ಚಿಕ್ಕನಾಯಕನಹಳ್ಳಿ: ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದ 3ನೇ ತರಗತಿಯ ವಿದ್ಯಾರ್ಥಿನಿ ಚೈತ್ರಾ ಅಪರೂಪದ ಕಾಯಿಲೆ ಎಪ್ಲಾಸ್ಟಿಕ್ ಅನಿಮಿಯಾದಿಂದ ಬಳಲುತಿದ್ದು, ಹೆತ್ತವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ದಾನಿಗಳ ನೆರವಿಗೆ ಕಾಯುತ್ತಿದ್ದಾರೆ.
ದೇಹದಲ್ಲಿ ರಕ್ತಕಣಗಳ ಉತ್ಪಾದನೆ ಕಡಿಮೆ ಯಾದಾಗ ಈ ಕಾಯಿಲೆ ಬರುವ ಸಾಧ್ಯತೆ ಇದ್ದು, ನಿಗದಿತ ಕಾರಣವಿರುವುದಿಲ್ಲ. 3 ಸಾವಿರ ಜನರಲ್ಲಿ ಒಬ್ಬರಿಗೆ ಬರಬಹುದಾದ ಕಾಯಿಲೆ. ಮೂಳೆ ಮಜ್ಜೆಯ ವೈಫಲ್ಯ ಎಂದು ಎಂದು ವೈದ್ಯರು ಹೇಳುತ್ತಾರೆ.
ಕಾಯಿಲೆ ಲಕ್ಷಣಗಳು: ದೇಹದ ತೂಕ ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ. ರಕ್ತಸ್ರಾವ, ಮೂಗು ಚರ್ಮ, ಮೂತ್ರದಲ್ಲಿ ರಕ್ತ ಕಂಡುಬರುತ್ತದೆ. ಆಯಾಸ, ಉಸಿರಾಟದ ತೊಂದರೆ, ಶೀತ, ಮೂಳೆ ಮಜ್ಜೆಯ ವೈಫಲ್ಯಗಳ ಲಕ್ಷಣ ಕಾಣಬಹುದಾಗಿದೆ.
ಕಾಯಿಲೆಗೆ ಕಾರಣ: ಅಪೌಷ್ಟಿಕತೆಯಿಂದ ಕಾಯಿಲೆ ಬರುತ್ತದೆ. ಅನುವಂಶಿಕ ಮೂಳೆ ಮಜ್ಜೆಯ ವೈಫಲ್ಯ, ರಕ್ತಹೀನತೆ, ದೇಹದಲ್ಲಿನ ರಕ್ತಕಣಗಳ ಉತ್ಪಾದನೆ ನ್ಯೂನತೆಯಿಂದ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿದೆ. ಗಾಣಧಾಳು ಮೇಲನಹಳ್ಳಿ ಗ್ರಾಮದ ಗುರುವಯ್ಯ ಎಂಬುವವರ ಮಗಳು ಚೈತ್ರಾಳಿಗೆ ಕಾಯಿಲೆ ಬಂದಿದ್ದು, ಚಿಕಿತ್ಸೆಗೆ 15 ಲಕ್ಷ ರೂ. ಬೇಕಾಗಬಹುದು.
ಆರೋಗ್ಯ ಇಲಾಖೆಗೆ ಮಾಹಿತಿ ಇಲ್ಲ: ಅಪರೂಪದ ಎಪ್ಲಾಸ್ಟಿಕ್ ಅನಿಮಿಯಾ ಕಾಯಿಲೆ ತಾಲೂಕಿನಲ್ಲಿ ವಿದ್ಯಾರ್ಥಿನಿಗೆ ಬಂದಿರುವ ಬಗ್ಗೆ ತಾಲೂಕು ವೈದ್ಯಾದಿಕಾರಿಗಳಿಗೆ ತಿಳಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕಾಯಿಲೆಯಿಂದ ಬಳಲುತ್ತಿರುವ ವಿದ್ಯಾರ್ಥಿನಿಗೆ ಸಹಾಯ ಮಾಡುವಂತೆ ಕೆಲವರು ಸಂದೇಶ ವೈರಲ್ ಆಗಿದ್ದರಿಂದ ವಿಷಯ ಗೊತ್ತಾಗಿದೆ. ಅಪೌಷ್ಟಿಕತೆ, ರೋಗಗಳ ಬಗ್ಗೆ ಜನರಿಗೆ ತಿಳಿಸಬೇಕಾದ ತಾಲೂಕು ಆರೋಗ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಅನುಮಾನ ಪಡುವಂತಾಗಿದ್ದು, ಇನ್ನು ಮುಂದಾ ದರೂ ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿ ಸುವುದೇ ಎಂಬುದನ್ನು ಕಾದುನೋಡಬೇಕಿದೆ.