ಚಿಕ್ಕೋಡಿ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರ್ತಿಸಿ, ಅವರನ್ನು ಶಾಲಾ ಮುಖ್ಯವಾಹಿನಿಗೆ ಕರೆತಂದು ಸಾಕ್ಷರತೆ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಈಗಾಗಲೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ವಲಯದಲ್ಲಿ ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳ ಮೂಲಕ ಶಾಲೆ ಬಿಟ್ಟ ಮಕ್ಕಳ ಗುರ್ತಿಸುವ ಸಮೀಕ್ಷೆ ಕಾರ್ಯ ಆರಂಭವಾಗಿದೆ.
ರಾಜ್ಯದ ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ಮೂಲಕ ಸಮೀಕ್ಷೆ ಕಾರ್ಯ ನಡೆಸಿದೆ. ಶಾಲೆ ಬಿಟ್ಟ ಮಕ್ಕಳನ್ನು ಹೇಗೆ ಗುರ್ತಿಸಬೇಕೆಂದು ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಮಕ್ಕಳ ಕುರಿತು ಆ್ಯಪ್ ದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಗೋಕಾಕ, ಮೂಡಲಗಿ ಸೇರಿ ಎಂಟು ವಲಯಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಗುರ್ತಿಸುವ ಸಮೀಕ್ಷೆ ಜೋರಾಗಿ ನಡೆದಿದೆ. ಪಾಲಕರು ಸಮರ್ಪಕ ಮಾಹಿತಿ ನೀಡಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಶಾಲೆಯಿಂದ ಹೊರಗುಳಿಯುವ ಕಾರಣಗಳು: ಶಾಲೆ ಬಿಟ್ಟ ಮಕ್ಕಳನ್ನು ಗುರ್ತಿಸುವ ಸಮೀಕ್ಷೆ ಕಾರ್ಯದಲ್ಲಿ ಸರ್ಕಾರ ಮೊಬೆ„ಲ್ ಆ್ಯಪ್‌ದಲ್ಲಿ ಕೆಲವೊಂದು ಕಾರಣ ಕೇಳಿದೆ. ಶಾಲೆ ದೂರವಿರುವುದು, ಸ್ವಂತ ಮನೆ ಕೆಲಸ, ಬೇರೆಯವರ ಮನೆಕೆಲಸ, ಇತರೆ ದುಡಿಮೆ ಕೆಲಸದಲ್ಲಿ ತೊಡಗಿಕೊಳ್ಳುವುದು, ಮದುವೆಯಾಗಿರುವುದು, ಹೆಣ್ಣು ಮಗು ಪ್ರೌಢಾವಸ್ಥೆಗೆ ಬಂದಿರುವುದು, ಶಾಲಾ ಪರಿಸರ ಆಕರ್ಷಿಣೆಯವಾಗಿಲ್ಲದಿರುವುದು, ವಲಸೆ ಜೀವನ, ಶಿಕ್ಷಕರ ಭಯ, ಬಾಲಕಾರ್ಮಿಕರಾಗಿರುವುದು, ಪೋಷಕರ ನಿರಾಸಕ್ತಿ ಸೇರಿದಂತೆ ಹಲವು ಕಾರಣ ಕೇಳಿದೆ. ಸಮೀಕ್ಷೆಗೆ ಹೋದ ಸಿಬ್ಬಂದಿಗಳು ಮೊಬೈಲ್ ಅಪ್ಲೀಕೇಶನ್‌ದಲ್ಲಿ ಸಮರ್ಪಕ ಮಾಹಿತಿ ಪಡೆಯಬೇಕಿದೆ.
ಶಾಲೆ ಬಿಟ್ಟ ಮಕ್ಕಳ ಬಗ್ಗೆ ವಿಶೇಷ ಗುರ್ತಿಸುವ ಸ್ಥಳಗಳು: ಹೋಟೆಲ್, ಛತ್ರ, ಚಿತ್ರಮಂದಿರ, ಇಟ್ಟಿಗೆ ತಯಾರಿಕೆ ಘಟಕ, ಸಣ್ಣ ಕಾರ್ಖಾನೆಗಳು, ಪುರಿಭಟ್ಟಿ, ತೋಟಗಾರಿಕೆ ಪ್ರದೇಶ, ಕ್ವಾರಿ, ರಸ್ತೆ ಕಾಮಗಾರಿ ಸ್ಥಳ, ಬುಡಕಟ್ಟು ಪ್ರದೇಶ, ಧಾರ್ಮಿಕ ಕೇಂದ್ರ, ಬಸ್ ಮತ್ತು ರೈಲು ನಿಲ್ದಾಣ, ಅನಾಥಾಶ್ರಮ, ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳಿಗೆ ಸಿಬ್ಬಂದಿಗಳು ಭೇಟಿ ನೀಡಿ ಸಮೀಕ್ಷೆ ಕಾರ್ಯ ನಡೆಸಲು ಸರ್ಕಾರ ಸೂಚಿಸಿದೆ.
ಶಾಲೆ ಬಿಟ್ಟ ಮಕ್ಕಳ ಕುರಿತು ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳು ನಡೆಸಿದ ಸಮೀಕ್ಷೆ ಕಾರ್ಯದಲ್ಲಿ ಮೊಬೈಲ್ ಅಪ್ಲೀಕೇಶನ್‌ದಲ್ಲಿ ದಾಖಲು ಮಾಡಿದ ನಿಖರ ಮಾಹಿತಿಯನ್ನು ದಿನಂಪ್ರತಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸಮೀಕ್ಷೆ ಕಾರ್ಯ ಮುಗಿದ ಬಳಿಕ ಮಾಹಿತಿ ಶಿಕ್ಷಣ ಇಲಾಖೆಗೆ ರವಾನೆಯಾಗುತ್ತಿದೆ.