Advertisement

ಬಸವರಾಜ ಹೊರಟ್ಟಿಗೆ ಶಿಷ್ಯನೇ ಎದುರಾಳಿ

10:04 AM May 24, 2022 | Team Udayavani |

ಹುಬ್ಬಳ್ಳಿ: ಪಕ್ಷ ತೊರೆದು ಬಿಜೆಪಿ ಸೇರಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಇದೀಗ ಅವರ ಗರಡಿಯಲ್ಲಿ ಪಳಗಿದ ಶಿಕ್ಷಕರೊಬ್ಬರನ್ನೇ ಜೆಡಿಎಸ್‌ ಪಶ್ಚಿಮ ಶಿಕ್ಷಕರ ಚುನಾವಣೆ ಕಣಕ್ಕಿಳಿಸಿದ್ದು, ಕಳೆದ 32 ವರ್ಷಗಳಿಂದ ಶಿಕ್ಷಕರಾಗಿ ಇದೀಗ ಸ್ವಯಂ ನಿವೃತ್ತಿ ಪಡೆದಿರುವ ಶ್ರೀಶೈಲ ಗಡದಿನ್ನಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

Advertisement

ಸ್ಥಳೀಯ ವ್ಯಕ್ತಿಗೆ ಮಣೆ ಹಾಕುವ ಮೂಲಕ ಜೆಡಿಎಸ್‌ ಪಕ್ಷ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಪಡಿಸಿದೆ. ಕಳೆದ ಮೂರು ಚುನಾವಣೆಗಳನ್ನು ಬಸವರಾಜ ಹೊರಟ್ಟಿ ಅವರು ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಆದರೆ ಈ ಬಾರಿಯ ಚುನಾವಣೆಯನ್ನು ಬಿಜೆಪಿಯಿಂದ ಎದುರಿಸಲು ಮುಂದಾಗಿದ್ದಾರೆ. ಚುನಾವಣೆಯಲ್ಲಿ ಹೊಸ್ತಿಲಲ್ಲಿ ಕಮಲ ಪಾಳಯಕ್ಕೆ ಕಾಲಿಟ್ಟಿದ್ದಾರೆ.

ಜೆಡಿಎಸ್‌ ತೊರೆದ ನಂತರ ಪಕ್ಷದಿಂದ ಅಭ್ಯರ್ಥಿ ಯಾರು, ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿರುತ್ತಾರೆ ಎನ್ನುವ ಮತದಾರರ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ. ಕಳೆದ ಎರಡೂವರೆ ದಶಕಗಳ ಕಾಲ ಹೊರಟ್ಟಿ ಅವರನ್ನು ಬೆಂಬಲಿಸುತ್ತಿರುವ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದಲ್ಲಿ ಕಾರ್ಯ ಮಾಡುತ್ತಿದ್ದ ಶ್ರೀಶೈಲ ಗಡದಿನ್ನಿ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದೆ. ಈ ಮೂಲಕ ಚುನಾವಣೆಯಲ್ಲಿ ಹೊರಟ್ಟಿ ಅವರಿಗೆ ಜೆಡಿಎಸ್‌ ಪರೋಕ್ಷವಾಗಿ ಬೆಂಬಲಿಸಲಿದೆ ಎನ್ನುವ ನಿರೀಕ್ಷೆಗಳು ಸುಳ್ಳಾಗಿವೆ.

ಲ್ಯಾಮಿಂಗ್ಟನ್‌ ಶಾಲೆ ಶಿಕ್ಷಕ: ಜೆಡಿಎಸ್‌ ಅಭ್ಯರ್ಥಿಯಾಗಿರುವ ಶ್ರೀಶೈಲ ಗಡದಿನ್ನಿ ಅವರು ಲ್ಯಾಮಿಂಗ್ಟನ್‌ ಶಾಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ 32 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ಚುನಾವಣೆಗಾಗಿಯೇ ಸ್ವಯಂ ನಿವೃತ್ತಿ ಪಡೆದಿದ್ದಾರೆ. ನಿಯಮಾವಳಿ ಪ್ರಕಾರ ಎಲ್ಲಾ ಸ್ವಯಂ ನಿವೃತ್ತಿ ಪ್ರಕ್ರಿಯೆ ಅಂತಿಮಗೊಂಡಿದೆ. ಬಸವರಾಜ ಹೊರಟ್ಟಿ ಅವರು ಕೂಡ ಇದೇ ಲ್ಯಾಮಿಂಗ್ಟನ್‌ ಶಾಲೆ ಮೂಲಕ ಶಿಕ್ಷಕರ ಪ್ರತಿನಿಧಿಯಾಗಿ ರಾಜಕೀಯ ಪ್ರವೇಶ ಮಾಡಿದ್ದರು.

