Advertisement

ಬಿಸಿಯೂಟ, ಪಠ್ಯಕ್ಕಷ್ಟೇ ವಿದ್ಯಾರ್ಥಿಗಳು ತೃಪ್ತ !

12:25 AM Jun 03, 2022 | Team Udayavani |

ಕಾರ್ಕಳ: ಹೇಳುವುದಕ್ಕೆ ಸರಕಾರಿ ಅನುದಾನಿತ ಕನ್ನಡ ಶಾಲೆ. ಸರಕಾರದ ಮಾನದಂಡವೇ ಈ ಶಾಲೆಗಳಿಗೆ ಅನ್ವಯವಾಗುತ್ತಿಲ್ಲ. ಪಠ್ಯ, ಊಟ ಬಿಟ್ಟರೇ ಬೇರೇನೂ ಈ ಮಕ್ಕಳಿಗೆ ಇಲ್ಲ. ಈ ಶಾಲೆಗಳ ಬಗ್ಗೆ ಸರಕಾರ ಕೃಪೆ ತೋರಬೇಕು ಎನ್ನುವುದು ಶಿಕ್ಷಣ ಪ್ರೇಮಿಗಳ ಆಗ್ರಹ.

Advertisement

ರಾಜ್ಯದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ 1998ರಿಂದ ಈಚೆಗೆ ನೇಮಕಾತಿ ನಡೆದಿಲ್ಲ. ಪರಿಣಾಮ ಕನ್ನಡ ಮಾಧ್ಯಮದ ಅನುದಾನಿತ ಪ್ರಾಥಮಿಕ ಶಾಲೆಗಳು ಶಿಕ್ಷಕರೇ ಇಲ್ಲದೆ “ಶೂನ್ಯ ಶಾಲೆ’ಗಳು ಎನಿಸಿವೆ. ಬಹುತೇಕ ಕಡೆಗಳಲ್ಲಿ ಶಾಲಾಡಳಿತವೇ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಬೋಧಿಸಲಾಗುತ್ತಿದೆ. ಪ್ರತೀ ವರ್ಷ ಹಲವು ಶಿಕ್ಷಕರು ನಿವೃತ್ತರಾಗುತ್ತಾರೆ. ಹೊಸ ನೇಮಕ ನಡೆಯುತ್ತಿಲ್ಲ. ಹೆಚ್ಚುವರಿ ಶಿಕ್ಷಕರನ್ನು ಕಡಿಮೆ ಶಿಕ್ಷಕರಿರುವ ಶಾಲೆಗಳಿಗೆ ಕಳುಹಿಸಿ ಹೊಂದಾಣಿಕೆ ನೀತಿ ಅನುಸರಿಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸರಕಾರಿ ಶಾಲೆಗಳಿರದ ಅಥವಾ ದೂರ ಇದ್ದ ಸಂದರ್ಭ ಸ್ಥಳೀಯರೇ ಸೇರಿ ಸ್ಥಾಪಿಸಿರುವ ಈ ಶಾಲೆಗಳು ಬಳಿಕ ಸರಕಾರದ ಅನುದಾನದಿಂದ ನಡೆಯುತ್ತಿವೆ. ಸರಕಾರಿ ಶಾಲೆಗಳಂತೆ ಇಲ್ಲಿಯೂ ಶಿಕ್ಷಣ ಸಂಪೂರ್ಣ ಉಚಿತ.

ಸರಕಾರಿ ಶಾಲೆಗಳಿಗಿರುವ ಸವಲತ್ತು ಮಾತ್ರ ಇಲ್ಲ. ಸರಕಾರದ ನಿಯಮದ ಪ್ರಕಾರ ಸರಕಾರಿ ಶಾಲೆಯಲ್ಲಿ 60 ಮಕ್ಕಳಿಗೆ ಐವರು ಶಿಕ್ಷಕರನ್ನು, ಅನುದಾನಿತ ಶಾಲೆಯಲ್ಲಿ 40 ಮಕ್ಕಳಿಗೆ ಓರ್ವ ಶಿಕ್ಷಕನನ್ನು ನೀಡಲಾಗುತ್ತಿದೆ.

