ರಾಜ್ಯದಲ್ಲಿ ಮೆಟ್ರಿಕ್ ಅನಂತರದ ಹಾಸ್ಟೆಲ್ ಆರಂಭಿಸಲು ಸಮಾಜ ಕಲ್ಯಾಣ ಇಲಾಖೆ ಸೂಚನೆ ನೀಡಿ, ಕೋವಿಡ್ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಮಾಣಿತ ಕಾರ್ಯಸೂಚಿ ವಿಧಾನ (ಎಸ್‌ಒಪಿ)ಯನ್ನು ಬಿಡುಗಡೆ ಮಾಡಿದೆ. ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳನ್ನು ಆರಂಭಿಸಲು ಇನ್ನು ಅನುಮತಿ ನೀಡಿಲ್ಲ. ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಅಥವಾ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಹಾಸ್ಟೆಲ್‌ಗಳನ್ನು ಆರಂಭಿಸಲಾಗಿದೆ. ಕೊರೊನಾ ಸೋಂಕಿತರು ಬಳಸಿರುವ ಹಾಸಿಗೆ, ದಿಂಬು, ಹೊದಿಕೆಗಳನ್ನೇ ವಿದ್ಯಾರ್ಥಿಗಳು ಬಳಸಬೇಕು ಎಂಬುದು ಎಷ್ಟು ಸರಿ?
ರಾಜ್ಯದ ಬಹುತೇಕ ಹಾಸ್ಟೆಲ್ ಮತ್ತು ವಸತಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿತ್ತು. ಲಾಕ್‌ಡೌನ್‌ಗೂ ಮೊದಲ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಹೊರ ರಾಜ್ಯ ಮತ್ತು ವಿದೇಶಗಳಿಂದ ಬಂದಿರುವ ಕೊರೊನಾ ಶಂಕಿತರಿಗೆ ಕ್ವಾರಂಟೈನ್ ಕೇಂದ್ರದಲ್ಲೇ ವ್ಯವಸ್ಥೆ ಮಾಡಲಾಗಿತ್ತು, ಇದಾದ ಅನಂತರ ಸರಕಾರದಿಂದ ಆರಂಭಿಸಿರುವ ಕೋವಿಡ್ ಆರೈಕೆ ಕೇಂದ್ರಗಳನ್ನು ವಸತಿ ಶಾಲೆ ಹಾಗೂ ಹಾಸ್ಟೆಲ್‌ಗಳಲ್ಲಿ ತೆರೆಯಲಾಗಿತ್ತು. ಕೊರೊನಾ ಸೋಂಕಿತರು, ರೋಗ ಲಕ್ಷಣ ಇಲ್ಲದ ಸೋಂಕಿತರು ಸಹಿತವಾಗಿ ಕ್ವಾರಂಟೈನ್‌ನಲ್ಲಿದ್ದರು ಹಾಗೂ ಆರೈಕೆ ಕೇಂದ್ರದಲ್ಲಿದವರು ಹಾಸ್ಟೆಲ್ ವಿದ್ಯಾರ್ಥಿಗಳು ಬಳಸುತ್ತಿದ್ದ ಬೆಡ್, ಬೆಡ್‌ಸ್ಪ್ರೆಡ್, ದಿಂಬು, ದಿಂಬಿನ ಕವರ್, ಹೊದಿಕೆ ಇತ್ಯಾದಿಗಳನ್ನು ಉಪಯೋಗಿಸಿದ್ದಾರೆ. ಅದನ್ನೇ ಈಗ ಬಿಸಿ ನೀರು ಮತ್ತು ಡಿಟರ್ಜಂಟ್‌ನಿಂದ ಒಗೆದು ವಿದ್ಯಾರ್ಥಿಗಳಿಗೆ ಮರು ಬಳಕೆಗೆ ಎಸ್‌ಒಪಿಯಲ್ಲೇ ತಿಳಿಸಲಾಗಿದೆ.
ಕೊರೊನಾ ಸೋಂಕಿತರು ಬಳಸಿರುವ ವಸ್ತುಗಳನ್ನು ಮನೆಯಲ್ಲೇ ಮರು ಬಳಕೆ ಮಾಡಲು ಜನ ಸಾಕಷ್ಟು ಬಾರಿ ಯೋಚನೆ ಮಾಡುತ್ತಾರೆ. ಈ ಸಾಂಕ್ರಾಮಿಕ ರೋಗ ತುಂಬ ಅಪಾಯಕಾರಿ, ಎಚ್ಚರ ತಪ್ಪಿದರೇ ಆಪತ್ತು ಕಟ್ಟಿಟ್ಟ ಬುತ್ತಿ ಎಂದು ವೈದ್ಯಕೀಯ ವಲಯವೇ ಸಾರಿ ಹೇಳುತ್ತಿದೆ. ಇವೆಲ್ಲದರ ನಡುವೆ ಕೊರೊನಾ ಸೋಂಕಿತರು, ಶಂಕಿತರು ಬಳಸಿರುವ ಹೊದಿಕೆ, ದಿಂಬು, ಬೆಡ್, ಬೆಡ್‌ಶೀಟ್ ಇತ್ಯಾದಿಗಳನ್ನು ವಾಶ್ ಮಾಡಿ ವಿದ್ಯಾರ್ಥಿಗಳಿಗೆ ಮರು ಬಳಕೆಗೆ ನೀಡುವುದು ಸರಿಯೇ? ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳೇ ಹೆಚ್ಚಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆ, ಹಾಸ್ಟೆಲ್‌ಗಳಲ್ಲಿ ಈ ರೀತಿ ಮಾಡುತ್ತಿರುವುದು ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕ, ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.
ಇಲಾಖೆಯಿಂದ ಮಕ್ಕಳಿಗೆ ಹೊಸ ಬೆಡ್, ಬೆಡ್‌ಸ್ಪ್ರೆಡ್, ಹೊದಿಕೆ ಇತ್ಯಾದಿಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು. ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಏರಿಕೆಯಾಗದೇ ಇರುವುದರಿಂದ ಹಾಸ್ಟೆಲ್‌ಗಳಲ್ಲೂ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಹಾಜರಾಗಿಲ್ಲ. ಹೀಗಾಗಿ ಹಂತ ಹಂತವಾಗಿಯಾದರೂ ಹೊಸ ಬೆಡ್, ಬೆಡ್‌ಶೀಟ್, ಬೆಡ್‌ಸ್ಪ್ರೆಡ್ ಇತ್ಯಾದಿಗಳನ್ನು ಪೂರೈಕೆ ಮಾಡುವ ಕಾರ್ಯವನ್ನು ಸಮಾಜ ಕಲ್ಯಾಣ ಇಲಾಖೆ ಮಾಡಬೇಕು. ಇಲ್ಲವಾದರೆ, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಜತೆಗೆ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸುವ ಪಾಲಕ ಪೋಷಕರಲ್ಲೂ ಆತಂಕ ಹೆಚ್ಚಾಗಲಿದೆ. ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳು ಇನ್ನಷ್ಟೇ ಆರಂಭವಾಗಬೇಕಿದೆ. ಆಗ ಶಾಲಾ ಮಕ್ಕಳು ಹಾಸ್ಟೆಲ್ ಅಥವಾ ವಸತಿ ಶಾಲೆಗೆ ಬರಲಿದ್ದಾರೆ. ಅಷ್ಟರೊಳಗಾಗಿ ಇಲಾಖೆ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡು, ಮಕ್ಕಳ ಸುರಕ್ಷತೆಗೆ ಇನ್ನಷ್ಟು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.