ಬೆಂಗಳೂರು: ಪರೀಕ್ಷೆಯಲ್ಲಿ ನಕಲು ಮಾಡಿದ್ದಾನೆ ಎನ್ನಲಾದ ಎಂಟನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜರಾಜೇಶ್ವರಿನಗರ ನಿವಾಸಿ ಧೀರಜ್ (13) ಮೃತ ವಿದ್ಯಾರ್ಥಿ.
ಆತನ ತಂದೆ ಹೈಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮನೆ ಸಮೀಪದ ಖಾಸಗಿ ಶಾಲೆಯೊಂದರಲ್ಲಿ ಧೀರಜ್ 8ನೇ ತರಗತಿಯಲ್ಲಿ ಓದುತ್ತಿದ್ದ. ಬುಧವಾರ ಸಂಜೆ ಶಾಲೆಯಿಂದ ಮನೆಗೆ ಬಂದು ಕೊಠಡಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾತ್ರಿ ತಾಯಿ ಮಗನಿಗೆ ಊಟ ಕೊಟ್ಟಿದ್ದು, ಬಹಳ ಹೊತ್ತಾದರೂ ಧೀರಜ್ ಕೋಣೆಯಿಂದ ಹೊರಗಡೆ ಬಾರದ ಕಾರಣ ಕೋಣೆ ಬಾಗಿಲು ಬಡಿದರೂ ಪ್ರತಿಕ್ರಿಯೆ ಬಂದಿಲ್ಲ. ಅನುಮಾನಗೊಂಡು ಕೀ ಬಳಸಿ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಪರೀಕ್ಷೆಯಲ್ಲಿ ನಕಲು
ಧೀರಜ್ ಬುಧವಾರ ಶಾಲೆಯಲ್ಲಿ ಪರೀಕ್ಷೆ ಬರೆಯುವಾಗ ನಕಲು ಮಾಡಿ ಶಿಕ್ಷಕರಿಗೆ ಸಿಕ್ಕಿಬಿದ್ದಿದ್ದ ಎಂದು ಹೇಳಲಾಗಿದೆ. ಈ ವೇಳೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ಸುಮಾರು 3 ತಾಸು ಪರೀಕ್ಷೆ ಕೊಠಡಿಯಿಂದ ಹೊರಗೆ ನಿಲ್ಲಿಸಿದ್ದರು. ಅಲ್ಲದೆ, ಧೀರಜ್ ನಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡಿದ್ದರು. ಇದರಿಂದ ಮನನೊಂದು ಧೀರಜ್ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.