ಮುದ್ದೇಬಿಹಾಳ: ಸಹಪಾಠಿಗಳೊಂದಿಗೆ ಈಜಲು ತೆರಳಿದ್ದ ವೇಳೆ ಸೋಮವಾರ ನೀರು ಪಾಲಾಗಿದ್ದ ವಿದ್ಯಾರ್ಥಿಯ ಶವ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.
ಮದನ್ ಹಣಮಂತ ಗುಡಿಹಾಳ (17) ಮೃತ ವಿದ್ಯಾರ್ಥಿ.
ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯಲ್ಲಿ ಈಜಲು ತೆರಳಿದ್ದ ವೇಳೆ ಮದನ್ ಹಣಮಂತ ಗುಡಿಹಾಳ ನೀರು ಪಾಲಾಗಿದ್ದ.
ಸೋಮವಾರ ರಾತ್ರಿವರೆಗೂ ವಿದ್ಯಾರ್ಥಿಯ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ಶವ ನೀರಿನಿಂದ ಮೇಲೆದ್ದಿರುವುದನ್ನು ಕಂಡು ಸಾರ್ವಜನಿಕರು ಮಾಹಿತಿ ನೀಡಿದ ಬಳಿಕ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ತೆರಳಿ ಶವ ಮೇಲೆತ್ತಿ, ಮರಣೋತ್ತರ ಪರಿಕ್ಷೆಗೆ ಕಳುಹಿಸಿದ್ದಾರೆ.
ಈತನ ತಂದೆ, ತಾಯಿ ಮುದ್ದೇಬಿಹಾಳ ತಾಲೂಕು ಗೂಡಿಹಾಳ ಮೂಲದವರು. ತಂದೆ, ತಾಯಿ ದುಡಿಯಲು ಗುಳೆ ಹೋಗಿದ್ದರಿಂದ, ತಾಳಿಕೋಟೆ ತಾಲೂಕು ಬಿ.ಸಾಲವಾಡಗಿಯ ತನ್ನ ಅಜ್ಜಿ ಮನೆಯಲ್ಲಿ ವಾಸವಾಗಿದ್ದ. ಪಟ್ಟದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲಿನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದ.
ಇದನ್ನೂ ಓದಿ:ಪತ್ನಿಗಾಗಿ ವಿಮಾನದಲ್ಲಿ ಬಂದು ಕದಿಯುತ್ತಿದ್ದ ಐಷಾರಾಮಿ ಕಳ್ಳನ ಸೆರೆ
ಮುಗಿಲು ಮುಟ್ಟಿದ ಆಕ್ರಂದನ
ಕಾಲುವೆ ಬಳಿ ಸೇರಿದ್ದ ಮೃತನ ಅಜ್ಜಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಈತನ ಅಕಾಲಿಕ ಮರಣ ಇಡೀ ಕುಟುಂಬವನ್ನೇ ಕಂಗಾಲಾಗಿಸಿದಂತಾಗಿದೆ ಎಂದು ಸಾರ್ವಜನಿಕರು ಶೋಕ ವ್ಯಕ್ತಪಡಿಸಿದ್ದಾರೆ.
ಶಾಸಕರಿಂದ 50,000 ರೂ.ನೆರವು
ಘಟನೆಯ ಮಾಹಿತಿ ತಿಳಿದ ಕೂಡಲೇ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರು ಮೃತನ ಪೋಷಕರು, ಬಂಧುಗಳಿಗೆ ಸಾಂತ್ವನ ಹೇಳಿದರು. ದು:ಖತಪ್ತ ಪೋಷಕರನ್ನು ದಾಸೋಹ ನಿಲಯಕ್ಕೆ ಕರೆಸಿ, ವೈಯುಕ್ತಿಕವಾಗಿ 50,000 ರೂ. ಆರ್ಥಿಕ ನೆರವು ನೀಡಿ ಸಂತೈಸಿದರು. ಮೃತ ವಿದ್ಯಾರ್ಥಿಗೆ ಸರ್ಕಾರದಿಂದ ಮತ್ತು ಶಿಕ್ಷಣ ಇಲಾಖೆಯಿಂದ ಲಭ್ಯವಿರುವ ವಿವಿಧ ನೆರವನ್ನು ಕೊಡಿಸುವ ಭರವಸೆ ನೀಡಿದರು.