Advertisement

ಕಲಿಕೆಗೆ ಪೂರಕ ವಿದ್ಯಾರ್ಥಿ ಸ್ನೇಹಿ ಆ್ಯಪ್ಸ್‌

10:31 PM Aug 06, 2019 | mahesh |

ಗುರುಗಳನ್ನು ಅರಸುತ್ತಾ ಹೋಗಿ ವಿದ್ಯೆ ಕಲಿಯುವ ಪದ್ಧತಿ ಹೋಗಿ ಒಂದೇ ಸೂರಿನಡಿ ಎಲ್ಲರ ಕುಳಿತು ಜ್ಞಾನ ವೃದ್ಧಿಸಿಕೊಳ್ಳುವ ವ್ಯವಸ್ಥೆ ಪ್ರಾರಂಭವಾಯಿತು. ಇದೀಗ ಈ ವ್ಯವಸ್ಥೆ ಕೂಡ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಸ್ಮಾರ್ಟ್‌ ಯುಗದಲ್ಲಿ ಸ್ಮಾರ್ಟ್‌ ಕಲಿಕೆಗೆ ಅವಕಾಶಗಳು ಹೆಚ್ಚಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆ ವಿದ್ಯಾರ್ಥಿಗಳಿಗೆ ಹೊಸ ಕಲಿಕಾ ವಿಧಾನಗಳನ್ನು ತೋರಿಸಿಕೊಡುತ್ತಿದೆ.

Advertisement

ಇಂದೇನಿದ್ದರೂ ಸ್ಮಾರ್ಟ್‌ಫೋನ್‌ ಯುಗ. ಅದರಲ್ಲಿಯೂ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಮೊಬೈಲ್‌ ಫೋನ್‌ ಉಪಯೋಗಿಸುತ್ತಾರೆ. ಹಿಂದಿದ್ದ ಕೀಪೈಡ್‌ ಮೊಬೈಲ್‌ ಹೋಗಿ ಈಗೇನಿದ್ದರೂ ಎಲ್ಲರ ಕೈಗೆ ಸ್ಮಾರ್ಟ್‌ಫೋನ್‌ ಬಂದಿದೆ. ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಇದ್ದರೆ ಸಾಕು ವಿವಿಧ ದೇಶಗಳ ಮೂಲೆಗಳಲ್ಲಾಗುವ ವರದಿಯನ್ನೂ ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜುಗಳು ಕೂಡ ಸ್ಮಾರ್ಟ್‌ ಆಗುತ್ತಿವೆ. ಇದೇ ಕಾರಣಕ್ಕೆ ಸ್ಮಾರ್ಟ್‌ ಕ್ಲಾಸ್‌ ತರಗತಿಗಳು ಕೂಡ ಆರಂಭವಾಗಿವೆ. ಇನ್ನು ತಂತ್ರಜ್ಞಾನ ಕ್ಷೇತ್ರ ಮುಂದುವರೆದಂತೆ ಕೈಬೆರಳಿನಲ್ಲಿಯೇ ಮಾಹಿತಿ ಸಿಗುತ್ತಿದೆ. ವಿದ್ಯಾರ್ಥಿಗಳಿಗೆ ತಮ್ಮ ಬುದ್ಧಿಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೊಬೈಲ್‌ನಲ್ಲಿ ಅನೇಕ ಆ್ಯಪ್‌ಗ್ಳಿಂದು ದೊರೆಯುತ್ತಿವೆ. ವಿದ್ಯಾರ್ಥಿಗಳು ಕಲಿಕೆಗೆ ಅನುಗುಣವಾಗುವ ರೀತಿಯಲ್ಲಿ ಮೊಬೈಲ್‌ ಬಳಕೆ ಮಾಡುವತ್ತ ಆಸಕ್ತಿ ತೋರಿದರೆ ಮೊಬೈಲ್‌ನಿಂದಾಗುವ ಅನಾಹುತಕ್ಕೆ ಕಡಿವಾಣ ಹಾಕಬಹುದಾಗಿದೆ.

ಇಂದಿನ ದಿನಗಳಲ್ಲಿ ಕಲಿಕೆ ಎನ್ನುವುದು ಕೇವಲ ತರಗತಿಯ ಕೋಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದಕ್ಕೆ ತಕ್ಕಂತೆಯೇ ಬೋಧನಾ ವಿಧಾನಗಳು ಕೂಡಾ ವಿಸ್ತಾರ ಪಡೆಯುತ್ತಿವೆ. ವಿದ್ಯಾರ್ಥಿಗಳ ನಡುವೆ ಸ್ಪರ್ಧೆಯ ಒತ್ತಡಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟಂತಹಾ ಅನೇಕ ಆ್ಯಪ್‌ಗ್ಳು ಕೂಡ ಸೃಷ್ಠಿಯಾಗಿವೆ. ಸ್ಮಾರ್ಟ್‌ ಫೋನ್‌ ಅಥವಾ ಟ್ಯಾಬ್ಲೆಟ್‌ ಬಳಕೆ ಮಾಡುವ ಮಂದಿ ಈ ಆ್ಯಪ್‌ ಮುಖೇನ ಮಾಹಿತಿಯನ್ನು ಪಡೆಯಬಹುದಾಗಿದೆ.

