Advertisement

ಯಕ್ಷಗಾನದಿಂದ ವಿದ್ಯಾರ್ಥಿ ವ್ಯಕ್ತಿತ್ವ ವಿಕಸನ: ಪೇಜಾವರ ಶ್ರೀ

11:08 AM Dec 17, 2017 | Team Udayavani |

ಉಡುಪಿ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹೊಂದಲು ವಿದ್ಯೆಯ ಜತೆಗೆ ಕಲೆ, ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಯಕ್ಷ ಗಾನ ಕಲಿತು, ಪ್ರದರ್ಶನಗಳಲ್ಲಿ ಭಾಗ ವಹಿಸುವುದರಿಂದ ವಿದ್ಯಾರ್ಥಿ ಗಳ ಮಾನಸಿಕ ವಿಕಸನ ಸಾಧ್ಯ. ಜತೆಗೆ ನಮ್ಮ ಸಂಸ್ಕೃತಿಯ ಅರಿವು ಕೂಡ ಬೆಳೆಯುತ್ತದೆ ಎಂದು ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು. 

Advertisement

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್‌ ಆಯೋಜಿಸಿದ ಕಿಶೋರ ಯಕ್ಷಗಾನ ದಶಮಾನ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಆಶೀರ್ವಚನ ನೀಡಿದರು. ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ನಮ್ಮ ನಾಡಿನ ಶ್ರೇಷ್ಠ ಕಲೆ ಯಕ್ಷಗಾನ ಅವನತಿ ಹೊಂದುವ ಕಾಲ ಎದುರಾಗಿತ್ತು. ಆದರೆ ಯಕ್ಷಗಾನ ಕಲಾರಂಗ ಸೂಕ್ತ ಸಮಯದಲ್ಲಿ ಯಕ್ಷಗಾನವನ್ನು ಉಳಿಸಿ ಬೆಳಸುವ ಕಾರ್ಯ ಮಾಡುತ್ತಿದೆ. ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳಿಗೆ ಯಕ್ಷಗಾನದ ಬಗ್ಗೆ ತರಬೇತಿ, ಅರಿವು ಮೂಡಿಸುತ್ತಿದೆ ಎಂದರು.

ಯಕ್ಷನಿಧಿ ಡೈರಿ-2018ನ್ನು ಪೇಜಾವರ ಶ್ರೀಗಳು ಬಿಡುಗಡೆಗೊಳಿಸಿದರು. ಯಕ್ಷಶಿಕ್ಷಣ ಟ್ರಸ್ಟ್‌ ವತಿಯಿಂದ ಯು. ದುಗ್ಗಪ್ಪ ಅವರ ನೆನಪಿನಲ್ಲಿ ನೀಡುವ ಯಕ್ಷಗುರು ಪ್ರಶಸ್ತಿಯನ್ನು ಭಾಗವತ ತೋನ್ಸೆ ಜಯಂತ್‌ ಕುಮಾರ್‌ ಅವರಿಗೆ ಪ್ರದಾನ ಮಾಡಲಾಯಿತು. ಯಕ್ಷಶಿಕ್ಷಣದ ಗುರುಗಳನ್ನು ಸಮ್ಮಾನಿಸಲಾಯಿತು. 

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಶುಭ ಹಾರೈಸಿದರು. ಡಾ| ನಿ.ಬೀ. ವಿಜಯ ಬಲ್ಲಾಳ್‌, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌ ಉಪಸ್ಥಿತರಿದ್ದರು. ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಪ್ರಸ್ತಾವನೆಗೈದರು. ಕಲಾರಂಗದ ಉಪಾಧ್ಯಕ್ಷ ಎಂ. ಗಂಗಾಧರ ರಾವ್‌ ಸ್ವಾಗತಿಸಿ, ಎಂ. ನಾರಾಯಣ ಹೆಗ್ಡೆ ನಿರೂಪಿಸಿದರು. ಶೃಂಗೇಶ್ವರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next