ಮೂಡಬಿದಿರೆ: ಮಾತೃ ವಾತ್ಸಲ್ಯ, ನೈತಿಕ ಮೌಲ್ಯ, ಸಂಸ್ಕಾರ ನೀಡುವ ಶಿಕ್ಷಣ ಇಂದಿನ ಮಕ್ಕಳಿಗೆ ಸಿಗುವಂತೆಯೇ ಕೌಶಲ್ಯ ವೃದ್ಧಿಗೆ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ತೋರಿಸಬೇಕು. ಜೀವನ ಮೌಲ್ಯಗಳನ್ನು ರೂಢಿಸುವ ಕ್ಷಣವು ಸರ್ವಶ್ರೇಷ್ಠವಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.
ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ‘ವೀರ ಸಾಗರ’ ನೂತನ ವಿದ್ಯಾರ್ಥಿನಿ ನಿಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಪರಿಶುದ್ಧ ಪರಿಸರ, ಗುಣಮಟ್ಟದ ಶಿಕ್ಷಣ, ಉತ್ತಮ ಆಹಾರ ನೀಡುತ್ತಿರುವ ಎಕ್ಸಲೆಂಟ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಶಕ್ತಿಯಾಗಿ ಮೂಡಿಬರುತ್ತಿದೆ ಎಂದರು. ಸಮಾರಂಭದಲ್ಲಿ ಪಾಲ್ಗೊಂಡ ಶ್ರೀ ಸಿದ್ಧಲಿಂಗ ಮಹಾಸ್ವಾಮಿ, ಕೊಡಗು ವಿರಾಜಪೇಟಯ ಅರಣೇರಿಶ್ರೀ, ಕಿರಿಕೊಡಲಿಮಠ ಸದಾಶಿವ ಸ್ವಾಮಿ ಅವರು ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ
ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಅವರನ್ನು ಸಮ್ಮಾನಿಸಿದರು.
ಉಜಿರೆ ಎಸ್‌ಡಿಎಂ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಅಭಯಚಂದ್ರ, ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಯುವರಾಜ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್ ಬಾಬು, ಪ್ರೌಢಶಾಲೆ ಮುಖ್ಯ ಶಿಕ್ಷಕ ಜಯಶೀಲಾ ಉಪಸ್ಥಿತರಿದ್ದರು. ಲೋಹಿತ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯ ದರ್ಶಿ ರಶ್ಮಿತಾ ಯುವರಾಜ್ ಜೈನ್ ವಂದಿಸಿದರು.