ರಾಜ್ಯದ ಒಟ್ಟು ಅನುದಾನಿತ ಶಾಲೆಗಳ ಪೈಕಿ ಶೇ. ಅರ್ಧದಷ್ಟು ಶಾಲೆಗಳು ದ.ಕ., ಉಡುಪಿ ಹಾಗೂ ಬೆಂಗಳೂರಿನಲ್ಲಿವೆ. ದ.ಕ.ದ ಮಂಗಳೂರು ದಕ್ಷಿಣ ಭಾಗ, ಉತ್ತರ ಭಾಗ, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ವಲಯಗಳಿದ್ದು ಸರಕಾರಿ ಪ್ರಾಥಮಿಕ 194, ಪ್ರೌಢ ಶಾಲೆ 116 ಸೇರಿ 310 ಅನುದಾನಿತ ಕನ್ನಡ ಶಾಲೆಗಳಿವೆ. ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಉಡುಪಿ, ಬೈಂದೂರು ವಲಯಗಳಿದ್ದು, ಪ್ರಾಥಮಿಕ 155, ಪ್ರೌಢ 70 ಸೇರಿ 225 ಅನುದಾನಿತ ಕನ್ನಡ ಶಾಲೆಗಳಿವೆ. ಹೆಚ್ಚಿನ ಶಾಲೆಗಳು ಶಿಕ್ಷಕರಿಲ್ಲದೆ “ಶೂನ್ಯ ಶಾಲೆ’ಗಳಾಗಿವೆ.

ಸಮಸ್ಯೆ – ನಿವಾರಣೆಗಳೇನು? :

  • ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಇಲ್ಲ
  • 2007ರಿಂದ ಮ್ಯಾನೇಜ್‌ಮೆಂಟ್‌ ಅನುದಾನ ಬರುತ್ತಿಲ್ಲ.
  • 24 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಅನುದಾನಿತ ಶಾಲೆಗಳಿಗಿಲ್ಲ ಅವಕಾಶ
  • ಸರಕಾರಿ, ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿ ಅನುಪಾತದಲ್ಲೂ ತಾರತಮ್ಯ
  • 1997ರ ಹಿಂದೆ ನೇಮಕವಾದವರಿಗಷ್ಟೇ ಸರಕಾರದಿಂದ ವೇತನ
  • ಸರಕಾರದ ಮಾನದಂಡ ಅನುದಾನಿತ ಶಾಲೆಗಳಿಗೂ ಅನ್ವಯವಾಗಲಿ
  • ಸರಕಾರಿ-ಅನುದಾನಿತ ತಾರತಮ್ಯ ನಿವಾರಣೆಯಾಗಲಿ
  • ಸರಕಾರಿ ಶಿಕ್ಷಕರಿಗಿರುವ “ಜ್ಯೋತಿ ಸಂಜೀವಿನಿ’ ಆರೋಗ್ಯ ಕಾರ್ಡ್‌ ಅನುದಾನಿತ ಶಿಕ್ಷಕರಿಗೂ ಸಿಗಲಿ
Advertisement

ಅನುದಾನಿತ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ವಿಚಾರ ಗಮನದಲ್ಲಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತವೆ. ಆ ಸಂದರ್ಭ ಅನುದಾನಿತ ಶಾಲೆಗಳಿಗೂ ಶಿಕ್ಷಕರನ್ನು ನೀಡುವ ಬಗ್ಗೆ ಚಿಂತನೆ ನಡೆಸುತ್ತೇವೆ.– ಬಿ.ಸಿ ನಾಗೇಶ್‌,  ಶಿಕ್ಷಣ ಸಚಿವ

 

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next