Advertisement

ವಿದ್ಯಾರ್ಥಿ ಕಲಾವಿದರ ಲೆನ್ಸ್‌ ಆರ್ಟ್‌

11:52 AM Sep 23, 2017 | Team Udayavani |

ಮಂಗಳೂರಿನ ಕೆನರಾ ಕಾಲೇಜಿನ ಫೊಟೋಗ್ರಫಿ ಕ್ಲಬ್‌  ಸದಸ್ಯರು ಈಚೆಗೆ ಲೆನ್ಸ್ ಆರ್ಟ್‌ ಎಂಬ ಛಾಯಾಚಿತ್ರ ಪ್ರದರ್ಶನವನ್ನು ತಮ್ಮ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದರು. ಭರವಸೆಯ ಮತ್ತು ಪ್ರತಿಭಾವಂತ 11 ಮಂದಿ ವಿದ್ಯಾರ್ಥಿಗಳ ಒಟ್ಟು 120 ಕಲಾತ್ಮಕ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು. 

Advertisement

ವ್ಯಕ್ತಿಭಾವಚಿತ್ರ, ಬದುಕಿನ ಮುಖಗಳು, ಪ್ರಕೃತಿ, ಅವ್ಯಕ್ತ, ಕಲೆ ಮತ್ತು ಸಂಸ್ಕೃತಿ, ಜನ ಮತ್ತು ಬದುಕು ಎಂಬ ಆರು ಶೀರ್ಷಿಕೆಗಳಲ್ಲಿ ಛಾಯಾಚಿತ್ರಗಳನ್ನು ವಿಂಗಡಿಸಲಾಗಿತ್ತು. ವರ್ಣ ಮತ್ತು ಕಪ್ಪುಬಿಳುಪು ವಿಭಾಗಗಳಲ್ಲಿದ್ದ ಛಾಯಾಚಿತ್ರಗಳು ಕಲಾಸಕ್ತರ ಗಮನ ಸೆಳೆದವು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲದೆ, ಆಸಕ್ತ ಸಾರ್ವಜನಿಕರೂ ಪ್ರದರ್ಶನವನ್ನುವೀಕ್ಷಿಸಿ ಪ್ರೋತ್ಸಾಹಿಸಿದರು.


ಫೊಟೋಗ್ರಫಿ ಒಂದು ವೃತ್ತಿಯಾಗಿ ಮಾತ್ರವಲ್ಲ, ಒಂದು ಕಲೆಯಾಗಿ ಕಲಾಪ್ರಪಂಚದಲ್ಲಿ ಸ್ಥಾನ ಗಳಿಸಿದೆ. ಕಲಾತ್ಮಕ ಛಾಯಾಚಿತ್ರಗಳು ಅನೂಹ್ಯವಾದ ಲೋಕವೊಂದನ್ನು ನಮ್ಮೆದುರು ತೆರೆದಿಡುತ್ತವೆ. ಛಾಯಾಚಿತ್ರ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಮುಂದುವರಿಯುವ ವಿದ್ಯಾರ್ಥಿಗಳಿಗೆ ವ್ಯಾಪಾರ-ವಾಣಿಜ್ಯ, ಜಾಹಿರಾತು, ಪತ್ರಿಕೋದ್ಯಮ ಮತ್ತು ಕಲಾತ್ಮಕ ಫೊಟೋಗ್ರಫಿ ಪ್ರಪಂಚದಲ್ಲಿ ಇಂದು ವಿಪುಲವಾದ ಅವಕಾಶಗಳಿವೆ. ಇಂದು ಮಾರುಕಟ್ಟೆಯಲ್ಲಿ ಉನ್ನತ ಗುಣಮಟ್ಟದ ಕ್ಯಾಮೆರಾಗಳು ಲಭ್ಯವಿದ್ದು, ಫೊಟೋಗಳ ಮುದ್ರಣ ತಂತ್ರಜ್ಞಾನ ಕೂಡ ತುಂಬ ಮುಂದುವರಿದಿದೆ. ಕಲಾತ್ಮಕ ಛಾಯಾಚಿತ್ರಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿವರ್ಷ ಹಲವು ಸ್ಪರ್ಧೆಗಳು ಏರ್ಪಡುತ್ತವೆ. ಒಳ್ಳೆಯ ಛಾಯಾಗ್ರಾಹಕರಿಗೆ ತಾರಾಮೌಲ್ಯವೂ ಪ್ರಾಪ್ತವಾಗುತ್ತದೆ. ಇವತ್ತು ಕಲಾತ್ಮಕ ಛಾಯಾಚಿತ್ರಗಳನ್ನು `ಪ್ರಸ್ತುತದ ಮಹಾಕಾವ್ಯ’ ಎಂದೇ ಹೇಳಲಾಗುತ್ತಿದೆ.

