ಬಾಗಲಕೋಟೆ: ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವಂತೆ ಒತ್ತಾಯಿಸಿ ಎಐಡಿಎಸ್‌ಒ ಹಾಗೂ ಮಿತ್ರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಶಾಲಾ- ಕಾಲೇಜುಗಳ ಬಂದ್ ಕರೆಗೆ ಬಾಗಲಕೋಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಂಕೇತಿಕವಾಗಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಬಂದ್‌ನಲ್ಲಿ ನೂರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ನಗರದ ಬಸವೇಶ್ವರ ವೃತ್ತಕ್ಕೆ ಪ್ರತಿಭಟನೆ ಮೆರವಣಿಗೆ ಮೂಲಕ ಆಗಮಿಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಎಚ್.ಟಿ. ಭರತಕುಮಾರ ಮಾತನಾಡಿ, ಬಡ ವಿದ್ಯಾರ್ಥಿಗಳು ಹಾಗೂ ರೈತರ ಮಕ್ಕಳ ಭವಿಷ್ಯದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರದ, ಹಣದ ಕೊರತೆಯ ಸುಳ್ಳು ನೆಪ ಹೇಳುತ್ತಿರುವ ರಾಜ್ಯ ಸರ್ಕಾರ, ವಿದ್ಯಾರ್ಥಿಗಳ ವಿರೋಧಿ ನೀತಿ ಕೈಬಿಟ್ಟು, ಉಚಿತ ಬಸ್ ಪಾಸ್ ಒದಗಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚಿನ ಸಿ.ಎ.ಜಿ ವರದಿ ಪ್ರಕಾರ ರಾಜ್ಯ ಸರಕಾರ ಕಳೆದ ವರ್ಷದ ಬಜೆಟ್‌ನಲ್ಲಿ ವಿವಿಧ ಜನಕಲ್ಯಾಣ ಯೋಜನೆಗಳಿಗೆ ಇಟ್ಟ ಹಣದಲ್ಲಿ ಸುಮಾರು 15,500 ಕೋಟಿ ರೂ. ಖರ್ಚು ಮಾಡದೇ ಉಳಿಸಿದೆ. ಒಂದು ವೇಳೆ ಈ ಹಣವನ್ನು ವಿದ್ಯಾರ್ಥಿಗಳ ಬಸ್‌ಪಾಸ್‌ಗೆ ಮೀಸಲಿಟ್ಟರೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸುಮಾರು ಹದಿನೈದು ವರ್ಷಗಳವರೆಗೆ ಉಚಿತ ಬಸ್ ಪಾಸ್ ಕೊಡಬಹುದು ಎಂದರು.
ಶಿಕ್ಷಣ ಸಚಿವರು ಬಸ್ ಪಾಸ್ ಹಣದಲ್ಲಿ ಶೇ.25ರಷ್ಟು ಹಣವನ್ನು ತಮ್ಮ ಇಲಾಖೆಯಿಂದ ಕೊಡುವುದಾಗಿ ಹೇಳಿದ್ದಾರೆ. ಆದ್ದರಿಂದ ಇನ್ನುಳಿದ ಹಣವನ್ನು ರಾಜ್ಯ ಸರಕಾರ ಭರಿಸಿ ಕೂಡಲೇ ಬಸ್‌ಪಾಸ್ ಒದಗಿಸಬೇಕೆಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡ ಮಲ್ಲಿಕಾರ್ಜುನ ಮಾತನಾಡಿ, ಸಾಮಾನ್ಯ ಜನರ, ಬಡವರ, ಕಾರ್ಮಿಕರು ಮಕ್ಕಳು ಬಸ್ ಪಾಸ್ ಸೌಲಭ್ಯ ಪಡೆಯುತ್ತಿದ್ದಾರೆ. ಬಡವರ ಪರವಿದೆ ಎಂದು ಹೇಳುವ ಸರಕಾರ, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಒದಗಿಸಬೇಕು ಎಂದು ಆಗ್ರಹಿಸಿದರು. ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.