Advertisement

ವಿದ್ಯಾರ್ಥಿ ಸಂಸತ್‌ ಅಧಿವೇಶನ

06:05 PM Dec 12, 2019 | mahesh |

ಏನ್ರೀ ನೀವು! ಮತ ಕೇಳ್ಳೋಕೆ ಬರುವಾಗ ಇದ್ದ ನಿಮ್ಮ ನಿಯತ್ತು ಈಗಿಲ್ಲ . ಚುನಾವಣಾ ಮುನ್ನ ನಿಮ್ಮ ಪ್ರಣಾಳಿಕೆಗಳಲ್ಲಿ ನೀವು ಘೋಷಿಸಿ ಕೊಂಡ ಯಾವ ಕೆಲಸಗಳೂ ಒಂದೂ ಸರಿಯಾಗಿ ಆಗ್ತಾ ಇಲ್ಲರ್ರೀ! ಬರೇ ಆಶ್ವಾಸನೆ ಕೊಡೋದೇ ಆಯ್ತು ನಿಮ್ದು. ನಿಮ್ಮ ಜವಾಬ್ದಾರಿಗಳ ಬಗ್ಗೆ ಅರಿವಿದೆಯಾ? ಅಧಿಕಾರ ಮಾಡೋಕಾಗೋಲ್ಲ ಅಂದ್ರೆ ಸುಮ್ನೆ ರಾಜೀನಾಮೆ ಕೊಟ್ಟು ಬಿಡಿ”- ಹೀಗಂಥ ವಿರೋಧ ಪಕ್ಷದವರು ಹರಿಹಾಯ್ದರೆ, “”ನೋಡ್ರೀ, ನಮ್ಮ ಅಧಿಕಾರವನ್ನು ಸರಿಯಾದ ರೀತಿಯ ಲ್ಲಿಯೇ ಮಾಡುತ್ತಿದ್ದೇವೆ. ಸುಮ್ಮಸುಮ್ಮನೆ ನೀವು ಆರೋಪ ಮಾಡ್ಬೇಡಿ!” ಹೀಗೆ ಸಮಜಾಯಿಷಿ ಕೊಟ್ಟುಕೊಳ್ಳುವ ಆಡಳಿತ ಪಕ್ಷದವರು.

Advertisement

ಹೀಗೆ ಒಬ್ಬರ ಮೇಲೊಬ್ಬರು ಕೆಸರೆರಚಾಡುತ್ತ ಇದ್ದಾರೆ. ಎಲ್ಲರೂ ಒಂದೇ ಸಮನೆ ಜೋರಾಗಿ ತಮ್ಮ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಮೇಲೊಬ್ಬರು ದೊಡ್ಡ ಕುರ್ಚಿಯಲ್ಲಿ ಕುಳಿತು ಸಭೆಯ ಶಾಂತತೆಯನ್ನು ಕಾಪಾಡಲು ಪ್ರಯತ್ನಪಡುತ್ತ ಇರುವ ಸನ್ನಿವೇಶ ನಾವೆಲ್ಲರೂ ನೋಡಿಯೇ ಇದ್ದೇವೆ. ಅದರ ಆ ಕಚ್ಚಾಟ, ಕಿರುಚಾಟ ನೋಡಲಾರದೆ ಅಸಲಿಗೆ ಕೇಳಲಾರದೆ ಕೆಲವೊಮ್ಮೆ ಟಿವಿ ಆಫ್ ಮಾಡಿರುತ್ತೇವೆ. ಅದುವೇ ನಮ್ಮ ಸಂಸತ್ತುಗಳ ಅಧಿವೇಶನಗಳು. ಇಂತಹದ್ದೇ ಒಂದು ಪರಿಣಾಮಕಾರಿ ಸನ್ನಿವೇಶ ನಮ್ಮ ಶಾಲೆಯಲ್ಲಿಯೂ ನಡೆಯಿತು. ಅದುವೇ ನಮ್ಮ ವಿದ್ಯಾರ್ಥಿಗಳ ಅಣುಕು ಸಂಸತ್‌ ಅಧಿವೇಶನ.

