Advertisement

ವಿದ್ಯಾರ್ಥಿನಿಗೆ ಸಿಕ್ತು ಅಪೂರ್ವ ಅವಕಾಶ: ಒಂದು ದಿನದ ಮಟ್ಟಿಗೆ ಡಿ.ಸಿ. ಕಾರ್ಯವೈಖರಿ ವೀಕ್ಷಣೆ

12:34 PM Aug 23, 2022 | Team Udayavani |

ಕಲಬುರಗಿ:  ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕಳೆದ ಜುಲೈನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅಯೋಜಿಸಿದ್ದ “ಕೌಶಲ ಸ್ಪೂರ್ತಿ” ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕು.ರಕ್ಷಿತಾ ಅವರಿಗೆ ಕೌಶಲ್ಯಾಭಿವೃದ್ಧಿ ಇಲಾಖೆಯು ಮಂಗಳವಾರ ಡಿ.ಸಿ. ಯಶವಂತ ವಿ. ಗುರುಕರ್ ಅವರ ಒಂದು ದಿನದ ಕೆಲಸ ಕಾರ್ಯಗಳ ವೀಕ್ಷಣೆಗೆ ಅಪೂರ್ವ ಅವಕಾಶ ನೀಡಿತು.

Advertisement

ಜಿಲ್ಲಾಧಿಕಾರಿಗಳ ಇಡೀ ದಿನದ ಕಾರ್ಯವೈಖರಿಯನ್ನು ವೀಕ್ಷಿಸಲು  ಬೆಳಗ್ಗೆ ಡಿ.ಸಿ ಕಚೇರಿಗೆ ಬಂದ ಜೇವರ್ಗಿ ಮೂಲದ ಕಲಬುರಗಿಯ ವಿ.ಜಿ.ಮಹಿಳಾ ಮಹಾವಿದ್ಯಾಲಯದ ಬಿ.ಎಸ್ಸಿ. ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ ರಕ್ಷಿತಾ ತಂದೆ ರಾಜಶೇಖರ ಅವರನ್ನು‌ ಹೂಗುಚ್ಛ ನೀಡಿ ಡಿ.ಸಿ. ಅವರು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಡಿ.ಸಿ.ಯಶವಂತ ವಿ. ಗುರುಕರ್ ಮಾತನಾಡಿ, ಇಡೀ ದಿನ ನನ್ನೊಂದಿಗೆ ಇದ್ದು, ಸಭೆ-ಕೆಲಸ‌ ಕಾರ್ಯಗಳು ವೀಕ್ಷಿಸಬೇಕು. ಸಾಯಂಕಾಲ‌ 5.30 ಗಂಟೆಗೆ‌ ನನ್ನ ಕಾರಿನಲ್ಲಿಯೇ ಮನೆಗೆ ಕಳುಹಿಸುವೆ ಎಂದು ವಿದ್ಯಾರ್ಥಿನಿಗೆ ಮತ್ತು ಅವರ ತಂದೆ ಕಾರ್ಪೆಂಟರ್ ರಾಜಶೇಖರ ವಿಶ್ವಕರ್ಮ ಅವರಿಗೆ ಹೇಳಿದರು.

ಹೆಮ್ಮ ಅನಿಸುತ್ತಿದೆ;

ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಶಿಕ್ಷಣದ ಹೊರತಾಗಿ ನಾವು ಕೌಶಲ್ಯ ಹೇಗೆ ಬೆಳಸಿಕೊಳ್ಳಬೇಕೆಂಬ ವಿಷಯದ ಮೇಲೆ ಆನ್ ಲೈನ್ ಮೂಲಕ ನನ್ನ ಪ್ರಬಂಧ ಮಂಡಿಸಿದ್ದೆ. ಅದಕ್ಕೆ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ‌ ಪಡೆದು ಇಂದು ಡಿ.ಸಿ. ಕಾರ್ಯ ವೀಕ್ಷಣೆಗೆ ಅವಕಾಶ ಸಿಕ್ಕಿದ್ದು ಹೆಮ್ಮೆ ಅನಿಸುತ್ತಿದೆ ಎಂದು ವಿದ್ಯಾರ್ಥಿನಿ ಕು.ರಕ್ಷಿತಾ ಸಂತಸ‌ ಹಂಚಿಕೊಂಡರು.

Advertisement

ಜಿಲ್ಲಾ‌ ಕೌಶಲ್ಯಾಭಿವೃದ್ಧಿ ಅಧಿಕಾರಿ ಮುರಲಿಧರ ರತ್ನಗಿರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next