018-19ರಲ್ಲಿ 1,237.83 ಕೋಟಿ ರೂ. ಇದ್ದು, 2017-18ಕ್ಕೆ ಹೋಲಿಸಿದರೆ, ಶೇ. 3.6ರಷ್ಟು ಏರಿಕೆ ಕಂಡುಬಂದಿದೆ ಎಂದು 2018-19ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖೀಸಲಾಗಿದೆ. ಮೆಟ್ರೋ ಮತ್ತು ಆ್ಯಪ್‌ ಆಧಾರಿತ ಕ್ಯಾಬ್‌ಗಳಿಗೆ ಮುನ್ನ ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ 50 ಲಕ್ಷ ಇತ್ತು.

ನಷ್ಟದ ಲೆಕ್ಕಾಚಾರ ಹೀಗೆ: ಒಂದು ಪಾಸಿಗೆ ತಗಲುವ ವೆಚ್ಚದಲ್ಲಿ ಶೇ. 50ರಷ್ಟು ಸಬ್ಸಿಡಿ ಮೊತ್ತ ಸರ್ಕಾರ ಭರಿಸುತ್ತಿತ್ತು. ಶೇ. 6ರಿಂದ 8ರಷ್ಟು ಮೊತ್ತವನ್ನು ವಿದ್ಯಾರ್ಥಿಗಳು ಶುಲ್ಕದ ರೂಪದಲ್ಲಿ ಪಾವತಿಸುತ್ತಿದ್ದರು. ಪಾಸು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ, ಈ ಸಬ್ಸಿಡಿ ಮತ್ತು ಶುಲ್ಕದ ಮೊತ್ತವೂ ಕಡಿಮೆ ಆಗಲಿದೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 50 ಸಾವಿರ ಕಡಿಮೆಯಾದರೂ ಅಂದಾಜು 15ರಿಂದ 20 ಕೋಟಿ ರೂ. ನಷ್ಟ ಆಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಅಂದಾಜಿಸುತ್ತಾರೆ.

ವರ್ಷ ಪ್ರವೇಶ (1ರಿಂದ 10ನೇ ತರಗತಿ) ಪಾಸು ಹೊಂದಿರುವವರು (1ರಿಂದ ಪದವೀಧರರವರೆಗೆ)
-2017-18 15.98 ಲಕ್ಷ 3.73 ಲಕ್ಷ
-2018-19 16.01 ಲಕ್ಷ 3.35 ಲಕ್ಷ
-2019-20 16.10 ಲಕ್ಷ 2.97 ಲಕ್ಷ (ಆಗಸ್ಟ್‌ 30ರವರೆಗೆ)

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next