ಇದೀಗ ಅದೇ ಶಾಲೆಯ ಶಿಕ್ಷಕ ಗಡದಿನ್ನಿ ಅವರು ಹೊರಟ್ಟಿ ಅವರ ವಿರುದ್ಧ ಸ್ಪರ್ಧೆಗೆ ಮುಂದಾಗಿದ್ದಾರೆ. 2016 ಚುನಾವಣೆ ನಂತರ ಮಾಧ್ಯಮಿಕ ನೌಕರರ ಶಾಲಾ ಶಿಕ್ಷಕರ ನೌಕರರ ಸಂಘದಲ್ಲಿ ಸ್ಥಾನ ನೀಡಲಿಲ್ಲ. ಹೀಗಾಗಿ ಸಂಘಟನೆಯಿಂದ ದೂರ ಉಳಿದಿದ್ದರು. 2019ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಅಸ್ತಿತ್ವಕ್ಕೆ ಬಂದಿತ್ತು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜವಬ್ದಾರಿ ವಹಿಸಿಕೊಂಡಿದ್ದರು.

Advertisement

ಚುನಾವಣೆಯಲ್ಲಿ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಸಂಘಟನೆ ಮೂಲಕ ಪ್ರಯತ್ನಗಳು ನಡೆದಿದ್ದವು. ನಾಲ್ಕು ಜಿಲ್ಲೆಯ ಪ್ರವಾಸ ಮಾಡಿ ಶಿಕ್ಷಕರ ಅಭಿಪ್ರಾಯ ಪಡೆದು ಚುನಾವಣೆ ಸ್ಪರ್ಧೆ ಖಚಿತಗೊಳಿಸಿದ್ದರು. ಅಂತಿಮ ಕ್ಷಣದಲ್ಲಿ ಜೆಡಿಎಸ್‌ ಪಕ್ಷದಿಂದ ಕಣಕ್ಕಿಳಿಸಿದ್ದು, 15-16 ದಿನಗಳಲ್ಲಿ ನಾಲ್ಕು ಜಿಲ್ಲೆಗಳನ್ನು ಸುತ್ತಿ ಶಿಕ್ಷಕರನ್ನು ತಲುಪಬೇಕು. ಇನ್ನು ಈಗಾಗಲೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿ ತಿಂಗಳುಗಳೇ ಕಳೆದಿವೆ. ಅಲ್ಲದೆ ಈ ಕ್ಷೇತ್ರವನ್ನು ಕಳೆದ ನಾಲ್ಕು ದಶಕಗಳಿಂದ ಪ್ರತಿನಿಧಿಸುತ್ತಿರುವ ಹೊರಟ್ಟಿ ವಿರುದ್ಧ ಸೆಣಸಬೇಕಾಗಿದೆ.

ಪಕ್ಷ ಸಂಘಟನೆಗೆ ಒತ್ತು: ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಪ್ರಮುಖ ನಾಯಕರ ಪೈಕಿ ಹಲವರು ಪಕ್ಷದ ತೊರೆದಿದ್ದಾರೆ. ಇದು ಪಕ್ಷದ ಸಂಘಟನೆ, ಅಸ್ತಿತ್ವಕ್ಕೆ ಧಕ್ಕೆ ತರುವ ವಿಚಾರ. ನಾಯಕರು ಪಕ್ಷದ ಬಿಟ್ಟು ಹೋದರು. ಈ ಭಾಗದಲ್ಲಿ ಪಕ್ಷದಲ್ಲಿ ನಾಯಕರು, ಪಕ್ಷದ ಕಾರ್ಯಕರ್ತರಿಗೆ ಕೊರತೆಯಿಲ್ಲ ಎಂಬುದನ್ನು ಮನವರಿಕೆ ಮಾಡುವ ಜತೆಗೆ ಪಶ್ಚಿಮ ಪದವೀಧರ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂಬ ಲೆಕ್ಕಾಚಾರಗಳಿವೆ ಎನ್ನುವ ಮಾತುಗಳಿವೆ.