ಅದು ನಮ್ಮ ಯಾವ ರಾಜ್ಯ ಅಥವಾ ಕೇಂದ್ರ ಸರಕಾರದ ಅಧಿವೇಶನಕ್ಕೆ ಕಡಿಮೆ ಇರಲಿಲ್ಲ. ಥೇಟ್‌ ನಮ್ಮ ರಾಜಕೀಯ ನಾಯಕರುಗಳ ಹಾಗೆ ವಿಧಾನಮಂಡಲ ಹಾಗೂ ಸಂಸತ್ತುಗಳ ಕಲಾಪಗಳು ಹೇಗೆ ನಡೆಯುತ್ತವೆಯೋ ಅದೇ ರೀತಿಯಲ್ಲಿ ಸುವ್ಯವಸ್ಥಿತವಾಗಿ ಸಜ್ಜಾಗಿತ್ತು ಶಾಲೆಯ ವೇದಿಕೆ. ಚಳಿಗಾಲದಲ್ಲಿಯೂ ನಮ್ಮ ಮಕ್ಕಳು ತಮ್ಮ ಆರೋಪ-ಪ್ರತ್ಯಾರೋಪಗಳಿಂದ ಸದನದ ಕಾವೇರಿಸಲು ಸಕಲ ಶಾಸ್ತ್ರಸನ್ನದ್ಧರಾಗಿ ತಯಾರಾಗಿದ್ದರು.

ಸಮಯಕ್ಕೆ ಸರಿಯಾಗಿ ಸಭಾಧ್ಯಕ್ಷರು ಮುಖ್ಯಮಂತ್ರಿಗಳನ್ನೊಳಗೊಂಡಂತೆ ಆಡಳಿತ ಪಕ್ಷದ ಮಂತ್ರಿಗಳು, ವಿರೋಧ ಪಕ್ಷದ ನಾಯಕರುಗಳೆಲ್ಲ ತಮ್ಮ ತಮ್ಮ ಗೊತ್ತುಪಡಿಸಿದ ಆಸನಗಳಲ್ಲಿ ಕುಳಿತುಕೊಂಡರು. ರಾಷ್ಟ್ರಪತಿಯ ಸ್ಥಾನ ನಿರ್ವಹಿಸಿದ ನಮ್ಮ ಶಾಲೆಯ ಮುಖ್ಯ ಶಿಕ್ಷಕಿಯವರಿಂದ ಅಧಿವೇಶನಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದೇ ತಡ, ಆಡಳಿತ ಪಕ್ಷದವರ ಮಂತ್ರಿಗಳಿಗೆ ವಿರೋಧ ಪಕ್ಷದವರು ಒಂದೊಂದೇ ಪ್ರಶ್ನೆಗಳ ಬಾಣ ಬಿಡುತ್ತ ಅವರ ಕಾರ್ಯಚಟುವಟಿಕೆಗಳಲ್ಲಿನ ಲೋಪದೋಷಗಳನ್ನು ಎತ್ತಿ ಹಿಡಿದರು. ನೋಡನೋಡುತ್ತಿದ್ದಂತೆಯೇ ಇಬ್ಬರ ನಡುವೆ ಜಟಾಪಟಿ ಮಾತಿನ ಚಕಮಕಿ ಜೋರಾಗಿ ರಾಜಕೀಯ ಜಗಳ ತಾರಕಕ್ಕೇರಿತು. ಇಲ್ಲಿಯ ತನಕ ಶಾಂತವಾಗಿದ್ದ ಸದನ ಅಕ್ಷರಶಃ ಕದನಕ್ಕೆ ತಿರುಗಿ ಆರೋಪ-ಪ್ರತ್ಯಾರೋಪಗಳ ಬಾಣಗಳನ್ನು ಚಿಮ್ಮಿಸುವ ರಣರಂಗವಾಗಿ ಮಾರ್ಪಾಡಾಗಿತ್ತು. ತತ್‌ಕ್ಷಣ ನಮ್ಮ ಶಿಕ್ಷಕರೊಬ್ಬರು ಅವರನ್ನೆಲ್ಲ ಸಮಾಧಾನಪಡಿಸಿ ಶಾಂತ ರೀತಿಯ ಕಲಾಪಕ್ಕೆ ಅನುವು ಮಾಡಿಕೊಟ್ಟರು. ಅಸಲಿಗೆ ನಮ್ಮ ಸಂಸತ್ತು ಮತ್ತು ರಾಜ್ಯ ವಿಧಾನ ಮಂಡಳಗಳ ಕಲಾಪ ನೋಡಿದವರಿಗೆ ಇದು “ಜಗಳದ ಮನೆ’ ಎನ್ನುವ ಭಾವ ಮೂಡಿರುವುದು ಸಹಜ. ಆದರೆ, ಅದು ನಮ್ಮ ಮಕ್ಕಳ ಎಳೆಯ ಮನಸ್ಸಿನ ಮೇಲೆ ಎಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬುದಕ್ಕೆ ಮೊನ್ನೆ ನಮ್ಮ ಶಾಲೆಯಲ್ಲಿ ನಡೆದ ಈ ವಿದ್ಯಾರ್ಥಿ ಅಣುಕು ಸಂಸತ್‌ ಅಕ್ಷರಶಃ ಸಾಕ್ಷಿಯಾಗಿತ್ತು.