ಶೈಕ್ಷಣಿಕ ಮಾಹಿತಿಯನ್ನು ನೀಡಬಲ್ಲ ಪ್ರಮುಖ ಉಚಿತ ಆ್ಯಪ್‌ಗ್ಳ ಪೈಕಿ ಸ್ವಾಧ್ಯಾಯ ಆ್ಯಪ್‌ ಕೂಡ ಒಂದು. ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್‌ ಲಭ್ಯವಿದ್ದು, ಆನ್‌ಲೈನ್‌ ಕೋಚಿಂಗ್‌ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿನ್ನು ನೀಡಲಾಗುತ್ತದೆ. ಅದರಲ್ಲಿಯೂ ಕೆಪಿಎಸ್‌ಸಿ ಪರೀಕ್ಷೆಗೆ ಯಾವ ರೀತಿಯಲ್ಲಿ ತಯಾರಾಗಬೇಕು, ಆನ್‌ಲೈನ್‌ ಕೋಚಿಂಗ್‌, ಆನ್‌ಲೈನ್‌ ಪುಸ್ತಕಗಳು ಇದರಲ್ಲಿವೆ. ಇವಲ್ಲದೆ, ಕೆಎಎಸ್‌, ಪಿಡಿಒ, ಎಸ್‌ಡಿಎ, ಎಫ್‌ಡಿಎ ಮುಂತಾದ ಪರೀಕ್ಷೆ ಬರೆಯಲು ಇಚ್ಛಿಸುವ ಮಂದಿ ಈ ಆ್ಯಪ್‌ ಮೂಲಕ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು.

Advertisement

ಶಿಕ್ಷಣ ಸ್ನೇಹಿ ಆ್ಯಪ್‌ಗ್ಳ ಪೈಕಿ ಬೈಜುಸ್‌ ಕೂಡ ಒಂದು. ಬೈಜುಸ್‌ ಆ್ಯಪ್‌ ಮುಖೇನ ನಾಲ್ಕನೇ ತರಗತಿಯಿಂದ ಪಿಯುಸಿವರೆಗಿನ ಶಿಕ್ಷಣದ ಪ್ರತಿಯೊಂದು ವಿಷಯದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್‌ (ಯುಪಿಎಸ್‌ಸಿ), ಅಂತಾರಾಷ್ಟ್ರೀಯ ಪರೀಕ್ಷೆಗಳಾದ ಜಿಆರ್‌ಇ ಮತ್ತು ಜಿಮೆಟ್‌ ಪರೀಕ್ಷೆಗಳಿಗೆ ಬೇಕಾದ ಉಪಯುಕ್ತ ಮಾಹಿತಿಗಳು ಹಾಗೂ ಸೇವೆಗಳನ್ನು ಒದಗಿಸುತ್ತದೆ. ಇದರೊಂದಿಗೆ ಐಐಟಿ, ಜೆಇಇ, ಎನ್‌ಇಇಟ್‌ (ನೀಟ್‌), ಸಿಎಟಿ (ಕ್ಯಾಟ್‌) ಪರೀಕ್ಷೆ ತಯಾರಿಗಳ ಮಾಹಿತಿಯ ಹೂರಣ ಇದರಲ್ಲಿದೆ.

ಪ್ಲೇಸ್ಟೋರ್‌ನಲ್ಲಿ ಎನೀ ಬುಕ್ಸ್‌ ಎಂಬ ಆ್ಯಪ್‌ ಇದ್ದು, ಇದರಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಪುಸ್ತಕಗಳಿವೆ. ಇದರಿಂದ ತಮಗಿಷ್ಟವಾದ ಪುಸ್ತಕಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ಈ ಮೂಲಕ ತಮಿಗಿಷ್ಟವಾದ ಪುಸ್ತಕವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಶೈಕ್ಷಣಿಕ ಆಪ್ಲಿಕೇಶನ್‌ಗಳ ಪೈಕಿ ಇಡಿಎಕ್ಸ್‌ ಆ್ಯಪ್‌ ಕೂಡ ಒಂದಾಗಿದೆ. ಕಂಪ್ಯೂಟರ್‌ ಪ್ರೋಗ್ರಾಮಿಂಗ್‌, ಇತಿಹಾಸ, ಆರೋಗ್ಯ ಸೇರಿದಂತೆ ಮತ್ತಿತರ ಶಿಕ್ಷಣದ ಕೋರ್ಸ್‌ಗಳಿವೆ. ಅಲ್ಲದೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ವಿಡಿಯೋಗಳು ಕೂಡ ಇದರಲ್ಲಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಮಾಹಿತಿ ತಿಳಿಯುವ ಸಲುವಾಗಿ ಯುಡೆಮಿ ಎಂಬ ಆ್ಯಪ್‌ ಶೈಕ್ಷಣಿಯ ಆ್ಯಪ್‌ ಇದೆ. ಖಾನ್‌ ಅಕಾಡೆಮಿ ಎಂಬ ಆ್ಯಪ್‌ ಶೈಕ್ಷಣಿಕ ಕಲಿಕೆಗೆ ವೇದಿಕೆಯಾಗಿದೆ. ಇದರಲ್ಲಿ ಅನೇಕ ಕೋರ್ಸ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. 10,000ಕ್ಕೂ ಮಿಕ್ಕಿ ಸೂಚನಾ ವಿಡಿಯೋಗಳು, ತರಗತಿಗಳು ಮತ್ತು ಇನ್ನಿತರ ವಿಷಯಗಳನ್ನು ಹೊಂದಿದೆ. ಖಾನ್‌ ಅಕಾಡೆಮಿ ಆ್ಯಪ್‌ ಮುಖ್ಯವಾಗಿ ಅರ್ಥಶಾಸ್ತ್ರ, ಗಣಿತ, ಇತಿಹಾಸ, ವಿಜ್ಞಾನ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ.