ವಿದ್ಯಾರ್ಥಿಗಳ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಾಸದ ದೃಷ್ಟಿಯಿಂದ ಮಂಗಳೂರಿನ ಕೆನರಾ ಕಾಲೇಜು ಫೊಟೋಗ್ರಫಿ ಕ್ಲಬ್‌ಗ ಅವಕಾಶ ನೀಡಿದ್ದು ಒಂದು ಉತ್ತಮವಾದ ಬೆಳವಣಿಗೆ. ಈ ಕ್ಲಬ್‌ನಲ್ಲಿ ಸುಮಾರು ಮೂವತ್ತು ಮಂದಿ ವಿದ್ಯಾರ್ಥಿಗಳಿದ್ದು, ಪ್ರದರ್ಶನದಲ್ಲಿ ಸುಜಿತ್‌ ಎಸ್‌. ಕೆ., ರಾಹುಲ್‌ ಕಾಮತ್ , ಆಶ್ರಯ್‌ ಬೇಕಲ್‌, ಶಶಾಂಕ ಆಚಾರ್ಯ, ಆಮೋದ್‌, ಲಿಖೀತಾ, ಫ‌ರ್ಜೀನ್‌, ಪ್ರಸನ್ನ, ಪ್ರತೀಕ, ಪ್ರಸೀದ ಮತ್ತು ಅಪೂರ್ವ ಭಾಗವಹಿಸಿದ್ದಾರೆ. ವಿಶೇಷವೆಂದರೆ ಈ ಕ್ಲಬ್‌ನಲ್ಲಿ ಹುಡುಗರಿಗಿಂತ ಹುಡುಗಿಯರು ಹೆಚ್ಚು.

ವಿದ್ಯಾರ್ಥಿಗಳ ಕಲ್ಪನೆ, ಚಿಂತನೆಗಳು ಹೊಸತನದಿಂದ ಕೂಡಿದ್ದು, ಪ್ರತಿಯೊಂದು ಛಾಯಾಚಿತ್ರವೂ ಹೊಸ ಹೊಸ ಅರ್ಥಗಳನ್ನು ಸ್ಫುರಿಸುವಂತಿತ್ತು. ಇದೊಂದು ಯಶಸ್ವೀ ಪ್ರದರ್ಶನವಾಗಿ ಮೂಡಿ ಬಂದುದರಿಂದ ಇನ್ನಷ್ಟು ಪ್ರದರ್ಶನಗಳನ್ನು ನೀಡಲು ವಿದ್ಯಾರ್ಥಿಗಳು ಆಸಕ್ತರಾಗಿದ್ದಾ ರೆ. ಇವರೆಲ್ಲ ಭರವಸೆ ಇಡಬಹುದಾದ ಪ್ರತಿಭಾವಂತ ಛಾಯಾಚಿತ್ರ ಕಲಾವಿದರಾಗಿ ಬೆಳೆಯುತ್ತಿದ್ದಾರೆ ಅನ್ನುವುದು ಸಂತೋಷದ ವಿಷಯ.

ವಿ| ಅಯನಾ ಪೆರ್ಲ

Advertisement
Advertisement

Udayavani is now on Telegram. Click here to join our channel and stay updated with the latest news.

Next