ವಿದ್ಯಾರ್ಥಿ ಸ್ಪೀಕರ್‌ ಸದನವನ್ನು ಕೊಂಚ ಸಮಯದವರೆಗೆ ಮುಂದೂಡಿ ಪುನಃ ಪ್ರಾರಂಭವಾದ ನನ್ನ ಮಕ್ಕಳ ಸಂಸತ್ತು ಬೇರೆ ರೀತಿಯ ತಿರುವು ಪಡೆದುಕೊಂಡಿತ್ತು. ವಿರೋಧ ಪಕ್ಷದವರು ಒಬ್ಬೊಬ್ಬರಾಗಿ ಎದ್ದು ನಿಂತು ತಮ್ಮ ಸಮಸ್ಯೆಗೆ ಸಂಬಂಧಿಸಿದ ಇಲಾಖೆಗಳ ಮಂತ್ರಿಗಳಿಗೆ ನೇರವಾಗಿ ತಮ್ಮ ಪ್ರಶ್ನೆಗಳನ್ನು ಕೇಳಿದರು. ಮೊದಲ ಪ್ರಶ್ನೆ ಸಾರಿಗೆ ಸಚಿವರಿಗೆ ವಿರೋಧ ಪಕ್ಷದವರಿಂದ ಹೀಗಿತ್ತು: “”ಮಾನ್ಯ ಸ್ಪೀಕರ್‌ರವರೆ, ನನ್ನ ಪ್ರಶ್ನೆ ಸಾರಿಗೆ ಸಚಿವರಿಗೆ. ಇತ್ತೀಚೆಗೆ ಶಾಲೆಗೆ ಬಸ್ಸಿನಲ್ಲಿ ಬರುವ ಕೆಲವು ವಿದ್ಯಾರ್ಥಿಗಳು ಪ್ರತಿದಿನ ಬೆಳಗಿನ ಪ್ರಾರ್ಥನೆ ಸಮಯಕ್ಕೆ ತಡವಾಗಿ ಬರುತ್ತಿದ್ದಾರೆ. ಇದಕ್ಕೆ ಕಾರಣವೇನು?” ಈ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರು, “”ಮಾನ್ಯ ಸ್ಪೀಕರ್‌ರವರೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಪ್ರಕೃತಿ ವಿಕೋಪದಿಂದಾಗಿ ಚಾರ್ಮಾಡಿ ಆಚೆ ನೆರೆ ಪ್ರವಾಹದಿಂದ ರಸ್ತೆಗಳು ತೀವ್ರವಾಗಿ ಹಾನಿಗೆ ಒಳಗಾಗಿದ್ದು ಸೂಕ್ತ ಬಸ್ಸುಗಳ ಕೊರತೆ ಇದೆ. ಹಾಗಾಗಿ, ಕೆಲವು ವಿದ್ಯಾರ್ಥಿಗಳು ಮಾತ್ರ ಶಾಲೆಗೆ ತಡವಾಗಿ ಬರುತ್ತಿದ್ದಾರೆ. ಆದಷ್ಟು ಬೇಗ ಇದಕ್ಕೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುತ್ತೇವೆ” ಎಂದು ಸಮಜಾಯಿಷಿಕೊಟ್ಟರು. ನಂತರ ಬಂದ ಪ್ರಶ್ನೆ ಮತ್ತು ಅದಕ್ಕೆ ಬಂದ ಉತ್ತರ ನಿಜಕ್ಕೂ ಮಕ್ಕಳ ವಯಸ್ಸಿಗೂ ಮೀರಿದ್ದಾಗಿತ್ತು. ಏನದು?

