“ನೀನು ಮನೆಕಡೆ ಚಿಂತಿ ಮಾಡಬ್ಯಾಡ. ಚಂದಾಗಿ ಓದು. ನಾ ಬುತ್ತಿಕಳಿಸ್ತೀನಿ’ ಅಂದ್ಳು ಅವ್ವ. ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತೆ. ಅಮ್ಮನ ಕಣ್ಣಲ್ಲಿ ನೀರು ಬತ್ತಿ ಹೋಗಿದ್ದವು. ಧ್ವನಿ ಬಿದ್ದು ಹೋಗಿತ್ತು…
1988ನೇ ಇಸ್ವಿ. ಬಿಜಾಪುರದ ಪ್ರತಿಷ್ಠಿತ ಎಸ್.ಬಿ. ಆರ್ಟ್ಸ್ ಆ್ಯಂಡ್‌ಕೆ.ಸಿ.ಪಿ. ಸೈನ್ಸ್ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದೆ. ನನ್ನೂರು, ಬಿಜಾಪುರದಿಂದ 60ಕಿ.ಮೀ. ದೂರದಲ್ಲಿತ್ತು. ಅಪ್ಪ, ಅಮ್ಮನಿಂದ ಬುತ್ತಿ ಕಟ್ಟಿಸಿಕೊಂಡು ಬೆಳ್ಳಂಬೆಳಗ್ಗೆ ಐದಾರುಕಿ.ಮೀ. ದೂರವಿದ್ದ ಲಚ್ಯಾಣ ರೇಲ್ವೆ ಸ್ಟೇಷನ್ನಿಗೆ ಕಾಲ್ನಡಿಗೆಯಲ್ಲಿ ಬಂದು, ಹಾಲಿನವರಕೈಗೆ ಬುತ್ತಿ ಕೊಡುತ್ತಿದ್ದರು. ಅವರು ಬಿಜಾಪುರಕ್ಕೆ ಹಾಲು ಕೊಡಲೆಂದು ಬರುವಾಗ, ಬುತ್ತಿ ತಂದು ಅಲ್ಲಿನ ಗಾಂಧಿ ವೃತ್ತದಲ್ಲಿ ಇಡುತ್ತಿದ್ದರು. ಗೊತ್ತುಪಡಿಸಿದ ಸಮಯಕ್ಕೆ ಹೋಗಿ ನಾನು ಡಬ್ಬಿ ಪಡೆದುಕೊಳ್ಳುತ್ತಿದ್ದೆ. ಈ ಕೆಲಸಕ್ಕೆಂದು ಹಾಲಿನವರಿಗೆ ವರ್ಷಕ್ಕೆ ಒಂದು ಚೀಲ ಜೋಳಕೊಡುವ ಪದ್ಧತಿ ಇತ್ತು.
ಬಿ.ಎ. ದ್ವಿತೀಯ ವರ್ಷದ ಅರ್ಧ ವಾರ್ಷಿಕ ಅವಧಿ ಮುಗಿದಿತ್ತು. ಅಪ್ಪ ಒಂದೆರಡು ದಿನ ಹುಷಾರಿಲ್ಲ ವೆಂದು ಹಾಸಿಗೆ ಹಿಡಿದವರು ಏಳಲೇ ಇಲ್ಲ. ಹೃದಯದಕಾಯಿಲೆಗೆ ತುತ್ತಾದರು. ಅಮ್ಮ ವಿಧವೆಯಾದರು. ಅಣ್ಣನಿಗೆ ದಿಕ್ಕು ತೋಚದಾಯಿತು. ನನಗೆಕಲಿಯುವುದುಕಷ್ಟವೆನಿಸಿತು. ಅಪ್ಪನ ದಿನಕಾರ್ಯ ಮುಗಿಸಿಕೊಂಡು ಬಿಜಾಪೂರಕ್ಕೆ ಹೊರಡಲು ಅಣಿಯಾದೆ. “ನೀನು ಮನೆಕಡೆ ಚಿಂತಿ ಮಾಡಬ್ಯಾಡ. ಚಂದಾಗಿ ಓದು. ನಾ ಬುತ್ತಿಕಳಿಸ್ತೀನಿ’ ಅಂದ್ಳು ಅವ್ವ. ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತೆ. ಅಮ್ಮನಕಣ್ಣಲ್ಲಿ ನೀರು ಬತ್ತಿ ಹೋಗಿದ್ದವು. ಧ್ವನಿ ಬಿದ್ದು ಹೋಗಿತ್ತು. “ಅಳಬೇಡ ಹೋಗಿ ಬಾ’ ಎಂದಳು ಕೀರಲು ದನಿಯಲ್ಲಿ. ಆವತ್ತೇ ನಾನು ಛಲ ತೊಟ್ಟೆ. ಮನೆಗೆ ಭಾರವಾಗದೆ ಯಾವುದಾದರೂ ಕೆಲಸಕ್ಕೆ ಸೇರಿ, ಪದವಿ ಪೂರೈಸಬೇಕೆಂದು