ಆ ಬಾಲ್ಯದ ದಿನಗಳು ಅದೆಷ್ಟು ಸುಂದರ. ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಶಾಲೆಯ ಪರೀಕ್ಷೆಗಳು ಮುಗಿದಿರುತ್ತಿದ್ದವು.
ಎಪ್ರಿಲ್ ಮೊದಲ ವಾರದ ವರೆಗೆ ಶಾಲೆ ಇರುತ್ತಿತ್ತು. ಹಾಗಾಗಿ ನಾವು ಎಪ್ರಿಲ್ ಮೊದಲ ವಾರಕ್ಕಾಗಿ ಕಾತುರದಿಂದ ಕಾಯುತ್ತಿದ್ದೆವು. ಈ ಸಮಯದಲ್ಲಿ ಮಗ್ಗಿ ಕೇಳುತ್ತಿದ್ದದ್ದು ಬಿಟ್ಟರೆ ಉಳಿದೆಲ್ಲ ಸಮಯ ಆಟ ಆಡೋದೇ ಆಯಿತು.
ಶಾಲೆ ಇರಬೇಕು ಆದರೆ ತರಗತಿಗಳು ಮಾತ್ರ ಇರಬಾರದು ಎನ್ನುವುದನ್ನು ಬಹುತೇಕ ವಿದ್ಯಾರ್ಥಿಗಳು ಬಯಸುತ್ತಿದ್ದರು. ಪರೀಕ್ಷೆ ಮುಗಿಯಿತೆಂದರೆ ಕುಣಿದು ಕುಪ್ಪಳಿಸುತ್ತಿದ್ದೆವು.
ಇನ್ನು ಆ ಶೈಕ್ಷಣಿಕ ವರ್ಷದ ಕೊನೆಯ ದಿನ ಫಲಿತಾಂಶ ಬಿಡುಗಡೆಯಾಗುತ್ತಿತ್ತು. ಮನೆಯಿಂದ ಸ್ವಲ್ಪ ಹಣ ತೆಗೆದುಕೊಂಡು ಶಾಲೆಗೆ ಬರು ತ್ತಿ¨ªೆವು. ಬರುವಾಗ ಎದೆನಡುಕ. ಶಾಲಾ ಮುಂಭಾಗದಲ್ಲಿ ಹಾಕ ಲಾಗಿದ್ದ ಫಲಕದಲ್ಲಿ ನಮ್ಮ ಫಲಿತಾಂಶವನ್ನು ಹಾಕಿರುತ್ತಿದ್ದರು. ಹೆಚ್ಚಾಗಿ ಪಾಸ್ ಅಂತಾಲೇ ಇರುತ್ತಿತ್ತು. ಆಗ ಎಲ್ಲರ ಮುಖದಲ್ಲಿ ಮಂದಹಾಸ ಇರುತ್ತಿತ್ತು.
ಮನೆಯ ಮುಂದೆ ಇದ್ದ ಅಂಗಡಿಯಿಂದ ಚಾಕಲೇಟ್, ಸಿಹಿ ತಿನಿಸುಗಳನ್ನು ತಂದು ಅಧ್ಯಾಪಕರಿಗೆ ನೀಡಿದ ಬಳಿಕ ವಿದ್ಯಾರ್ಥಿಗಳು ನಮಗೆ ನಾವೇ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಆಗ ನಾಳೆಯಿಂದ ರಜೆ ಶಾಲೆಗೆ ಬೇಸಗೆ ರಜೆ ಎಂದಾಗ ವಿದ್ಯಾರ್ಥಿಗಳೆಲ್ಲ ಹಿಗ್ಗುತ್ತಿದ್ದೆವು.
ಈ ಬೇಸಗೆ ರಜೆಯಲ್ಲಿ ಅಜ್ಜಿ ಮನೆಗೋ, ಇಲ್ಲವೇ ಸ್ನೇಹಿತರ ಮನೆಗೋ ಹೋಗುತ್ತಿದ್ದೆವು. ತೋಟದಲ್ಲಿದ್ದ ಹಲಸಿನ ಹಣ್ಣು, ಮಾವು ತಂದು ಅದಕ್ಕೆ ಉಪ್ಪು, ಮೆಣಸಿನ ಹುಡಿ ಹಾಕಿ ತಿನ್ನುತ್ತಿದ್ದರೆ ಅದೊಂದು ಸ್ವರ್ಗ ಸುಖ.
ತರುವಾಯ ಮಳೆಗಾಲ ಆರಂಭವಾಗುತ್ತಿತ್ತು. ಆಟ ಆಡುತ್ತ ಮಳೆಗೆ ನೆನೆಯುತ್ತಿದ್ದೆವು. ರಜೆಯಲ್ಲಿ ಕೊಟ್ಟ “ಹೋಮ್ ವರ್ಕ್’ಗಳೆಲ್ಲಾ ರಜೆ ಮುಗಿಯುವ ಕೊನೆಯ ದಿನಗಳಲ್ಲಿ ಅವಸರವಾಗಿ ಮಾಡುತ್ತಿದ್ದೆವು. ಒಟ್ಟಿನಲ್ಲಿ ಆ ಸಮಯದ ಬೇಸಗೆ ರಜೆಯನ್ನಂತೂ ಆಟ ಆಡುತ್ತಾ ನಲಿಯುತ್ತಾ ಕಳೆಯುತ್ತಿದ್ದೆವು. ಲಾಕ್‌ಡೌನ್‌ನಿಂದಾಗಿ ಬಾಲ್ಯದ ದಿನಗಳನ್ನು ನೆನಪಿಸುವಂತಾಯಿತು.
ರೋಹಿತ್ ದೋಳ್ಪಾಡಿ, ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