ಇವಿಷ್ಟೇ ಅಲ್ಲದೆ, ಮೆಮ್‌ರೈಜ್‌, ಸ್ಮಾರ್ಟ್‌ ಚಾರ್ಟ್‌, ಎಡ್‌ಮೊಡೊ, ಸೋರ್ಕೆಟಿವ್‌ ಸ್ಟೂಡೆಂಟ್‌, ನಿಯರ್‌ಪೋಡ್‌, ಸೇಫ್‌ ಕ್ಲಾಸ್‌ ರೂಂ ಕಮ್ಯೂನಿಕೇಷನ್‌, ಬುಕ್ಸಿ, ಮೈ ಆಲ್ಫಾ ನುಕ್‌ ಸೇರಿದಂತೆ ಮತ್ತಿತರ ಆ್ಯಪ್‌ಗ್ಳು ಸಹಾಯಕ್ಕಿವೆ.

ಯೂಟ್ಯೂಬ್‌ ತರಗತಿ
ಯೂಟ್ಯೂಬ್‌ ಎಂದರೆ ಅದೊಂದು ಭಂಡಾರ. ಅಲ್ಲಿ ಎಲ್ಲ ಕ್ಷೇತ್ರಗಳಿಗೂ ಸಂಬಂಧಿತ ಮಾಹಿತಿಯನ್ನು ಪಡೆಯಬಹುದು. ಅದರಲ್ಲಿಯೂ ಶಿಕ್ಷಣ ಕ್ಷೇತ್ರದ ಬಗ್ಗೆಯೂ ಅನೇಕ ಮಾಹಿತಿಗಳಿವೆ. ಕೆಲವೊಂದು ಮಂದಿ ತನ್ನ ಆಸಕ್ತಿಯ ಕ್ಷೇತ್ರದ ಬಗ್ಗೆ ಅಲ್ಪ ಅವಧಿಯ ಕೋರ್ಸ್‌ ಗಳನ್ನು ಯೂಟ್ಯೂಬ್‌ ನೋಡಿ ಕಲಿಯುವವರಿದ್ದಾರೆ.

ಆಯ್ಕೆ ಬಗ್ಗೆ ಎಚ್ಚರವಿರಲಿ
ಪ್ಲೇಸ್ಟೋರ್‌ನಲ್ಲಿ ಕಲಿಕೆ ಸಂಬಂಧಪಟ್ಟ ಲಕ್ಷಕ್ಕೂ ಅಧಿಕ ಆ್ಯಪ್‌ಗ್ಳು ಲಭ್ಯವಿವೆ.ಅವುಗಳ ಆಯ್ಕೆಯಲ್ಲಿ ಹೆಚ್ಚಿನ ಜಾಗೃತಿ ಅಗತ್ಯ. ಏಕೆಂದರೆ ಎಲ್ಲ ಆ್ಯಪ್‌ಗ್ಳು ಉತ್ತಮವಾಗಿರುವುದಿಲ್ಲ. ಸೂಕ್ತವಾದ ಆ್ಯಪ್‌ ಆಯ್ಕೆ ಮಾಡಿಕೊಳ್ಳುವುದು ವಿದ್ಯಾರ್ಥಿಗಳ ಜಾಣ್ಮೆಗೆ ಬಿಟ್ಟದ್ದು. ಯಾವ ವಿಷಯ ಕಷ್ಟವಾಗುತ್ತದೆ ಆ ವಿಷಯಕ್ಕೆ ಸಂಬಂಧಪಟ್ಟ ಆ್ಯಪ್‌ಗ್ಳನ್ನು ಆಯ್ಕೆ ಮಾಡಿಕೊಳ್ಳುವುದು ಅತೀ ಮುಖ್ಯ.

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next