Advertisement

“”ಮಾನ್ಯ ಸ್ಪೀಕರ್‌ರವರೆ, ಶಿಸ್ತು ಮಂತ್ರಿಗಳಿಗೆ ಈ ಪ್ರಶ್ನೆ, ನಮ್ಮ ಶಾಲೆಯ ಪರಿಸರ ಅತ್ಯಂತ ಸ್ವತ್ಛವಾಗಿದ್ದು, ಒಣತ್ಯಾಜ್ಯ, ಹಸಿ ತ್ಯಾಜ್ಯಕ್ಕೆ ಬೇರೆ ಬೇರೆ ಕಸದ ಬುಟ್ಟಿಗಳ ವ್ಯವಸ್ಥೆ ಮಾಡಿದ್ದೀರಾ? ಅದು ಒಳ್ಳೆಯ ಕೆಲಸ. ಆದರೆ, ಇತ್ತೀಚೆಗೆ ಶಾಲಾ ಕೊಠಡಿಯೊಳಗೆ ಅಲ್ಲಲ್ಲಿ ಕಸ ಕಂಡುಬರುತ್ತಿದೆ. ಇದನ್ನು ಯಾಕೆ ನೀವು ಗಂಭೀರವಾಗಿ ಪರಿಗಣಿಸಿಲ್ಲ. ಸಂಪೂರ್ಣ ಶಾಲೆ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು ನಿಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸವಲ್ಲವೆ?” ಎಂದು ಕೇಳಿದಾಗ, ಇದಕ್ಕೆ ಉತ್ತರಿಸಲು ಶಿಸ್ತಿನ ಮಂತ್ರಿಗಳು ಗಾಂಭೀರ್ಯದಿಂದ ಎದ್ದು ನಿಂತು, ಮೇಲ್ದನಿಯಲ್ಲಿ ನೋಡಿ, “”ಪರಿಸರ ರಕ್ಷಿಸುವ ಜವಾಬ್ದಾರಿ ನಮಗೊಬ್ಬರದ್ದೇ ಅಲ್ಲ. ಅದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು! ಕಸ ಬಿದ್ದಿರುವುದನ್ನು ನೋಡಿದಾಗ ನೀವೂ ಕೂಡ ಅದನ್ನು ತೆಗೆದು ಕಸದ ಬುಟ್ಟಿಗೆ ಹಾಕಬಹುದಿತ್ತಲ್ಲವೆ! ಪರಿಸರ ಎಲ್ಲರಿಗೂ ಸೇರಿದ್ದು. ಎಲ್ಲವೂ ಅಧಿಕಾರ ಪಕ್ಷದವರೇ ಮಾಡಬೇಕಾ?” ಎಂದು ಪ್ರತಿಷ್ಠೆಯಿಂದ ಉತ್ತರಿಸಿದ. ಇದು ನಿಜವಾಗಿಯೂ ಮಕ್ಕಳಲ್ಲಿನ ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಾಗಿತ್ತು. ಸ್ವತ್ಛ ಭಾರತದ ಕನಸು ಕೇವಲ ಒಬ್ಬ ವ್ಯಕ್ತಿಯಿಂದಲೋ, ಮಂತ್ರಿಯಿಂದಲೋ, ಅಧಿಕಾರಿಯಿಂದಲೋ ನನಸಾಗುವಂತಹದಲ್ಲ. ಅದಕ್ಕೆ ಎಲ್ಲರೂ ಸೇರಿ ಒಮ್ಮನದಿಂದ ಶ್ರಮಿಸಬೇಕು ಎನ್ನುವುದೇ ಈ ಮಕ್ಕಳ ಸಂವಾದದ ಒಳ ತಿರುವಾಗಿತ್ತು.