ನಿರ್ಧರಿಸಿದೆ. ಅದೇ ಗುಂಗಿನಲ್ಲಿ ಬಿಜಾಪುರಕ್ಕೆ ಬಂದು ಸ್ನೇಹಿತರಲ್ಲಿ ನನ್ನ ಅಳಲನ್ನು ತೋಡಿಕೊಂಡೆ. “ಎರಡೊತ್ತು ಊಟ, ಖರ್ಚಿಗೆಂದು ಸ್ವಲ್ಪ ಹಣ ಕೊಡುವಂಥ ಯಾವುದೇಕೆಲಸ ಇರಲಿ, ನಾನು ಮಾಡ್ತೀನಿ. ದಯವಿಟ್ಟು ಅಂಥಕೆಲಸ ಇದ್ದರೆ ಹೇಳಿ’ ಎಂದೆ. ಗೆಳೆಯರೊಬ್ಬರ ಸಹಕಾರದಿಂದ ಮರಾಠಾ ಖಾನಾವಳಿ “ಅಂಬಿಕಾ ಡೈನಿಂಗ್ ಹಾಲ್ ‘ನಲ್ಲಿಕೆಲಸ ಸಿಕ್ಕಿತು! ಅಲ್ಲಿ ಸಂದರ್ಭಕ್ಕೆ ತಕ್ಕಂತೆ ಎಲ್ಲಕೆಲಸ ಮಾಡಿದೆ. ಬಿಡುವಿನ ವೇಳೆಯಲ್ಲಿ ಶ್ರದ್ಧೆಯಿಂದ ಓದಿದೆ. ಅದೇ ವರ್ಷ ನಮ್ಮಕಾಲೇಜಿನಲ್ಲಿ ಇಂಟರ್ನ್ ಶಿಪ್‌ಕೋರ್ಸ್ ಪ್ರಾರಂಭಿಸಲಾಯಿತು.
ಪಿಯುಸಿಯಲ್ಲಿ ಶಿಕ್ಷಣ ಶಾಸ್ತ್ರ ಅಭ್ಯಾಸ ಮಾಡಿದವರು 300 ರೂ ಫೀ ತುಂಬಿ ಪ್ರವೇಶ ಪಡೆಯಬೇಕು ಎಂದು ಪ್ರೊ. ಹಿಪ್ಪರಗಿ ಸರ್ ಹೇಳಿದರು. ನಾನು ಬೇಡವೆಂದರೂ ಕೇಳದೆ, ತಾವೇ ಫೀ ಸಂದಾಯ ಮಾಡಿ ಕೋರ್ಸಿಗೆ ಸೇರಿಸಿದರು. “ಇದರಿಂದ ನಿನಗೆ ಒಳ್ಳೆಯದಾಗುತ್ತದೆ. ನೀನು ಖಂಡಿತ ಒಬ್ಬ ಆದರ್ಶ ಶಿಕ್ಷಕನಾಗುವೆ’ ಎಂದರು.ಆರು ತಿಂಗಳುಕಷ್ಟಪಟ್ಟೆ. ಹೋಟೆಲ್‌ನಲ್ಲಿ ರಾತ್ರಿ ಪಾಳಿ ನಿರ್ವಹಿಸಿ, ಬೆಳಿಗ್ಗೆ ಪದವಿ ಕ್ಲಾಸು, ಸಾಯಂಕಾಲ 3ರಿಂದ6 ರವರೆಗೆ ಐಟಿಸಿ ಕೋರ್ಸು ಕಲಿತೆ. ಶ್ರದ್ಧೆಯಿಂದ ಅಭ್ಯಾಸ ಮುಂದುವರಿಸಿದೆ. ಎರಡೂ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭಿಸಿತು. ನನಗೆ ಮಂಜೂರಾಗಿ ಬಂದಿದ್ದ300 ರೂ. ಶಿಷ್ಯವೇತನವನ್ನು, ಗುರುಗಳು ಬೇಡವೆಂದರೂ ಒತ್ತಾಯದಿಂದ ಅವರ ಕೈಯಲ್ಲಿತ್ತು, ಪಾದ ಮುಟ್ಟಿ ನಮಸ್ಕರಿಸಿದೆ.
ನಂತರದಲ್ಲಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹೆಸರು ನೊಂದಾಯಿಸಿ ಕೆಲವು ವರ್ಷ ಕಾದೆ. ನನ್ನ ಶ್ರಮ ಮತ್ತು ಛಲ ವ್ಯರ್ಥವಾಗಲಿಲ್ಲ. ನೇರ ನೇಮಕಾತಿಯಲ್ಲಿ ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಆಯ್ಕೆಗೊಂಡೆ! ಈ ಸುದ್ದಿ ತಿಳಿದು ನನ್ನ ಅವ್ವಊರೆಲ್ಲ ತಿರುಗಾಡಿ, ನನ್ನ ಮಗ ಮಾಸ್ತರ ಆದ! ಎಂದು ಹೇಳಿ ಸಂಭ್ರಮ ಪಟ್ಟಳು!!
– ಸೋಮಲಿಂಗ ಬೇಡರ ಆಳೂರ