ಕೊಪ್ಪಳ: ಪ್ರಸ್ತುತ ದಿನದಲ್ಲಿ ಮಾನವನೇ ತನ್ನ ಸ್ವಾರ್ಥತೆಯಿಂದ ನಿಸರ್ಗ ಸಂಪತ್ತನ್ನು ನಾಶಪಡಿಸುತ್ತಿದ್ದಾನೆ. ಇದರಿಂದ ಮುಂದೆ ದೊಡ್ಡ ಗಂಡಾಂತರ ಎದುರಾಗುವ ಸಾಧ್ಯತೆಯಿದೆ. ಇದನ್ನರಿತು ವಿದ್ಯಾರ್ಥಿಗಳು ಒಂದೊಂದು ಸಸಿ ನೆಟ್ಟು ಗಿಡವನ್ನಾಗಿ ಬೆಳೆಸುವ ಜವಾಬ್ದಾರಿ ಹೊರಬೇಕಿದೆ ಎಂದು ರೆಡ್‌ಕ್ರಾಸ್ ಸಂಯೋಜಿಕ ಶೋಭಾ ಕೆ.ಎಸ್. ಅವರು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ಯುವರೆಡ್ ಕ್ರಾಸ್ ಮತ್ತು ಎನ್ನೆಸ್ಸೆಸ್ ಘಟಕದ ಆಶ್ರಯದಲ್ಲಿ ನಡೆದ ವಿಶ್ವ ಭೂದಿನ, ಭಾರತೀಯ ಯುವ ರೆಡ್ ಕ್ರಾಸ್ ದಿನ ಆಚರಣೆಯಲ್ಲಿ ಮಾತನಾಡಿದರು.
ನಿಸರ್ಗ ಸಂಪತ್ತು ಸಂಪೂರ್ಣವಾಗಿ ನಾಶವಾಗುತ್ತಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ವಿಶ್ವವನ್ನೇ ನಾಶ ಮಾಡುತ್ತಿದ್ದಾನೆ. ಅದನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರತಿಯೊಂದು ಜೀವಿಯು ನಿಸರ್ಗವನ್ನೇ ಅವಲಂಬಿಸಿದೆ. ಅದನ್ನು ನಾವು ಉಳಿಸಬೇಕೇ ವಿನಃ ಅಳಿಸಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಗಿಡವನ್ನು ನೆಟ್ಟು ಸಂಪೂರ್ಣವಾಗಿ ಮರವನ್ನಾಗಿ ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಆಗ ಮಾತ್ರ ಓಝೋನ್ ಪದರ ನಾಶವಾಗದೇ ಸಕಾಲಕ್ಕೆ ಮಳೆ, ಬೆಳೆಯಾಗುತ್ತಿಲ್ಲ ಎಂದರು.
ಮನುಷ್ಯರ ಜೀವ ಉಳಿಸುವಲ್ಲಿ ರೆಡ್‌ಕ್ರಾಸ್ ಸಂಸ್ಥೆ ಪ್ರಮುಖ ಪಾತ್ರ ಮುಖ್ಯವಾದದ್ದು. ಈ ದಿಸೆಯಲ್ಲಿ ಕೊಪ್ಪಳದ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ಉಪನ್ಯಾಸಕರಾದ ರವೀಂದ್ರ ಬಗಾಡೆ ಮಾತನಾಡಿ, ಪ್ರಕೃತಿ ವಿಕೋಪಗಳನ್ನು ತಡೆಯುವುದರಿಂದ ಮಾನವ ಮತ್ತು ಜೀವ ಕುಲಕ್ಕೆ ಶಾಂತಿ ದೊರುಕುತ್ತದೆ ಎಂದರು.
ಉಪನ್ಯಾಸಕ ಸುರೇಶ ಕಿನ್ನಾಳ, ಗ್ರಂಥಪಾಲಕ ರವೀಂದ್ರ ಮುದ್ದಿ ಉಪಸ್ಥಿತರಿದ್ದರು. ಬಿಎಸ್ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿ ಪ್ರವೀಣ ನಿರೂಪಿಸಿದರು. ವಿದ್ಯಾರ್ಥಿ ರಾಜಾಸಾಬ್ ವಂದಿಸಿದರು.