ಸಿಂಧನೂರು: ಇಲ್ಲಿನ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಕೇಸರಿ ಶಾಲು ಹಾಗೂ ನೀಲಿ ಶಾಲಿನೊಂದಿಗೆ ವಿದ್ಯಾರ್ಥಿಗಳು ಆಗಮಿಸಿ, ಘೋಷಣೆ ಕೂಗಲು ಮುಂದಾಗಿರುವ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಗುಂಪು ಚದುರಿಸಿ, ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗ್ಗೆ ಕಾಲೇಜಿಗೆ ಆಗಮಿಸುವಾಗಲೇ ಎರಡು ಕಡೆಯ ವಿದ್ಯಾರ್ಥಿಗಳು ಕೇಸರಿ ಹಾಗೂ ನೀಲಿಶಾಲಿನೊಂದಿಗೆ ಆಗಮಿಸಿದ್ದಾರೆ. ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ತಡೆ ಹಾಕದೇ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ವೇಳೆ ಕೆಲವು ವಿದ್ಯಾರ್ಥಿಗಳು ಕಾಲೇಜು ಆವರಣದೊಳಕ್ಕೆ, ಇನ್ನೂಕೆಲವು ವಿದ್ಯಾರ್ಥಿಗಳು ತರಗತಿ ಕಡೆಗೆ ತೆರಳಿದ್ದಾರೆ. ಬಳಿಕ ಕಾಲೇಜು ಆವರಣದಲ್ಲಿ ಎರಡು ಕಡೆ ಗುಂಪು ಸೇರಿ ಘೋಷಣೆ ಕೂಗಲು ಮುಂದಾಗಿದ್ದಾರೆ.
ಕಾಲೇಜು ಆವರಣಲ್ಲಿ ನೀಲಿಶಾಲು ಧರಿಸಿದ್ದ ವಿದ್ಯಾರ್ಥಿಗಳು ಜೈಭೀಮ್ ಘೋಷಣೆ ಕೂಗಿದರೆ, ಮತ್ತೊಂದು ಕಡೆಯಲ್ಲಿ ನಿಂತಿದ್ದ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ವಂದೇ ಮಾತರಂ ಘೋಷಣೆ ಕೂಗಲಾರಂಭಿಸಿದರು. ಎರಡು ಕಡೆಯಿಂದಲೂ ಘೋಷಣೆ ತೀವ್ರಗೊಂಡು ಪ್ರಕ್ಷುಬ್ದ ವಾತಾವರಣ ಉಂಟಾಗುತ್ತಿದ್ದಂತೆ ಪಿಎಸ್‍ಐ ಸೌಮ್ಯ ಹಾಗೂ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ, ಗುಂಪು ಚದುರಿಸಿತು.
ಈ ವೇಳೆ ಎರಡು ಗುಂಪಿನಿಂದ ಕೆಲವರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಕಾಲೇಜು ಸಮಯ ಮುಗಿದ ನಂತರ ನೇರವಾಗಿ ಮನೆಗೆ ತೆರಳುವಂತೆ ಎಚ್ಚರಿಕೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಠಾಣೆಯಲ್ಲಿ ಕೂಡಿಸಿ, ಅವರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಬಿಡುಗಡೆ ಮಾಡಲಾಯಿತು.
ಗುಂಪು ಸೇರಿಕೊಂಡು ಘೋಷಣೆ ಕೂಗಿ, ಗೊಂದಲ ಮೂಡಿಸಿದಂತೆ ಎಚ್ಚರಿಕೆ ನೀಡಿದರು. ಎರಡು ಕಡೆಯ ಮುಖಂಡರು ಆಗಮಿಸಿದ್ದರಿಂದ ಅವರೊಂದಿಗೆ ಮಾತುಕತೆ ನಡೆಸಿ, ವಿದ್ಯಾರ್ಥಿಗಳಿಗೆ ತಿಳಿಹೇಳುವಂತೆ ತಾಕೀತು ಮಾಡಿದರು.