Advertisement

ಪರೀಕ್ಷಾ ಅಕ್ರಮ ತಡೆಗೆ ವಿದ್ಯಾರ್ಥಿ,ಉಪನ್ಯಾಸಕರಿಗೆ ಅಭಿಶಿಕ್ಷಣ

08:29 AM Nov 02, 2019 | Team Udayavani |

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಡಿಪ್ಲೊಮಾ ಪರೀಕ್ಷೆಯಲ್ಲಿ ಹೆಚ್ಚುತ್ತಿರುವ ಪರೀಕ್ಷಾ ಅವ್ಯವಹಾರ (ಅಕ್ರಮ) ತಪ್ಪಿಸಲು ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗಾಗಿ “ಅಭಿಶಿಕ್ಷಣ’ ವಿಶೇಷ ಕಾರ್ಯಕ್ರಮ ನಡೆಸಲು ತಾಂತ್ರಿಕ ಶಿಕ್ಷಣ ಇಲಾಖೆ ಮುಂದಾಗಿದೆ.

Advertisement

ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿಯನ್ನು ಹೇಗೆ ಮಾಡಬೇಕು, ಪಠ್ಯಕ್ರಮದ ಅಧ್ಯಯನ ಹೇಗಿರಬೇಕು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನಾಧರಿಸಿ ಪರೀಕ್ಷೆಗೆ ತಯಾರಿ ನಡೆಸುವುದು ಹೇಗೆ ಎಂಬ ಹಲವು ಅಂಶಗಳನ್ನು ಸಂಸ್ಥೆಗಳಿಂದ ಪರೀಕ್ಷೆ ಸಂದರ್ಭದಲ್ಲಿ ಅರಿವು ಕಾರ್ಯಕ್ರಮಗಳ ಮೂಲಕ ತಿಳಿಸಿ ಕೊಡಲಾಗುತ್ತದೆ.

ಜೊತೆಗೆ, ರಾಜ್ಯದ ಎಲ್ಲ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವ್ಯವಹಾರದಿಂದ ಆಗಬಹುದಾದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಶಿಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಪ್ರತಿ ವರ್ಷ ಡಿಪ್ಲೊಮಾ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷಾ ಅಕ್ರಮದಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳು ಬೆಳಕಿಗೆ ಬರುತ್ತವೆ. ಅದರ ಮೇಲ್ವಿಚಾರಣೆಗಾಗಿ ಸಮಿತಿ ರಚಿಸಲಾಗುತ್ತದೆ. ಕೆಲವು ವಿದ್ಯಾರ್ಥಿಗಳು ಗಂಭೀರ ಅವ್ಯವಹಾರಕ್ಕೆ ಡಿಬಾರ್‌ ಸಹಿತವಾಗಿ ಶಾಶ್ವತವಾಗಿ ಪರೀಕ್ಷೆ ಬರೆಯುವ ಅವಕಾಶವನ್ನೇ ಕಳೆದುಕೊಂಡಿರುವ ನಿದರ್ಶನ ಕೂಡ ಇದೆ. ಇದನ್ನೆಲ್ಲ ತಪ್ಪಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗಕ್ಕೆ ಪರೀಕ್ಷಾ ಅಕ್ರಮದ ಕುರಿತು ಅರಿವು ಮೂಡಿಸಲು ಅಭಿಶಿಕ್ಷಣ ಕಾರ್ಯಕ್ರಮ ನಡೆಸಲು ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಸೂಚಿಸಲಾಗಿದೆ.

2019ರ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ನಡೆಯಲಿರುವ ಡಿಪ್ಲೊಮಾ ಥಿಯರಿ ಮತ್ತು ಪ್ರಾಯೋಗಿಕ ಪರೀಕ್ಷೆ ಕುರಿತಂತೆ ಪ್ರಾಂಶುಪಾಲರಿಗೆ, ವಿಭಾಗಾಧಿಕಾರಿಗಳಿಗೆ ಮತ್ತು ಉಪನ್ಯಾಸಕರಿಗೆ ಒಂದು ಬಗೆಯ ಅರಿವಿನ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆಯ ಅರಿವು ಮೂಡಿಸಲು ಅಭಿಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಲು ಎಲ್ಲ ಸಂಸ್ಥೆಗಳಿಗೂ ಇಲಾಖೆಯಿಂದ ನಿರ್ದೇಶನ ಹೊರಡಿಸಲಾಗಿದೆ.