ಹೀಗೆ ಸಂಸತ್ತು ಮುಂದುವರೆಯುತ್ತಿರುವಾಗ ಶಾಲಾ ಶಿಸ್ತು-ನಿಯಮಗಳಿಗೆ ಸಂಬಂಧಿಸಿದ ಆರೋಗ್ಯಕರ ಚರ್ಚೆಯಾಯಿತು. ಪ್ರಶ್ನೆಗಳನ್ನು ಕೇಳುವಾಗ, ಉತ್ತರಿಸುವಾಗ “ಮಾನ್ಯ ಸ್ಪೀಕರ್‌ರವರೇ’ ಎಂದು ಸಂಬೋಧಿಸದೇ ಸ್ಪೀಕರ್‌ರವರಿಗೆ ಅಗೌರವ ತೋರಿದ ಕೆಲವರ ಬಗ್ಗೆ, ಸಭೆಗೆ ಇನ್‌ಶರ್ಟ್‌ ಮಾಡದೇ ಬಂದ ಕೆಲವರಿಗೆ ಸಭೆಯ ಶಿಸ್ತನ್ನು ಕಾಪಾಡದ ಬಗ್ಗೆ ಗಂಭೀರವಾದ ಕ್ರಮ ಕೈಗೊಳ್ಳಲಾಯಿತು.

ಇನ್ನು ಎರಡು ಬಣದವರು ಶಾಲೆಯ ರೀತಿ-ರಿವಾಜು, ಕಾನೂನು-ಕಟ್ಟಳೆಗಳಿಗೆ ಸಂಬಂಧಿಸಿದಂತೆ ಹಾಗೂ ಪರಿಷ್ಕೃತ ಬಿಸಿ ಊಟದ ಮೆನು ಆದಷ್ಟು ಬೇಗನೆ ಜಾರಿಮಾಡಿಸುವಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಯಾವ ತಾರತಮ್ಯ ತೋರದೆ ಉಚಿತ ಬಸ್‌ಪಾಸ್‌ ನೀಡುವಂತೆ… ಹೀಗೆ ತಮ್ಮ ಬೇಡಿಕೆಗಳನ್ನು ಕೂಗಾಟ-ಕಿರುಚಾಟದ ಮುಖೇನ ಹೊರಹಾಕುತ್ತಲೇ ಇದ್ದರು. ಇದಕ್ಕೆ ಎಲ್ಲ ತರಗತಿಯ ವಿದ್ಯಾರ್ಥಿ ಪ್ರಜೆಗಳು ಸಾಥ್‌ ನೀಡಿದರೆ, ಶಾಲೆಯ ಶಿಕ್ಷಕರಾದ ನಾವು ಅವರ ಉತ್ಸಾಹವನ್ನು ವೀಕ್ಷಿಸುತ್ತ ಕೂತೆವು. ನಮಗೆ ಕಂಡಿದ್ದು ಇಷ್ಟೇ. ಅವರ ಬಿಸಿರಕ್ತದ ರೋಷ ಹಾಗೂ ಅಸಹಾಯಕ ಆಕ್ರೋಶ ಮಾತ್ರ! ತಮ್ಮ ತಪ್ಪುಗಳನ್ನು ತಾವೇ ತೋರಿಕೊಳ್ಳುವ, ಒಪ್ಪಿಕೊಳ್ಳುವ ಹಾಗೆ ತಿದ್ದಿಕೊಳ್ಳುವ ಪರಿ ನಿಜಕ್ಕೂ ಶ್ಲಾಘನೀಯ. ಆ ಮಕ್ಕಳಲ್ಲೆಲ್ಲೂ ಅಸಂಸದೀಯ ಪದಗಳ ಬಳಕೆ ಇರಲಿಲ್ಲ. ಸದನದ ಬಗೆಗೆ ಅಪಾರ ಗೌರವವಿತ್ತು. ಒಬ್ಬರನ್ನೊಬ್ಬರು ಡೊಂಕುಗಳನ್ನು ತಿದ್ದಿಕೊಳ್ಳುವ ಮನಸ್ಥಿತಿ ಇತ್ತೇ ಹೊರತು ವೈಯಕ್ತಿಕ/ವ್ಯಕ್ತಿ ನಿಂದನೆಗೆ ಅಲ್ಲಿ ಅವಕಾಶವೇ ಇರಲಿಲ್ಲ. ಆಡಳಿತ ಪಕ್ಷದವರ ಕಾರ್ಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ಕಂಡ ದೋಷಗಳನ್ನು ಮನವರಿಕೆ ಮಾಡಿದ ವಿರೋಧ ಪಕ್ಷದವರು ಒಂದೆಡೆಯಾದರೆ, ತಮಗೆ ಬಂದ ಸಲಹೆ-ಸೂಚನೆಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಅವಲೋಕಿಸಿ ವಿಶ್ಲೇಷಿಸಿ, ಸಮಜಾಯಿಷಿ ನೀಡಿ ತಮ್ಮ ಜವಾಬ್ದಾರಿ ಅರಿತ ಆಡಳಿತ ಪಕ್ಷದವರು ಇನ್ನೊಂದೆಡೆ. ಕೊನೆಗೂ ಇಬ್ಬರೂ ಒಪ್ಪಿಕೊಳ್ಳುವಂತಹ ವಿಧೇಯಕಕ್ಕೆ ಸಹಿ ಹಾಕಿ ಕೂಡಿ ಬಾಳಿದರೆ ಸ್ವರ್ಗಸುಖ ಎನ್ನುವ ತತ್ವ ಅರಿತು ಸದನಕ್ಕೆ ಸ್ನೇಹಯುತವಾದ ಮುಕ್ತಾಯ ಹಾಡಿದರು.

