ಹುಣಸೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ಕೇಂದ್ರದ ಶತಮಾನೋತ್ಸವ ಆಚರಣೆ ಸಂಬಂಧ ಹುಣಸೂರು ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಜ್ಞ ನಾರಾಯಣ ಸ್ಮಾರಕ ಕೃಷಿ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆ ನಡೆಸಿದರು.
ಬಿಇಒ ಶಿವಣ್ಣ ಮಾತನಾಡಿ, ನಮ್ಮದು ಕೃಷಿ ಪ್ರಧಾನ ದೇಶ, ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಕೃಷಿ ಬಗ್ಗೆ ತಿಳಿದುಕೊಳ್ಳಬೇಕು, ಜೊತೆಗೆ ಕೃಷಿಯಲ್ಲಿ ಆಗುತ್ತಿರುವ ಹೊಸ ಅವಿಷ್ಕಾರಗಳ ಬಗ್ಗೆ ಅವರಲ್ಲಿ ಅಭಿರುಚಿ ಮೂಡಿಸುವುದು ಅತ್ಯಗತ್ಯ ಎಂದರು.
ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಕೃಷಿಯಿಂದ ವಿಮುಖ ರಾಗುತ್ತಿದ್ದಾರೆ. ಕೃಷಿ ಯೋಗ್ಯ ಭೂಮಿಯು ಬಿಲ್ಡರ್ಗಳ ಪಾಲಾಗುತ್ತಿದ್ದು, ಇತ್ತೀಚೆಗೆ ಮಳೆಯೂ ಕಡಿಮೆಯಾಗಿದೆ. ಬೀಳುವ ಮಳೆಗನುಗುಣವಾಗಿ ಬೆಳೆ ಬೆಳೆಯಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಇತ್ತೀಚೆಗೆ ಸಿರಿ ಧಾನ್ಯಗಳಿಗೆ ಬಹಳಷ್ಟು ಬೇಡಿಕೆಯಿದ್ದು, ಸರಕಾರ ಪ್ರೋತ್ಸಾಹಧನ ನೀಡುತ್ತಿದ್ದು ಈ ಬಗ್ಗೆ ವಿದ್ಯಾರ್ಥಿಗಳು ಅರಿಯಬೇಕು ಎಂದು ತಿಳಿಸಿದರು.
ನಾಗನಹಳ್ಳಿ ಕೃಷಿ ವಿವಿಯ ಡಾ. ಸನತ್‌ಕುಮಾರ್, ವಿದ್ಯಾರ್ಥಿಗಳಲ್ಲಿ ಕೃಷಿ ಜ್ಞಾನ ಬೆಳೆಸಲು ಈ ಎರಡು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಇಲ್ಲಿನ ವಿಜೇತ ತಂಡವನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ವಿಜೇತರಿಗೆ ನಗದು ಬಹುಮಾನವಿರಲಿದೆ, ಪ್ರಬಂಧ ಸ್ಪರ್ಧೆಯ ವಿಜೇತರನ್ನು ಕೃಷಿ ವಿಜ್ಞಾನಿಗಳು ನಂತರ ಘೋಷಿಸಲಿದ್ದಾರೆ ಎಂದರು.
ಕೃಷಿ ವಿವಿಯ ಡಾ. ಮಹದೇವು, ಡಾ.ಕಿರಣ್‌ಕುಮಾರ್, ಡಾ.ಶುಭಶ್ರೀ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಶೆಲಬೀಳಗಿ, ಶಿವಣ್ಣ, ಶಿಕ್ಷಣ ಸಂಯೋಜಕರಾದ ಜೆ.ಮಹದೇವು, ಹೊನ್ನಚಾರಿ ಹಾಗೂ ಸಿಆರ್‌ಪಿ ಮಾದುಪ್ರಸಾದ್ ಉಪಸ್ಥಿತರಿದ್ದರು. ರಸಪ್ರಶ್ನೆ ಸ್ಪರ್ಧೆ ವಿಜೇತರು: ಕಟ್ಟೆಮಳಲವಾಡಿ ಸರಕಾರಿ ಪ್ರೌಢಶಾಲೆಯ ವಿ.ಸುದೀಪ್ ಹಾಗೂ ಶಿವಕುಮಾರ್ ತಂಡ(ಪ್ರಥಮ), ಗಾವಡಗೆರೆ ಪದವಿಪೂರ್ವ ಕಾಲೇಜಿನ ಚಂದ್ರು ಹಾಗೂ ಕಾಂಚನ(ದ್ವಿತೀಯ) ಬಹುಮಾನ ಪಡೆದರು.