Advertisement

ವಿದ್ಯಾರ್ಥಿಗಳಿಗೆ ಅಭಿಶಿಕ್ಷಣ:
ಪರೀಕ್ಷೆ ಸಂದರ್ಭದಲ್ಲಿ ಕೊಠಡಿಯ ಒಳಗಿರುವ ಬೋರ್ಡ್‌ನಲ್ಲಿ ಉತ್ತರ ಬರೆಯುವುದು, ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಉತ್ತರ ಹೇಳಿ ಕೊಡುವುದು ಮತ್ತು ಚೀಟಿ ನೀಡುವುದು, ಸಾಮೂಹಿಕ ನಕಲು, ಚೀಟಿ ಬರೆಯುವುದು, ಮೊಬೈಲ್‌ ಬಳಕೆ, ನಿಷೇಧಿತ ಎಲೆಕ್ಟ್ರಾನಿಕ್ಸ್‌ ಉಪಕರಣ ಬಳಕೆ, ಉತ್ತರ ಪತ್ರಿಕೆ ತಿದ್ದುವುದು ಮತ್ತು ಉತ್ತರ ಪತ್ರಿಕೆ ಹರಿದು ಹಾಕುವುದು ಪರೀಕ್ಷಾ ಅವ್ಯವಹಾರವಾಗಿರುತ್ತದೆ. ಇದ್ಯಾವುದನ್ನೂ ಪರೀಕ್ಷಾ ಕೊಠಡಿಯಲ್ಲಿ ಮಾಡಕೂಡದು ಎಂಬ ಬಗ್ಗೆ ಅಭಿಶಿಕ್ಷಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಲಾಗುತ್ತದೆ. ಅಲ್ಲದೆ, ಪರೀಕ್ಷಾ ಅಕ್ರಮದಿಂದ ಆಗುವ ಶಿಕ್ಷೆಯ ಬಗ್ಗೆಯೂ ವಿದ್ಯಾರ್ಥಿಗಳ ಗಮನಕ್ಕೆ ತರಲಾಗುತ್ತದೆ. ಇದರ ಜತೆಗೆ ಹಾಜರಾತಿ, ಪ್ರವೇಶ ಪತ್ರದಲ್ಲಿನ ವಿವರಗಳು, ಪರೀಕ್ಷಾ ವೇಳಾಪಟ್ಟಿ, ಆಂತರಿಕ ಅಂಕಗಳ ರಿಜಿಸ್ಟರ್‌ ನಿರ್ವಹಣೆ, ಆನ್‌ಲೈನ್‌ ಇಂಟರ್ಯಾಕ್ಟೀವ್‌ ಸೆಷನ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಉಪನ್ಯಾಸಕರಿಗೆ ತರಬೇತಿ:
2016ರಲ್ಲಿ ಜಾರಿಗೆ ತಂದಿರುವ ನ್ಯೂ ಕೋಡಿಂಗ್‌ ವ್ಯವಸ್ಥೆ, ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರು ಯಾವ ರೀತಿ ಉತ್ತರ ಪತ್ರಿಕೆಯ ಪರಿಶೀಲನೆ ಮಾಡಬೇಕು ಹಾಗೂ ಸಹಿ ಎಲ್ಲಿ ಹಾಕಬೇಕು. ಮುಖ್ಯ ಅಧೀಕ್ಷಕರ ಜವಾಬ್ದಾರಿಗಳು ಮತ್ತು ಉಪ ಅಧೀಕ್ಷಕರು ಏನೇನು ಮಾಡಬೇಕು ಎಂಬುದರ ಕುರಿತು ಅರಿವು ಮೂಡಿಸಲಾಗುತ್ತದೆ. ಮೌಲ್ಯಮಾಪನದ ಸಂದರ್ಭದಲ್ಲಿ ಮೌಲ್ಯಮಾಪಕರು ಅನುಸರಿಸಬೇಕಾದ ಕ್ರಮದ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.

ಪ್ರಶ್ನೆಪತ್ರಿಕೆ ಸೆಟ್ಟಿಂಗ್‌, ಸ್ಕೀಮ್‌ ಆಫ್ ವ್ಯಾಲ್ಯೂಯೇಷನ್‌, ಮಾದರಿ ಉತ್ತರಗಳು, ಪ್ರಾಯೋಗಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ಮೌಲ್ಯಮಾಪನ ಮತ್ತು ಪರೀಕ್ಷೆ ಸಂದರ್ಭದಲ್ಲಿ ಪ್ರಾಂಶುಪಾಲರು ಅನುಸರಿಸಬೇಕಾದ ಕ್ರಮದ ಕುರಿತು ಉಪನ್ಯಾಸಕರು, ವಿಭಾಗೀಯ ಅಧಿಕಾರಿ ಹಾಗೂ ಪ್ರಾಂಶುಪಾಲರಿಗೆ ಅರಿವು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ.

ಸಂಸ್ಥೆಗಳಿಗೆ ನಿರ್ದೇಶನ:
ಉಪನ್ಯಾಸಕರ ವರ್ಗದಲ್ಲಿ ಕರ್ತವ್ಯ ಪ್ರಜ್ಞೆ ಹಾಗೂ ಜವಾಬ್ದಾರಿ ಮತ್ತು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಅಕ್ರಮದ ದುಷ್ಪರಿಣಾಮಗಳ ಮಾಹಿತಿ ನೀಡಲು ಈ ಅಭಿಶಿಕ್ಷಣ ಕಾರ್ಯಕ್ರಮ ನಡೆಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಕೊಠಡಿ ಮೇಲ್ವಿಚಾರಕರಿಗೆ ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ನಡೆಸಲು ಎಲ್ಲ ಶಿಕ್ಷಣ ಸಂಸ್ಥೆಗೂ ಇಲಾಖೆ ನಿರ್ದೇಶನ ನೀಡಿದೆ. ಪರೀಕ್ಷೆಯಲ್ಲಿ ಅಕ್ರಮದ ದೂರು ಕೇಳಿ ಬಂದಲ್ಲಿ, ಕೊಠಡಿ ಮೇಲ್ವಿಚಾರಕರು, ಅಧೀಕ್ಷಕರು, ಉಪ ಅಧೀಕ್ಷಕರು, ವೀಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಲ್ಲ ಸಂಸ್ಥೆಗಳಿಗೂ ಇಲಾಖೆ ಎಚ್ಚರಿಕೆ ನೀಡಿದೆ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next