ಮುಧೋಳ: ಕಾಲೇಜಿನಲ್ಲಿ ಸರಿಯಾದ ಸೌಲಭ್ಯ ನೀಡುತ್ತಿಲ್ಲ. ಹೆಚ್ಚಿನ ಹಣ ಪಡೆದು ರಸೀದಿ ನೀಡದೆ ವಂಚಿಸಲಾಗುತ್ತಿದೆ ಎಂದು ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಪ್ರಾಚಾರ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿನ ಕಾರ್ಯಾಲಯದ ಮುಂದೆ ಜಮಾಯಿಸಿದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸೂಕ್ತ ಸೌಲಭ್ಯವಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಇಲ್ಲದ ಸಬೂಬು ಹೇಳಿ ಸಾಗ ಹಾಕುತ್ತಾರೆ. ಪ್ರವೇಶ ಪಡೆಯುವ ವೇಳೆ ನಮ್ಮಿಂದ ಹೆಚ್ಚಿನ ಹಣ ಪಡೆದು ರಸೀದಿ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಓದಲು ಸರಿಯಾದ ಗ್ರಂಥಾಲಯವಿಲ್ಲ. ಗ್ರಂಥಾಲಯ ಕೊಠಡಿಯಲ್ಲಿ ತರಗತಿಯನ್ನು ನಡೆಸುತ್ತಿದ್ದು, ಓದಲು ಸೂಕ್ತ ಸ್ಥಳಾವಕಾಶವೇ ಇಲ್ಲದಂತಾಗಿದೆ. ಶೌಚಗೃಹ ಸ್ವಚ್ಛಗೊಳಿಸದ ಕಾರಣ ಶೌಚಕ್ಕೆ ತೆರಳುವುದೂ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು. ಕ್ರೀಡೆಗಾಗಿ ಹಣ ಕಟ್ಟಿಸಿಕೊಂಡಿದ್ದು, ಯಾವುದೇ ರೀತಿಯ ಕ್ರೀಡಾಕೂಟ ಹಮ್ಮಿಕೊಂಡಿಲ್ಲ. ನಮ್ಮಿಂದ ಪಡೆದ ಹಣವನ್ನು ಏನು ಮಾಡಿದಿರಿ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಈ ವೇಳೆ ಉತ್ತರಿಸಿದ ಪ್ರೊ| ರಾಯನಗೌಡರ, ವಿದ್ಯಾರ್ಥಿಗಳು ನೀಡಿರುವ ಹಣವನ್ನು ಉಳಿತಾಯ ಮಾಡಲಾಗಿದೆ ಎಂದು ಉತ್ತರ ನೀಡಿದರು. ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಉಳಿತಾಯ ಮಾಡಿರುವ ಬಗೆಗಿನ ದಾಖಲೆ ತೋರಿಸಿ ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ನಿರುತ್ತರರಾದ ಪ್ರಾಚಾರ್ಯ: ಕಾಲೇಜಿನಲ್ಲಿ ಮೂಲಸೌಲಭ್ಯದ ಕೊರತೆ ಹಾಗೂ ಹಣ ಉಳಿತಾಯದ ದಾಖಲೆ ತೋರಿಸುವಂತೆ ವಿದ್ಯಾರ್ಥಿಗಳು ಒತ್ತಡ ಹೇರಿದಾಗ ಪ್ರಾಚಾರ್ಯ ತೇರದಾಳ ಅವರು ಯಾವುದೇ ಉತ್ತರ ನೀಡದೆ ನಿರುತ್ತರವಾಗಿ ನಿಂತಿರುವುದು ಕಂಡು ಬಂತು.