ಒಟ್ಟಾರೆಯಾಗಿ ಈ ಮಕ್ಕಳಲ್ಲಿನ ಅಸಮಾನ್ಯ ಪ್ರತಿಭೆಗೆ ಈ ಮಕ್ಕಳ ಅಣುಕು ಸಂಸತ್‌ ಸದನ ವೇದಿಕೆಯಾಗಿತ್ತು. ಅಷ್ಟೇ ಅಲ್ಲ ಅವರಿಗೆ ಸ್ಫೂರ್ತಿಯಾದ ನಮ್ಮ ನಾಡಿನ ರಾಜಕಾರಣಿಗಳಿಗೆ ಈ ಅಣುಕು ಸಂಸತ್ತು ನಿಜಕ್ಕೂ ಅಣುಕಿಸುವಂತೆಯೇ ಇತ್ತು. ಶಾಲೆಗಳಲ್ಲಿ ಇಂತಹ ಸಹ್ಯ ಪಠ್ಯ ಚಟುವಟಿಕೆಗಳು ಶಾಲಾ ಕೊಠಡಿಯೊಳಗಿನ ಪುಸ್ತಕದ ಚೌಕಟ್ಟಿನಿಂದಾಚೆಗೆ ಹೊರಬಂದು ಯೋಚನೆ ಮಾಡುವಂತೆ ಪುಸ್ತಕಗಳಲ್ಲಿ ತಾವು ಓದುವ ಪಾಠಗಳನ್ನು ತಮ್ಮ ನಿಜಜೀವನದಲ್ಲಿ ಅಳವಡಿಸಿಕೊಳ್ಳುವಂತೆ ನಮ್ಮ ಭವ್ಯ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅರಿವು ಮತ್ತು ಅಭಿಮಾನ ಮೂಡುವಂತೆ ಮುಂದಿನ ದಿನಗಳ ಸತøಜೆಗಳಾಗಲು ಈ ಎಳೆ ವಯಸ್ಸಿನಲ್ಲಿಯೇ ದೇಶದ ಕುರಿತು ಚಿಂತನೆ ಮಾಡುವ ಮನೋಭಾವ ಮೂಡಿಸಲು ಸಹಕಾರಿಯಾಗುವುದರಲ್ಲಿ ಎರಡನೇ ಮಾತಿಲ್ಲ.

ಮಹೇಶ್‌ ಎಂ. ಸಿ.
ವಿದ್ಯಾರ್ಥಿ ಶಿಕ್ಷಕ, ಎಸ್‌.ಡಿ.ಎಂ. ಸೆಕೆಂಡರಿ ಶಾಲೆ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next