Advertisement

ನಗರದ ವಿದ್ಯಾರ್ಥಿ ಬ್ಯಾಗ್‌ ಬೆಳ್ತಂಗಡಿ ಬಳಿಯ ಕೆರೆ ದಡದಲ್ಲಿ ಪತ್ತೆ!

12:09 PM Jul 26, 2018 | |

ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ದಡದಲ್ಲಿ ಬುಧವಾರ, ಬೆಂಗಳೂರು ಮೂಲದ ವಿದ್ಯಾರ್ಥಿಯೊಬ್ಬನ ಬ್ಯಾಗ್‌ ಹಾಗೂ ಚಪ್ಪಲಿ ಪತ್ತೆಯಾಗಿದ್ದು, ಕುತೂಹಲ ಸೃಷ್ಟಿಸಿದೆ. ಅಗ್ನಿಶಾಮಕ ದಳದ ಸಿಬಂದಿ ಕೆರೆಯಲ್ಲಿ ರಾತ್ರಿವರೆಗೂ ಹುಡುಕಾಟ ನಡೆಸಿದರೂ ಬಾಲಕನ ಯಾವುದೇ ಸುಳಿವು ಪತ್ತೆಯಾಗಿಲ್ಲ.

Advertisement

ಬ್ಯಾಗಿನಲ್ಲಿ ಶಾಲೆಯ ಐಡಿ ಕಾರ್ಡ್‌, ಆಧಾರ್‌ ಕಾರ್ಡ್‌, ಜನನ ಪ್ರಮಾಣಪತ್ರ ಲಭ್ಯವಾಗಿದ್ದು, ಅದು ಬೆಂಗಳೂರಿನ ಹೂಡಿ ಪ್ರದೇಶದ ನಿವಾಸಿ ಎನ್‌.ವಿ.ಪ್ರೇಮ್‌ಕುಮಾರ್‌ ಅವರ ಪುತ್ರ ಕೆ.ಪಿ.ಯಶವಂತ್‌ ಸಾಯಿ (15) ಅವನದ್ದಾಗಿದೆ.

ದಾಖಲೆಯಲ್ಲಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ವಿದ್ಯಾರ್ಥಿಯು ಜು.24ರಂದು ನಾಪತ್ತೆಯಾಗಿದ್ದ ಎಂದು ತಿಳಿದು ಬಂದಿದ್ದು, ಈ ಕುರಿತು ಬೆಂಗಳೂರಿನ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಯು ಜು.24ರಂದು ಬೆಂಗಳೂರಿನಿಂದ ಮಂಗಳೂರಿಗೆ ಟಿಕೆಟ್‌ ಮಾಡಿಸಿದ್ದು, ಅದೇ ದಿನ ಸಂಜೆ ಬೆಳ್ತಂಗಡಿಯಲ್ಲಿ ಇಳಿದಿದ್ದಾನೆ. ಬಳಿಕ ಅಲ್ಲಿಂದ ಖಾಸಗಿ ಬಸ್ಸಿನ ಮೂಲಕ ಕಾರ್ಕಳಕ್ಕೆ ಟಿಕೆಟ್‌ ಮಾಡಿದ್ದು,

ಈ ವೇಳೆ ಗುರುವಾಯನಕೆರೆ ಗ್ರಾಮದಲ್ಲಿ ಇಳಿದು ಕೆರೆಯ ಬಳಿ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಬುಧವಾರ ಕೆರೆಯ ಬಳಿ ಸಿಕ್ಕ ಬ್ಯಾಗ್‌ ಹಾಗೂ ಚಪ್ಪಲಿಯನ್ನು ಗಮನಿಸಿ ಸ್ಥಳೀಯರು ಬೆಳ್ತಂಗಡಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬಂದಿಗೆ ಮಾಹಿತಿ ನೀಡಿದ್ದಾರೆ.

Advertisement

ಅಗ್ನಿಶಾಮಕ ಸಿಬಂದಿ ರಾತ್ರಿವರೆಗೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಸಿಬ್ಬಂದಿ ರಾತ್ರಿಯಾಗಿದೆ ಎಂದು ಹುಡುಕಾಟ ನಿಲ್ಲಿಸಿದ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಬ್ಯಾಗಿನಲ್ಲಿ ಸಿಕ್ಕ ಮೊಬೈಲ್‌ ಸಂಖ್ಯೆಯ ಮೂಲಕ ಮನೆಯವರನ್ನು ಸಂಪರ್ಕಿಸಿದ್ದು, ಜು.24ರಂದು ಆತನನ್ನು ತಂದೆ ದೂರವಾಣಿ ನಗರದ ಐಟಿಐ ವಿದ್ಯಾಮಂದಿರ ಪ್ರೌಢಶಾಲೆಗೆ ಬಿಟ್ಟು ಬಂದಿದ್ದಾರೆ. ಬಳಿಕ ಆತ ಬೆಳಗ್ಗೆಯೇ ಶಾಲೆಯಿಂದ ಹಿಂತಿರುಗಿ ಕೆಎಸ್‌ಆರ್‌ಟಿಸಿ ಮಂಗಳೂರು ಬಸ್‌ ಹತ್ತಿದ್ದಾನೆ. ಪೊಲೀಸರ ಮಾಹಿತಿಯಂತೆ ಪೋಷಕರು ಗುರುವಾಯನಕೆರೆಗೆ ಆಗಮಿಸಿದ್ದಾರೆ.

ಕೆರೆಯ ಬದಿಯಲ್ಲಿ ಸಿಕ್ಕ ದಾಖಲೆಗಳನ್ನು ಬೆಳ್ತಂಗಡಿ ಠಾಣೆಗೆ ತಂದು ಇರಿಸಲಾಗಿದ್ದು, ಜು.26ರಂದು ಹುಡುಕಾಟ ನಡೆಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಮಳೆಗಾಲ ಆಗಿರುವುದರಿಂದ ಕೆರೆಯಲ್ಲಿ ನೀರು ತುಂಬಿರುವ ಜತೆಗೆ ಕೆಸರು ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದು, ಹುಡುಕಾಟ ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಡ್ಡು ಮಾಡಿ ಬರುತ್ತೇನೆ…: ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಚೀಟಿಯೊಂದು ಪತ್ತೆಯಾಗಿದೆ ಎಂಬ ಮಾಹಿತಿಯಿದ್ದು, ಅದರಲ್ಲಿ ತಾನು ಉಡುಪಿಗೆ ಹೋಗುತ್ತಿದ್ದೇನೆ. ದುಡ್ಡು ಮಾಡಿ ಬರುತ್ತೇನೆ ಎಂದು ಬರೆಯಲಾಗಿದೆ ಎಂಬ ಎನ್ನಲಾಗಿದೆ.ಹೀಗಾಗಿ ವಿದ್ಯಾರ್ಥಿಯು ದಾರಿ ತಪ್ಪಿಸುವುದಕ್ಕಾಗಿ ಈ ರೀತಿ ಕೆರೆಯ ಬದಿಯಲ್ಲಿ ಬ್ಯಾಗ್‌ ಇಟ್ಟು ಬೇರೆಡೆಗೆ ಹೋಗಿರಬಹುದು ಎನ್ನುವ ಅನುಮಾನವೂ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next