ಟುಟಿಕೋರಿನ್: ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರಾಜನ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಇದ್ದ ಯುವತಿಯೊಬ್ಬಳು, ಪ್ರಧಾನಿ ಮೋದಿಯನ್ನು ಇಳಿಸಿ, ಬಿಜೆಪಿ-ಆರ್ ಎಸ್ಎಸ್ ಫ್ಯಾಸಿಸ್ಟ್ ಸರ್ಕಾರ ಎಂದು ಕೂಗಾಡಿದ್ದಳು. ಬಳಿಕ ಈಕೆಯನ್ನು ಟುಟುಕೋರಿನ್ ಪೊಲೀಸರು ಬಂಧಿಸಿದ್ದರು. ಮಂಗಳವಾರ ಸೋಫಿಯಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ.
ಸೋಮವಾರ 28 ವರ್ಷದ ಲೂಯಿಸ್ ಸೋಫಿಯಾ ಎಂಬ ಕೆನಡಾ ಮೂಲದ ಸಂಶೋಧನಾ ವಿದ್ಯಾರ್ಥಿನಿ ಮತ್ತು ಸೌಂದರಾಜನ್ ಚೆನ್ನೈನಿಂದ ಟುಟಿಕೋರಿನ್ ಗೆ ತೆರಳುವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷೆ ಸೌಂದರಾಜನ್ ತನ್ನ ಆಸನದಲ್ಲಿ ಕುಳಿತುಕೊಂಡಾಗ ಆಕೆ ಬಳಿ ಬಂದ ಸೋಫಿಯಾ, ಮೋದಿಯನ್ನು ಕೆಳಗಿಳಿಸಿ, ಬಿಜೆಪಿ, ಆರ್ ಎಸ್ ಎಸ್ ಫ್ಯಾಸಿಸ್ಟ್ ಸರ್ಕಾರ ಎಂದು ಕೂಗಾಡಿದ್ದಳು ಎಂದು ವರದಿ ತಿಳಿಸಿದೆ.
ಈಕೆ ಸಾಮಾನ್ಯ ಪ್ರಯಾಣಿಕಳಲ್ಲ, ನನ್ನ ಪ್ರಕಾರ ಯಾವುದೋ ಉಗ್ರಗಾಮಿ ಸಂಘಟನೆ ಈಕೆಯ ಹಿಂದಿರಬೇಕು ಎಂದು ಸೌಂದರಾಜನ್ ಆರೋಪಿಸಿ ದೂರು ನೀಡಿದ್ದರು. ಇಬ್ಬರು ತೂತುಕುಡಿ(ಬ್ರಿಟಿಷ್ ಆಡಳಿತದಲ್ಲಿ ಟುಟಿಕೋರಿನ್ ಅಂತ ಹೆಸರು) ವಿಮಾನ ನಿಲ್ದಾಣದಲ್ಲಿ ಇಳಿದ ಮೇಲೆ ತಾನು ವಿಮಾನದೊಳಗೆ ಕೂಗಾಡಿದ್ದನ್ನು ಸಮರ್ಥಿಸಿಕೊಂಡು, ಇದು ನಮ್ಮ ವಾಕ್ ಸ್ವಾತಂತ್ರ್ಯ ಎಂದು ಹೇಳಿದ್ದಳು.
ಈ ವೇಳೆ ಸೋಫಿಯಾಳ ವಾದದಿಂದ ಬಿಜೆಪಿ ಅಧ್ಯಕ್ಷೆ ಸೌಂದರಾಜನ್ ಬೆಂಬಲಿಗರು ಒಟ್ಟು ಸೇರಿ ಆಕೆ ಬಳಿ ಕ್ಷಮಾಪಣೆ ಕೇಳಲು ಪಟ್ಟು ಹಿಡಿದಿದ್ದರು. ಆದರೆ ಕ್ಷಮಾಪಣೆ ಕೇಳಲು ಆಕೆ ನಿರಾಕರಿಸಿರುವುದಾಗಿ ವರದಿ ವಿವರಿಸಿದೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಸೋಫಿಯಾಳನ್ನು ಬಂಧಿಸಿದ್ದರು.
ಏತನ್ಮಧ್ಯೆ ವಿದ್ಯಾರ್ಥಿನಿ ಸೋಫಿಯಾ ತಂದೆ ಎಎ ಸಮಿ ಕೂಡಾ ತಮಿಳುನಾಡು ಬಿಜೆಪಿ ಅಧ್ಯಕ್ಷೆ ಸೌಂದರಾಜನ್ ವಿರುದ್ಧ ದೂರು ನೀಡಿದ್ದಾರೆ. ಆದರೆ ಪೊಲೀಸರು ಈವರೆಗೂ ದೂರನ್ನು ದಾಖಲಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ. ಕೆಲವರು ನನ್ನ ಮಗಳನ್ನು ಸುತ್ತುವರಿದು ಅಸಭ್ಯವಾಗಿ ಬೈದಿದ್ದರು. ಕೊನೆಗೆ ತಮ್ಮನ್ನು ವಿಮಾನ ನಿಲ್ದಾಣದ ಕೋಣೆಯಲ್ಲಿ ಸುರಕ್ಷತೆಯ ದೃಷ್ಟಿಯಲ್ಲಿ ಕೂರಿಸಿದ್ದರು ಎಂದು ದೂರಿದ್ದಾರೆ.