ಹಾವೇರಿ: ಕೋಳೂರಿನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಸಂಭ್ರಮ ಕಾರ್ಯಕ್ರಮ ನಡೆಯಿತು.
ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಕಾರ್ಯಕ್ರಮ ನಿರ್ವಹಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿ ಮನೋಜ ಮ್ಯಾಗಳಕೇರಿ ಕಾರ್ಯಕ್ರಮ ಉದ್ಘಾಟಿಸಿ, ಬರಗಾಲ ಪೀಡಿತ ತಾಲೂಕುಗಳ ಶಾಲೆಗಳಲ್ಲಿ ಸರ್ಕಾರ ಮಧ್ಯಾಹ್ನನ ಬಿಸಿ ಊಟ ಯೋಜನೆ ಮುಂದುವರೆಸಿದ್ದು, ಶಾಲೆಗಳಲ್ಲಿ ಮಕ್ಕಳ ಬೇಸಿಗೆ ಸಂಭ್ರಮ ಶಿಬಿರ ನಡೆಯುತ್ತಿರುವುದು ಶ್ಲಾಘನೀಯ ಎಂದನು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಸಂತೋಷ ಹೊರಕೇರಿ, ಶಿಕ್ಷಕರು ಹಾಗೂ ಮಕ್ಕಳನ್ನು ಲಭ್ಯ ಸಂಪನ್ಮೂಲ ಬಳಸಿಕೊಂಡು ಶಿಕ್ಷಣ ಇಲಾಖೆ ಬೇಸಿಗೆ ಶಿಬಿರ ಆರಂಭಿಸಿದೆ. ನಿರಂತರ ಐದು ವಾರಗಳ ಕಾಲ ನಡೆಯಲಿದೆ. ಹಿರಿಯ ಪ್ರಾಥಮಿಕ ಶಾಲೆಯ 6 ಹಾಗೂ 7ನೇ ವರ್ಗಕ್ಕೆ ಪಾಸಾದ ಮಕ್ಕಳಿಗೆ ಕಡ್ಡಾಯವಾಗಿ ಶಿಬಿರ ನಡೆಸಲು ಇಲಾಖೆ ಆದೇಶಿಸಿದೆ. ಗುರುತು ಮಾಡಿದ ಶಾಲಾ ಶಿಕ್ಷಕರೇ ಮಕ್ಕಳಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಹೇಳಿದನು.
ಮುಖ್ಯ ಅತಿಥಿಯಾಗಿ ವಿದ್ಯಾರ್ಥಿ ಪ್ರವೀಣ ಮಂಟಗಣಿ ಮಾತನಾಡಿ, ಈ ಬೇಸಿಗೆ ಸಂಭ್ರಮ 5 ವಾರಗಳಲ್ಲಿ 5 ಭಾಗವಾಗಿ ವಿಂಗಡಿಸಿ ಪ್ರತಿ ದಿನವೂ 5 ಅವಧಿಯಾಗಿ ಭಾಗ ಮಾಡಿದ್ದಾರೆ. ಸ್ವಲ್ಪ ಓದು-ಸ್ವಲ್ಪ ಮೋಜು ಮಾದರಿಯಲ್ಲಿ ಪಾಠಗಳು ನಡೆಯಲಿವೆ ಎಂದು ಎಲ್ಲರ ಚಪ್ಪಾಳೆ ಗಿಟ್ಟಿಸಿದನು.ಮಾರ್ಗದರ್ಶಿ ಶಿಕ್ಷಕ ಜಿ.ಎಂ. ಓಂಕಾರಣ್ಣನವರ ಮಾತನಾಡಿ, ಮೊದಲ ವಾರ ಕುಟುಂಬ, 2ನೇ ವಾರ ನೀರು, 3ನೇ ವಾರ ಆಹಾರ, 4ನೇ ವಾರ ಆರೋಗ್ಯ, ಕೊನೆ ವಾರ ಪರಿಸರ ಪಾಠ ಜರುಗಲಿವೆ. ಪ್ರತಿ ದಿನ ಮೊದಲ ಅವಧಿ ಓದು ಬರಹ, ನಿತ್ಯ ಜೀವನಕ್ಕೆ ಸಂಬಂಧಿಸಿದ ಸಮಸ್ಯೆ, ಬಾ ಸಮಸ್ಯೆ ಬಿಡಿಸು, ಮಾಡಿ ಕಲಿ ಕ್ರಮಬದ್ಧ ಆವದ್ಧಿಯಲ್ಲಿ ನಡೆಯಲಿದೆ. ಪ್ರತಿ ವಾರದ ಆರನೇ ದಿನ ಶನಿವಾರ ಮುಕ್ತ ದಿನದಲ್ಲಿ ಹಾಡು, ಆಟ, ಕಥೆ, ಭಾಷಣ, ನಾಟಕ ಇತ್ಯಾದಿ ಐದು ವಾರಗಳ ಕಾಲ ಮೇ 28ರ ವರೆಗೆ ಬೇಸಿಗೆ ಸಂಭ್ರಮ ನಡೆಯುತ್ತದೆ ಎಂದರು.