ಬೆಂಗಳೂರು: ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ಜಾತಿ, ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಮಿತಿಗಿಂತ ಅಧಿಕ ಪಟ್ಟು ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿರುವುದಕ್ಕೆ ಉಚ್ಚ ನ್ಯಾಯಾಲಯ ಆಘಾತ ವ್ಯಕ್ತಪಡಿಸಿದ್ದು, ಈ ಬಗ್ಗೆ ಸರಕಾರ ತತ್‌ಕ್ಷಣ ಪರಿಹಾರ ಕ್ರಮಗಳಿಗೆ ಮುಂದಾಗಬೇಕು ಎಂದು ನಿರ್ದೇಶನ ನೀಡಿದೆ.
ಈ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಸರಕಾರಿ ವಕೀಲರು ಎಸ್‌ಸಿ/ ಎಸ್‌ಟಿ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಮಿತಿ ಹಾಗೂ ಸದ್ಯ ಇರುವ ಸಂಖ್ಯೆ, ವಾರ್ಡನ್ ಹುದ್ದೆಗಳ ಮಾಹಿತಿ ಹೊಂದಿದ ಕಂದಾಯ ವಿಭಾಗವಾರು ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ವರದಿಯಲ್ಲಿ ಮಿತಿಗಿಂತ ಮೂರ್‍ನಾಲ್ಕು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವ ಅಂಶವನ್ನು ಗಮನಿಸಿ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, ಸರಕಾರದ ವರದಿಯಲ್ಲಿರುವಂತೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮೆಟ್ರಿಕ್ ಪೂರ್ವ ಹಾಸ್ಟೆಲ್‌ನಲ್ಲಿ ಪ್ರವೇಶ ಮಿತಿ 50 ಇದ್ದು ಅಲ್ಲಿ 150 ವಿದ್ಯಾರ್ಥಿಗಳು ಇದ್ದಾರೆ.
ಕೊಪ್ಪಳದ ಹಾಸ್ಟೆಲ್‌ನಲ್ಲಿ 75 ಪ್ರವೇಶ ಮಿತಿ ಇದ್ದರೆ 214 ಮಂದಿ ಇದ್ದಾರೆ. ರಾಜ್ಯದ ಬಹುತೇಕ ಹಾಸ್ಟೆಲ್‌ಗಳ ಸ್ಥಿತಿ ಇದೆ ಆಗಿದೆ. ವಿದ್ಯಾರ್ಥಿಗಳನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಸರಕಾರ ತತ್‌ಕ್ಷಣ ಗಮನ ಹರಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ತುರ್ತು ಆವಶ್ಯಕತೆ ಇದೆ ಎಂದು ಹೇಳಿತು ಹಾಗೂ ವಿವರವಾದ ವರದಿಯನ್ನು ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ. 13ಕ್ಕೆ ಮುಂದೂಡಿತು.