ನವದೆಹಲಿ: ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ತನ್ನ ಏಳನೆಯ ವಿದ್ಯಾರ್ಥಿ ವೀಸಾ ದಿನವನ್ನು ದೇಶಾದ್ಯಂತ ನವದೆಹಲಿ, ಚೆನ್ನೈ, ಹೈದರಾಬಾದ್, ಕೊಲ್ಕತಾ ಮತ್ತು ಮುಂಬೈ ದೂತಾವಾಸ ಕಚೇರಿಗಳಲ್ಲಿ ನಡೆಸಿದ್ದು ಸುಮಾರು 3,500 ಭಾರತೀಯ ವಿದ್ಯಾರ್ಥಿ ವೀಸಾ ಅರ್ಜಿದಾರರ ಸಂದರ್ಶನ ನಡೆಸಿತು.
ವಿಶ್ವದಲ್ಲೆ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿರುವ ಅಮೆರಿಕವನ್ನು ಉನ್ನತ ವಿದ್ಯಾಭ್ಯಾಸ ಮಾಡಲು ಆಯ್ಕೆ ಮಾಡಿ ಕೊಂಡು, ವೀಸಾ ಪಡೆದು ವೃದ್ಧಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಾಲಿಗೆ ಸೇರಲು ಅಣಿಯಾದವರನ್ನು ರಾಯಭಾರಿ ಎರಿಕ್ ಗಾರ್ಸೆಟ್ಟಿ ಮತ್ತು ಭಾರತದಾದ್ಯಂತ ಕಾನ್ಸುಲ್ ಜನರಲ್ ಗಳು ಅಭಿನಂದಿಸಿದರು.
“ನಾನು ಮೊದಲಿಗೆ ಯುವ ವಿದ್ಯಾರ್ಥಿಯಾಗಿ ಭಾರತಕ್ಕೆ ಬಂದೆ ಮತ್ತು ಈ ಅನುಭವಗಳು ಹೇಗೆ ಪರಿವರ್ತನೆ ತರುತ್ತವೆ ಎನ್ನುವುದನ್ನು ನನ್ನದೇ ಜೀವನದಲ್ಲಿ ಕಂಡಿದ್ದೇನೆ” ಎಂದು ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದರು. “ವಿದ್ಯಾರ್ಥಿ ವಿನಿಮಯವು ಅಮೆರಿಕ- ಭಾರತ ಬಾಂಧವ್ಯದಲ್ಲಿ ಅತ್ಯಂತ ಮಹತ್ವದ್ದು ಮತ್ತು ಉತ್ತಮ ಕಾರಣವೂ ಇದೆ. ಅಮೇರಿಕ ಶಿಕ್ಷಣವು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಲ್ಲದೆ, ಜ್ಞಾನದ ಜಾಗತಿಕ ಜಾಲಕ್ಕೆ ಲಭ್ಯತೆ ನೀಡುತ್ತದೆ, ಜೀವನಪೂರ್ತಿ ಅರ್ಥ ಮಾಡಿಕೊಳ್ಳಲು ತಳಹದಿ ರೂಪಿಸುತ್ತದೆ. ಆದ್ದರಿಂದಲೇ ಈ ಅವಕಾಶಗಳನ್ನು ಎಷ್ಟು ಸಾಧ್ಯವೋ ಅಷ್ಟು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ನಾವು ಇಲ್ಲಿದ್ದೇವೆ” ಎಂದರು.
ವಿದ್ಯಾರ್ಥಿ ವೀಸಾ ದಿನವು ಅಮೆರಿಕ ಮತ್ತು ಭಾರತದ ನಡುವೆ ಉನ್ನತ ಶೈಕ್ಷಣಿಕ ಸಹಯೋಗಗಳ ಸುದೀರ್ಘ ಬಾಂಧವ್ಯವನ್ನು ಸಂಭ್ರಮಿಸುತ್ತದೆ. ಈ ವರ್ಷ, 200,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೆರಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ, ಪ್ರಸ್ತುತ ಅಮೆರಿಕದಲ್ಲಿರುವ 20 ಪ್ರತಿಶತದಷ್ಟು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಿದ್ದಾರೆ.
Related Articles
“ಕಳೆದ ವರ್ಷ ದಾಖಲೆಯ 125,000 ಭಾರತೀಯರಿಗೆ ವಿದ್ಯಾರ್ಥಿ ವೀಸಾಗಳನ್ನು ನೀಡಲಾಗಿದೆ, ಅದು ಬೇರಾವುದೇ ದೇಶಗಳ ಪೌರರಿಗಿಂತ ಹೆಚ್ಚಾಗಿದೆ. ಕಳೆದ ವರ್ಷ ಪ್ರತಿ ಐದು ವಿದ್ಯಾರ್ಥಿ ವೀಸಾಗಳಲ್ಲಿ ಒಂದು ಭಾರತಕ್ಕೆ ನೀಡಲಾಗಿದೆ. ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ವಿದ್ಯಾರ್ಥಿಗ ಸಂದರ್ಶನ ಮಾಡುತ್ತೇವೆ” ಎಂದು ಭಾರತದ ಕಾನ್ಸುಲರ್ ಅಫೇರ್ಸ್ ನ ಪ್ರಭಾರ ಮಿನಿಸ್ಟರ್ ಕೌನ್ಸೆಲ್ಲರ್ ಬ್ರೆಂಡೆನ್ ಮುಲ್ಲಾರ್ಕೀ ಹೇಳಿದರು.
ಅಮೆರಿಕ ರಾಯಭಾರ ಕಚೇರಿಯು ಅಮೆರಿಕದಲ್ಲಿ ಅಧ್ಯಯನ ಮಾಡಲು ಆಸಕ್ತಿ ಇರುವ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಮತ್ತು ವೀಸಾ ಪ್ರಕ್ರಿಯೆಗಳಿಗೆ ವಿಶ್ವಾಸಾರ್ಹ ಮತ್ತು ಸಮಗ್ರ ಮಾಹಿತಿಯೊಂದಿಗೆ ನೆರವಾಗಲು ಅಮೆರಿಕ ಸರ್ಕಾರದ ಪ್ರಾಯೋಜಿತ ಸಲಹಾ ಸೇವೆ ಎಜುಕೇಷನ್ ಯು.ಎಸ್.ಎ. ಸಂಪರ್ಕಿಸಲು ಪ್ರೋತ್ಸಾಹಿಸುತ್ತದೆ. ಎಜುಕೇಷನ್ ಯುಎಸ್ಎ ಮಾನ್ಯತೆ ಪಡೆದ ಅಮೆರಿಕದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುತ್ತಿದ್ದು ಭಾರತದಾದ್ಯಂತ ಎಂಟು ಸಲಹಾ ಕೇಂದ್ರಗಳನ್ನು ಹೊಂದಿದೆ. ವಿದ್ಯಾರ್ಥಿಗಳು educationusa.state.gov ಭೇಟಿ ನೀಡಬಹುದು ಅಥವಾ ಹೆಚ್ಚಿನ ಮಾಹಿತಿಗೆ ಫೇಸ್ ಬುಕ್ ಮತ್ತು ಇನ್ಸ್ ಟಾಗ್ರಾಂನಲ್ಲಿ @educationUSAIndia ಭೇಟಿ ನೀಡಬಹುದು.