ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆಗೆ ಇದುವರೆಗೆ ಮುಹೂರ್ತ ಕೂಡಿಬಾರದ ಹಿನ್ನೆಲೆಯಲ್ಲಿ ಕೊನೆಪಕ್ಷ ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನಾದರೂ ಹೆಚ್ಚಳ ಮಾಡುವಂತೆ ದುಂಬಾಲು ಬಿದ್ದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಈ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರತಿ ವಿದ್ಯಾರ್ಥಿ ರಿಯಾಯಿತಿ ಪಾಸಿನ ದರವನ್ನು 100 ರೂ. ಹೆಚ್ಚಳಕ್ಕೆ ಅನುಮತಿ ನೀಡುವಂತೆ ನಿಗಮವು ಪ್ರಸ್ತಾವನೆ ಸಲ್ಲಿಸಿದ್ದು, ‘ಸೇವಾ ಶುಲ್ಕ’ದ ರೂಪದಲ್ಲಿ ಈ ದರವನ್ನು ವಸೂಲಿ ಮಾಡಲು ಉದ್ದೇಶಿಸಿದೆ. ಸಾಧ್ಯವಾದರೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಈ ಪರಿಷ್ಕೃತ ದರ ಜಾರಿಗೊಳಿಸಲು ಚಿಂತನೆ ನಡೆಸಿದೆ.
ಹೆಚ್ಚಳಕ್ಕೆ ಸಕಾಲ?
ಉಪ ಚುನಾವಣೆಗಳು, ಸ್ಥಳೀಯ ಸಂಸ್ಥೆ ಚುನಾವಣೆ, ಲೋಕಸಭಾ ಚುನಾವಣೆಗಳು ಮುಗಿದಿವೆ. ಏರಿಕೆ ನಿರ್ಧಾರದಿಂದ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರದು. ಅಷ್ಟಕ್ಕೂ ನೀರಿನ ಶುಲ್ಕ, ವಿದ್ಯುತ್ ಶುಲ್ಕ ಪರಿಷ್ಕರಣೆ ಆಗುತ್ತಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಇದು ಸಕಾಲ ಎಂಬುದು ನಿಗಮದ ಅಧಿಕಾರಿಗಳ ಲೆಕ್ಕಾಚಾರ. ಪ್ರಸ್ತಾವನೆ ಈಗಾಗಲೇ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಮಂಡನೆ ಆಗಿದ್ದು, ಸರಕಾರಕ್ಕೂ ಕಳುಹಿಸಲಾಗಿದೆ ಎಂದು ಮೂಲಗಳು ‘ಉದಯವಾಣಿ’ಗೆ ತಿಳಿಸಿವೆ. ಆದರೆ ದಿಢೀರ್ ನಿರ್ಧಾರ ತೆಗೆದುಕೊಂಡಲ್ಲಿ ವಿದ್ಯಾರ್ಥಿ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
ಕಳೆದ ಏಳೆಂಟು ವರ್ಷಗಳಿಂದ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸಿನ ದರ ಹೆಚ್ಚಿಸಿಲ್ಲ. ಇತ್ತ ಪ್ರಯಾಣ ದರ ಏರಿಕೆ ಪ್ರಸ್ತಾವನೆಯೂ ನನೆಗುದಿಗೆ ಬಿದ್ದಿದೆ. ಈ ಮಧ್ಯೆ ನಿಗಮವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಿರುವಾಗ ಪಾಸಿನ ದರ ಪರಿಷ್ಕರಣೆಗೆ ಅನುಮತಿ ನೀಡಿದಲ್ಲಿ ಕೊಂಚ ಆರ್ಥಿಕ ಚೇತರಿಕೆಗೆ ಅನುಕೂಲ ಆಗುತ್ತದೆ ಎಂದು ನಿಗಮ ಸಮಜಾಯಿಷಿ ನೀಡಿದೆ. ಈ ಪರಿಷ್ಕರಣೆಯಿಂದ ನಿಗಮವು ವಾರ್ಷಿಕ ಸುಮಾರು 15ರಿಂದ 20 ಕೋ. ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಿದೆ.
ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ 6.25 ಲಕ್ಷ ವಿದ್ಯಾರ್ಥಿಗಳು ರಿಯಾಯಿತಿ ಬಸ್ ಪಾಸುಗಳನ್ನು ಪಡೆಯುತ್ತಾರೆ. ಪಾಸಿನ ದರ ಹತ್ತು ತಿಂಗಳಿಗೆ ಪ್ರಸ್ತುತ ಕನಿಷ್ಠ 600ರಿಂದ ಗರಿಷ್ಠ 1,400 ರೂ. ಇದಲ್ಲದೆ 100 ರೂ. ಸೇವಾ ಶುಲ್ಕ ಮತ್ತು ತಿಂಗಳಿಗೆ ಅಪಘಾತ ಪರಿಹಾರ ನಿಧಿಗೆ 5 ರೂ. ಪಡೆಯಲಾಗುತ್ತಿದೆ. ಇದರಿಂದ ಒಟ್ಟಾರೆ 35-40 ಕೋ. ರೂ. ಬರುತ್ತಿದೆ. ಆದರೆ ವಾಸ್ತವವಾಗಿ ವೆಚ್ಚ ಆಗುತ್ತಿರುವುದು 650 ಕೋ. ರೂ. ಸರಕಾರದಿಂದ 300 ಕೋ. ರೂ. ಬರುತ್ತದೆ. ಉಳಿದ ಬಹುತೇಕ ಹಣವನ್ನು ನಿಗಮವೇ ಭರಿಸಬೇಕಾಗಿದೆ. ಆದ್ದರಿಂದ ಹೆಚ್ಚಳ ಅಗತ್ಯವಾಗಿದೆ ಎಂದು ನಿಗಮ ಸಮರ್ಥನೆಗಳನ್ನು ನೀಡಿದೆ.