ಕನಕಗಿರಿ: ಹೈದ್ರಬಾದ್ ಕರ್ನಾಟಕದ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶಿಕ್ಷಣಕ್ಕೆ ಪೂರಕ ವಾತವರಣ ಇಲ್ಲದೇ ಇರುವುದರಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಟ್ಟಣದಲ್ಲಿ ಮೆಟ್ರಿಕ್ ನಂತರದ ವಸತಿ ನಿಲಯ ಇಲ್ಲದಿರುವುದು. ವಸತಿ ನಿಲಯ ಇಲ್ಲದ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ನಿರ್ಲಕ್ಷ್ಯ: ಪಟ್ಟಣದಲ್ಲಿ 3 ಪಿಯು ಮತ್ತು 2 ಪದವಿ ಕಾಲೇಜುಗಳಿವೆ. ಕನಕಗಿರಿ ಪಟ್ಟಣಕ್ಕೆ ಸರ್ಕಾರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಮಂಜೂರು ಮಾಡದೇ ವಿದ್ಯಾರ್ಥಿಗಳ ಭವಿಷ್ಯ ಜೊತೆ ಚೆಲ್ಲಾಟವಾಡುತ್ತಿದೆ. ವಸತಿನಿಲಯಗಳು ಇಲ್ಲದೇ ಇರುವುದರಿಂದ ಕೆಲ ವಿದ್ಯಾರ್ಥಿಗಳು ಮನೆಯನ್ನು ಬಾಡಿಗೆಗೆ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಗ್ಗೆ ಕಾಳಜಿ ವಹಿಸಬೇಕಾದ ಜನಪತ್ರಿನಿಧಿಗಳು ನಿರ್ಲಕ್ಷ ವಹಿಸಿದ್ದಾರೆ.
ಬೇರೆ ಪಟ್ಟಣಗಳತ್ತ ಪಯಣ: ಕನಕಗಿರಿಯಲ್ಲಿ ಮೆಟ್ರಿಕ್ ನಂತರ ವಸತಿ ನಿಲಯಗಳು ಇಲ್ಲದೇ ಇರುವುದರಿಂದ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳು ದೂರದ ಗಂಗಾವತಿ, ಕೊಪ್ಪಳ ನಗರಗಳತ್ತ ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದಾರೆ. ಈ ಭಾಗದಲ್ಲಿ ವಸತಿ ನಿಲಯಗಳನ್ನು ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳು ಅನ್ಯ ಪಟ್ಟಣಗಳತ್ತ ಮುಖ ಮಾಡಿದ್ದಾರೆ. ವಸತಿ ನಿಲಯಗಳನ್ನು ಪ್ರಾರಂಭಿಸುವಂತೆ ಹಲವಾರು ಬಾರಿ ಇಲಾಖೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು.
Advertisement
ಪಟ್ಟಣದಲ್ಲಿ ಸರ್ಕಾರಿ ಪಪೂ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ರುದ್ರಮುನಿ ಪಿಯು ಕಾಲೇಜು, ಬೆಸ್ಟ್ ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ಹಲವಾರು ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಲಭ್ಯವಿಲ್ಲದ ಕಾರಣ ನಿತ್ಯ ಆಟೋ, ಬೈಕ್ ಹಾಗೂ ನಡೆದುಕೊಂಡ ಕಾಲೇಜಿಗೆ ಬರುವಂತಹ ಪರಿಸ್ಥಿತಿ ಇದೆ. ಇದರಿಂದಾಗಿ ಕೆಲವೊಮ್ಮೆ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ.
ಕನಕಗಿರಿಯಲ್ಲಿ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳನ್ನು ಮಂಜೂರು ಮಾಡುವಂತೆ ಇಲಾಖೆಗೆ ಹಲವಾರು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಕಗಿರಿ ನೂತನ ತಾಲೂಕು ಆಗಿರುವುದರಿಂದ ಸರ್ಕಾರ ಈ ವರ್ಷ ವಸತಿ ನಿಲಯ ಪ್ರಾರಂಭಿಸುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು.•ಬಿ. ಕಲ್ಲೇಶ, ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ
ಮೆಟ್ರಿಕ್ ನಂತರ ವಸತಿ ನಿಲಯಗಳನ್ನು ಪ್ರಾರಂಭಿಸುವಂತೆ ಸಂಘಟನೆಯಿಂದ ಶಾಸಕರಿಗೆ, ಸಚಿವರಿಗೆ ಹಾಗೂ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಶಾಸಕರ ನಿರ್ಲಕ್ಷ್ಯದಿಂದ ವಸತಿ ನಿಲಯಗಳು ಮಂಜೂರು ಆಗುತ್ತಿಲ್ಲ. ಕನಕಗಿರಿ ನೂತನ ತಾಲೂಕು ಕೇಂದ್ರವಾಗಿದೆ. ಹಳ್ಳಿಗಳಿಗೆ ಸರಿಯಾದ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ವಸತಿ ನಿಲಯಗಳು ಮಂಜೂರು ಆಗದಿದ್ದಲ್ಲಿ ಸಂಘಟನೆಯಿಂದ ಪ್ರತಿಭಟನೆ ಮಾಡಲಾಗುವುದು. •ಅಮರೇಶ ಕಡಗದ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ
•ಶರಣಪ್ಪ ಗೋಡಿನಾಳ