ಹುನಗುಂದ: ರಾಶಿ-ರಾಶಿ ಕಸದ ಗುಡ್ಡೆ, ತುಂಬಿ ತುಳುಕುತ್ತಿರುವ ಕಸದ ತೊಟ್ಟೆ, ಪ್ರತಿ ಮನೆ- ಮನೆಗಳಿಂದ ಎಸೆಯುವ ಹಸಿ ತ್ಯಾಜ್ಯ ಆಹಾರದ ಪದಾರ್ಥ ತಿನ್ನುತ್ತಿರುವ ನಾಯಿ ಹಂದಿಗಳ ದಂಡು, ಗಬ್ಬೆದ್ದು ದುರ್ವಾಸನೆ ಬೀರುತ್ತಿರುವ ಚರಂಡಿಯ ಕೊಳಕು ವಾಸನೆ.
ಕಸ, ತ್ಯಾಜ್ಯ ಚರಂಡಿಗೆ ಸೇರಿ ನೀರು ಮುಂದೆ ಸಾಗದೇ ನಿಂತಿದೆ. ಸ್ವಚ್ಛತೆಗಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಸ್ಥಳೀಯ ಪುರಸಭೆಯಿಂದ ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದಿರುವುದರಿಂದ ಎಲ್ಲೆಂದರಲ್ಲಿ ಕಸ ಗುಡ್ಡೆಗಳು ನಿರ್ಮಾಣವಾಗುತ್ತಿವೆ. ಮಹಾಮಾರಿ ರೋಗ ತರುವ ಸೊಳ್ಳೆಗಳ ಜನ್ಮ ಸ್ಥಳವಾಗಿವೆ. ರಾತ್ರಿವಿಡೀ ಸೊಳ್ಳೆಗಳ ಕಚ್ಚಿಸಿಕೊಂಡು ಮರುದಿನವೇ ಆಸ್ಪತ್ರೆಗೆ ದಾಖಲಾಗುವ ಪರಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಿದ್ದಾರೆ ಅಲ್ಲಿನ ಜನರು.
ಪಾಗಿಂಗ್ ಮಶಿನ್ ನಾಪತ್ತೆ: ಪಟ್ಟಣದ ತುಂಬೆಲ್ಲಾ ತ್ಯಾಜ್ಯ ವಿಲೇವಾರಿ ಸರಿಯಾಗಿ ಮಾಡದಿರುವುದರಿಂದ ಸೊಳ್ಳೆಯ ಸಂಖ್ಯೆ ಹೆಚ್ಚಾಗುತ್ತಿವೆ. ಪುರಸಭೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪಟ್ಟಣದ ಗಲ್ಲಿ-ಗಲ್ಲಿಗಳಲ್ಲಿ ಪಾಗಿಂಗ್ ಮಶಿನ್ ಮೂಲಕ ಹೊಗೆ ಹಾಗೂ ಮತ್ತು ಚರಂಡಿಯ ಮೇಲೆ ಪೌಂಡರ್ ಸಿಂಪಡಿಸುತ್ತಿಲ್ಲ.
Advertisement
ಇದು ವಾರ್ಡ್ ನಂ.11ರ ಬಡಿಗೇರ ಓಣಿ, ಸಂಗಮೇಶ್ವರ ಓಣಿ, ಕಿಲ್ಲಾ ಓಣಿ ಮತ್ತು ಮುಸ್ಲಿಂ ಓಣಿಯ ಪರಿಸ್ಥಿತಿ. ಪುರಸಭೆಯಿಂದ ಕಸದ ತೊಟ್ಟಿ ಇದೆ. ಸದ್ಯ ಅದು ಕಸದಿಂದ ತುಂಬಿದೆ. ಉಳಿದ ತ್ಯಾಜ್ಯ ರಸ್ತೆ, ಚರಂಡಿಗೆ ಬಿದ್ದು, ದುರ್ವಾಸನೆ ಬೀರುತ್ತಿದೆ. ಇದು ನೂರಾರು ರೋಗಾಣುಗಳ ಉತ್ಪತ್ತಿಯ ತಾಣವಾಗಿದ್ದರೂ ಪುರಸಭೆ ಅಧಿಕಾರಿಗಳು ತೆರವುಗೊಳಿಸುವ ಕಾರ್ಯ ಮಾಡುತ್ತಿಲ್ಲ ಎಂದು ವಾರ್ಡ್ ಜನರ ಆರೋಪವಾಗಿದೆ.