1990 ರಿಂದ 2016ರವರೆಗೆ ಬಸವರಾಜ ಹೊರಟ್ಟಿ ಸಾಹೇಬರೊಂದಿಗೆ ಕೆಲಸ ಮಾಡಿದ್ದೇನೆ. ಹಲವು ಸಂಘಟನೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಈಗಾಗಲೇ ಸುಮಾರು 10 ಸಾವಿರಕ್ಕೂ ಹೆಚ್ಚಾ ಶಿಕ್ಷಕರನ್ನು ಭೇಟಿ ಮಾಡಿದ್ದೇನೆ. ಹಿರಿಯ ಶಿಕ್ಷಕರ ಅಭಿಪ್ರಾಯ ಪಡೆದಾಗ ಹೊಸಬರು ಆಯ್ಕೆಯಾಗಲಿ ಎನ್ನುವ ಒತ್ತಾಸೆಗಳು ಕೇಳಿ ಬಂದವು. ಹೀಗಾಗಿಯೇ ಸಂಘಟನೆ ಮೂಲಕ ಚುನಾವಣೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಇದೀಗ ಜೆಡಿಎಸ್‌ ಪಕ್ಷದ ವರಿಷ್ಠರು ತನ್ನನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ವೈಯಕ್ತಿಕ, ಸಂಘಟನೆ ಬಲದ ಜತೆಗೆ ಜೆಡಿಎಸ್‌ ಪಕ್ಷದ ದೊಡ್ಡ ಬೆಂಬಲ ವ್ಯಕ್ತವಾಗಿದೆ. ಪಕ್ಷದ ನಿಲುವು, ಶಿಕ್ಷಕರ ಪರ ಯೋಜನೆಗಳನ್ನು ಪಕ್ಷ ಮಾಡಿರುವ ಕಾರ್ಯಗಳನ್ನು ಗುರುತಿಸಿ ಬೆಂಬಲ ನೀಡಲಿದ್ದಾರೆ. ಈ ಬಾರಿ ಹೊಸಬರನ್ನು ಆಯ್ಕೆ ಮಾಡಬೇಕು ಎಂದು ಶಿಕ್ಷಕರು ಬಯಸಿದ್ದಾರೆ. ಶ್ರೀಶೈಲ ಗಡದಿನ್ನಿ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ.

ಶಿಕ್ಷಕರ ಮನ ಗೆಲ್ಲುವಲ್ಲಿ ಹೊರಟ್ಟಿ ವಿಫ‌ಲ: ಬಸವರಾಜ ಹೊರಟ್ಟಿಯವರ ಜತೆಯೇ ಚುನಾವಣಾ ಕೆಲಸ ಮಾಡಿದ್ದೇನೆ. ಅವರ ಜತೆಯಲ್ಲಿದ್ದಾಗ ನನ್ನನ್ನು ಕಡೆಗಣಿಸಿದ್ದರು. ಶಿಕ್ಷಕರ ಮನಗೆಲ್ಲುವಲ್ಲಿ ಹೊರಟ್ಟಿ ವಿಫ‌ಲರಾಗಿದ್ದಾರೆ. ಈಗ ಅವರಿಗೆ ವಯಸ್ಸಾಗಿದೆ. ಜೆಡಿಎಸ್‌ ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಈಗ ಅಧಿಕಾರದ ಆಸೆಯಿಂದ ಬಿಜೆಪಿಗೆ ಹೋಗಿದ್ದಾರೆ ಎಂದು ಗಡದಿನ್ನಿ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next