ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ಯೂನಿರ್ವಸಿಟಿಯ ವಿದ್ಯಾರ್ಥಿಗಳು ಬಿಬಿಸಿಯ ವಿವಾದಿತ ಮೋದಿ ಕುರಿತ ಸಾಕ್ಷ್ಯಚಿತ್ರವನ್ನು ವಿದ್ಯಾರ್ಥಿಗಳು ಪ್ರದರ್ಶಿಸದಂತೆ ತಡೆಯುವ ನಿಟ್ಟಿನಲ್ಲಿ ನಾಟಕೀಯ ಬೆಳವಣಿಗೆಯಲ್ಲಿ ಯೂನಿರ್ವಸಿಟಿಯಲ್ಲಿ ವಿದ್ಯುತ್ ಮತ್ತು ನೀರು ಸರಬರಾಜನ್ನು ಸ್ಥಗಿತಗೊಳಿಸಿದ್ದ ಎರಡು ದಿನಗಳ ನಂತರ ರಾಜಧಾನಿಯ ದೆಹಲಿ ವಿವಿ ಮತ್ತು ಅಂಬೇಡ್ಕರ್ ಯೂನಿರ್ವಸಿಟಿ ವಿದ್ಯಾರ್ಥಿಗಳು ಕೂಡಾ ಇದೇ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ವರದಿ ತಿಳಿಸಿದೆ.
ಬಿಬಿಸಿಯ ಮೋದಿ ಕುರಿತ ವಿವಾದಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಮುಂದಾಗಿರುವ ನಿಟ್ಟಿನಲ್ಲಿ ದೆಹಲಿ ಯೂನಿರ್ವಸಿಟಿ ಹೊರಭಾಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ನಿಷೇಧಿಸಿದೆ. ಅಲ್ಲದೇ ಡಾಕ್ಯುಮೆಂಟರಿ ಪ್ರದರ್ಶಿಸಲು ಮುಂದಾಗಿದ್ದ ಅಂಬೇಡ್ಕರ್ ಯೂನಿರ್ವಸಿಟಿಯ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿರುವುದಾಗಿ ವರದಿ ತಿಳಿಸಿದೆ.
ಜವಾಹರಲಾಲ್ ನೆಹರು ಯೂನಿರ್ವಸಿಟಿಯ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರ ಕುರಿತ ಬಿಬಿಸಿ ಡಾಕ್ಯುಮೆಂಟರಿಯನ್ನು ಕ್ಯೂಆರ್ ಕೋಡ್ ಬಳಸಿ ತಮ್ಮ ಮೊಬೈಲ್ ಹಾಗೂ ಲ್ಯಾಪ್ ಟ್ಯಾಪ್ ಗಳಲ್ಲಿ ವೀಕ್ಷಿಸಿರುವುದಾಗಿ ವರದಿಯಾಗಿದೆ.
ಡಾಕ್ಯುಮೆಂಟರಿ ವೀಕ್ಷಣೆಗೆ ಅವಕಾಶ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಎರಡೂ ಯೂನಿರ್ವಸಿಟಿಯ ವಿದ್ಯಾರ್ಥಿಗಳ ಗುಂಪು ಘೋಷಣೆ ಕೂಗಿದ್ದು, ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.
ಮೂಲಗಳ ಪ್ರಕಾರ, ವಿವಿ ಆವರಣದೊಳಗೆ ಡಾಕ್ಯುಮೆಂಟರಿ ಸಾಮೂಹಿಕ ವೀಕ್ಷಣೆಗಾಗಲಿ ಅಥವಾ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಯೂನಿರ್ವಸಿಟಿ ಆಡಳಿತ ಮಂಡಳಿ ತಿಳಿಸಿದ್ದು, ಒಂದು ವೇಳೆ ವಿದ್ಯಾರ್ಥಿಗಳು ಹೇಗಾದರೂ ಮಾಡಿ ಡಾಕ್ಯುಮೆಂಟರಿಯನ್ನು ಅವರ ಮೊಬೈಲ್ ನಲ್ಲಿ ವೀಕ್ಷಿಸಲು ಬಯಸಿದರೆ ಅದು ಅವರ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.