Advertisement

50,000 ರೂ. ಪಡೆದು ಗ್ರೆನೇಡ್‌ ದಾಳಿ ನಡೆಸಿದ ವಿದ್ಯಾರ್ಥಿ!

12:30 AM Mar 09, 2019 | |

ಜಮ್ಮು: ಗುರುವಾರ ಜಮ್ಮು ಬಸ್‌ ನಿಲ್ದಾಣದಲ್ಲಿ ಗ್ರೆನೇಡ್‌ ಸ್ಫೋಟಗೊಳಿಸಿ, ಇಬ್ಬರ ಸಾವಿಗೆ ಕಾರಣನಾದವ 9ನೇ ತರಗತಿಯ ವಿದ್ಯಾರ್ಥಿ ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯು 16 ವರ್ಷದ ಬಾಲಕನಿಗೆ 50 ಸಾವಿರ ರೂ. ನಗದು ನೀಡಿ ಈ ಕೃತ್ಯವೆಸಗುವಂತೆ ಪ್ರೇರೇಪಿಸಿತ್ತು ಎಂಬ ಆಘಾತಕಾರಿ ವಿಚಾರವನ್ನು ಬಾಲಕ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಇದು ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಮಕ್ಕಳನ್ನು ಬಳಕೆ ಮಾಡುವಂಥ ಕೆಲಸವನ್ನು ಉಗ್ರ ಸಂಘಟನೆಗಳು ಮತ್ತೆ ಆರಂಭಿಸಿರುವ ಸುಳಿವು ನೀಡಿದೆ. ಬಾಲಕರನ್ನು ಉಗ್ರ ಕೃತ್ಯಕ್ಕೆ ಬಳಸಿದರೆ, ಅವರು ಕಾನೂನಾತ್ಮಕ ಶಿಕ್ಷೆಯಿಂದ ತಪ್ಪಿಸಿ ಕೊಳ್ಳಬಹುದು ಎನ್ನುವುದು ಉಗ್ರರ ಯೋಚನೆ ಯಾಗಿದೆ. ಸುಮಾರು 19 ವರ್ಷಗಳ ಹಿಂದೆ ಕಣಿವೆ ರಾಜ್ಯದಲ್ಲಿ ಉಗ್ರರು ಇಂಥದ್ದೇ ಕ್ರಮ ಅನುಸರಿಸಿ, ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದರು.

Advertisement

ಲಂಚ್‌ ಬಾಕ್ಸ್‌ನಲ್ಲಿ ತಂದಿದ್ದ: ವಿಚಾರಣೆ ವೇಳೆ ಬಾಲಕನು, “ಕುಲ್ಗಾಂ ಜಿಲ್ಲೆಯ ಸ್ವಘೋಷಿತ ಹಿಜ್ಬುಲ್‌ ಮುಖ್ಯಸ್ಥ ಮುಜಮ್ಮಿಲ್‌ ಎಂಬಾತ ತನಗೆ 50 ಸಾವಿರ ರೂ.ಗಳನ್ನು ನೀಡಿ ಬಸ್‌ ನಿಲ್ದಾಣದಲ್ಲಿ ಗ್ರೆನೇಡ್‌ ಎಸೆಯುವಂತೆ ಸೂಚಿಸಿದ. ಅಲ್ಲದೆ, ಲಂಚ್‌ ಬಾಕ್ಸ್‌ ನಲ್ಲಿ ಅಕ್ಕಿಯ ನಡುವೆ ಗ್ರೆನೇಡ್‌ ಇಟ್ಟು ಕೊಟ್ಟಿದ್ದ. ಆತ ಹೇಳಿದಂತೆ ನಾನು ಮಾಡಿದ್ದೇನೆ ಎಂದು ಹೇಳಿದ್ದಾನೆ. ಮುಜಮ್ಮಿಲ್‌ನ ಫೋಟೋವನ್ನು ಪೊಲೀಸರು ಬಾಲಕನಿಗೆ ತೋರಿಸಿದ್ದು, ಗ್ರೆನೇಡ್‌ ನೀಡಿದ್ದ ಈತನೇ ಎಂದು ಬಾಲಕ ಗುರುತಿಸಿದ್ದಾನೆ.

ವಯಸ್ಸು ದೃಢಪಡಿಸಿದ ಬಳಿಕ ಕ್ರಮ: ಗ್ರೆನೇಡ್‌ ಎಸೆದ ಬಾಲಕನ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಹಾಗೂ ಶಾಲಾ ದಾಖಲೆಗಳ ಪ್ರಕಾರ, ಈತನ ಜನ್ಮದಿನಾಂಕ ಮಾ.12, 2003 ಆಗಿದೆ. ಇದೇ ತಿಂಗಳ 12ರಂದು ಈ ಬಾಲಕನಿಗೆ 16 ವರ್ಷ ತುಂಬಲಿದೆ. ಈತನ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಮುನ್ನ ಅವನ ವಯಸ್ಸನ್ನು ದೃಢಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಟಿವಿ ಅಳವಡಿಸಿ: ಈ ನಡುವೆ, ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಜಮ್ಮು ವಿನ ವ್ಯಾಪಾರಿಗಳಿಗೆ ಪೊಲೀಸರು ಸೂಚಿಸಿದ್ದಾರೆ. ಈ ಮೂಲಕ ನಗರವನ್ನು ಸುರಕ್ಷಿತ ವಾಗಿಡಲು ನೆರವಾಗಿ ಎಂದು ಕೇಳಿಕೊಂಡಿದ್ದಾರೆ. ಗ್ರೆನೇಡ್‌ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಮತ್ತೂಬ್ಬ ವ್ಯಕ್ತಿ ಶುಕ್ರವಾರ ಅಸುನೀಗಿದ್ದು, ಮೃತರ ಸಂಖ್ಯೆ 2ಕ್ಕೇರಿದೆ. ಇತರೆ 31 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next