ಬೆಂಗಳೂರು: ರಾಜ್ಯ ಸರ್ಕಾರ ಈ ವರ್ಷವನ್ನು ಕಾಯಕ ವರ್ಷ ಎಂದು ಘೋಷಣೆ ಮಾಡಿರುವ ಬೆನ್ನಲ್ಲೇ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ರಾಜ್ಯದಲ್ಲಿ “ಮಲೆಯಾಳ ಭಾಷೆ ಅಭಿವೃದ್ಧಿ ಮತ್ತು ಪ್ರಸಾರ ಕಾಯ್ದೆ’ ಮಾದರಿಯಲ್ಲಿ ರಾಜ್ಯದಲ್ಲೂ ಕಾಯ್ದೆ ರೂಪಿಸಬೇಕು ಎಂಬ ಹೋರಾಟ ರೂಪಿಸಲು ಕನ್ನಡಪರ ಹೋರಾಟಗಾರರು, ಸಾಹಿತಿಗಳು ಸಜ್ಜಾಗುತ್ತಿದ್ದಾರೆ.
ಮಲೆಯಾಳ ಭಾಷೆಯ ಸಮಗ್ರ ಅಭಿವೃದ್ಧಿ ಪಣತೊಟ್ಟಿರುವ ಕೇರಳಸರ್ಕಾರ ಈಗಾಗಲೇ ಮಲೆಯಾಳ ಭಾಷೆ ಅಭಿವೃದ್ಧಿ ಮತ್ತುಪ್ರಸಾರಕಾಯ್ದೆ ಜಾರಿಗೆ ತಂದಿದೆ. ಇದರಿಂದಾಗಿ ಭಾಷೆ ಅಭಿವೃದ್ಧಿ, ಉದ್ಯೋಗ,ತಂತ್ರಜ್ಞಾನ ಸೇರಿ ಇನ್ನಿತರ ಭಾಷಾ ಕಾರ್ಯಕ್ಕೆ ಸಂಬಂಧಿಸಿದಂತೆ ಹಲವುಇಲಾಖೆಗಳು ಒಂದೇ ಸೂರಿನಡಿ ಕೆಲಸ ಮಾಡಲು ಸಹಕಾರಿ ಆಗಲಿದೆ.ಭಾಷೆಯ ಸಮಗ್ರ ಅಭಿವೃದ್ಧಿಗೂ ಮತ್ತಷ್ಟು ಪೂರಕವಾಗಲಿದೆ. ಕರ್ನಾಟಕದಲ್ಲೂ ಕನ್ನಡಕ್ಕೆ ಸಂಬಂಧಿಸಿದಂತೆ ಹಲವು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಅವೆಲ್ಲವೂ ಒಂದೇ ಸೂರಿನಡಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಭಾಷಾ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅನೇಕ ಅಡೆ-ತಡೆ ಉಂಟಾಗಿವೆ. ಕನ್ನಡ ನಾಮಫಲಕ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶಗಳು ಪಾಲನೆ ಆಗುತ್ತಿಲ್ಲ. ಹೀಗಾಗಿ ಕೇರಳ ಮಾದರಿಯ ಕಾಯ್ದೆ ಅಗತ್ಯ ಎಂಬುದು ಕನ್ನಡಪರ ಹೋರಾಟಗಾರರು ಹಾಗೂ ಸಾಹಿತಿಗಳವಾದ.
ಕಾರ್ಖಾನೆಗಳಲ್ಲಿ, ಸಾಫ್ಟ್ವೇರ್ ಕಂಪನಿಗಳಲ್ಲಿ ಕನ್ನಡಿಗರಿಗೆಉದ್ಯೋಗ ನೀಡುವ ವಿಚಾರ ಕೂಡ ಹೀಗೆಯೇ ಆಗಿದೆ.ತಂತ್ರಾಂಶ ಅಭಿವೃದ್ಧಿಯೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯವಾಗಿದೆ. ಆದರೆ, ಈ ಬಗ್ಗೆ ಎಲ್ಲಾ ಇಲಾಖೆಗಳು ಒಗ್ಗೂಡಿ ಕೆಲಸ ನಿರ್ವಹಿಸುತ್ತಿಲ್ಲ. ಕೇರಳ ಸರ್ಕಾರ ಮಲೆಯಾಳ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ “ಮಲೆಯಾಳ ಭಾಷೆಅಭಿವೃದ್ಧಿ ಮತ್ತು ಪ್ರಸಾರ ಕಾಯ್ದೆ’ ಜಾರಿಗೆ ತಂದಿದೆ. ಅದರಿಂದ ಅಲ್ಲಿನ ಸ್ಥಳೀಯ ಭಾಷಿಗರಿಗೆ ಉದ್ಯೋಗ ದೊರಕುವ ಜತೆಗೆ ಭಾಷೆ ಬೆಳವಣಿಗೆಗೂ ಪೂರಕವಾಗಿದೆ ಎಂದು ಕನ್ನಡಪರ ಚಿಂತಕ ರಾ.ನಂ.ಚಂದ್ರಶೇಖರ್ ಹೇಳುತ್ತಾರೆ.
ಕಾಯ್ದೆಯಲ್ಲಿ ಅನುಪಮ ವಿಚಾರ: ಕೇರಳ ಸರ್ಕಾರ ಈಗಾಗಲೇಅನುಷ್ಠಾನಕ್ಕೆ ತಂದಿರುವ ಭಾಷೆ ಅಭಿವೃದ್ಧಿ ಮತ್ತು ಪ್ರಸಾರ ಕಾಯ್ದೆಯಲ್ಲಿರುವ ಅಂಶಗಳ ಬಗ್ಗೆ ಓದಿದ್ದೇನೆ. ಅದರಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದು, ನಾಮಫಲಕಗಳ ಅಳವಡಿಕೆ, ಭಾಷಾ ಅಭಿ ವೃದ್ಧಿ ತಂತ್ರಾಂಶ ಸೇರಿ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.ನಮ್ಮಲ್ಲಿ ನಾಮಫಲಕ ಅಳವಡಿಕೆ ಸಂಬಂಧ ದಂಡ ಹಾಕುವುದೇಒಂದು ಇಲಾಖೆ, ಭಾಷೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದುಇಲಾಖೆ, ಹಾಗೆಯೇ ಉದ್ಯೋಗ, ತಂತ್ರಾಂಶ ಅಭಿವೃದ್ಧಿಗೆ ಮತ್ತೂಂದು ಇಲಾಖೆ ಕಾರ್ಯ ನಿರ್ವಹಿಸು ತ್ತಿದೆ. ಕನ್ನಡ ಕಾಯಕಕ್ಕೆಸಂಬಂಧಿಸಿದಂತೆ ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಬಂದರೆ ಭಾಷೆ ಬೆಳವಣಿಗೆಗೆ ಮತ್ತಷ್ಟು ಅನು ಕೂಲವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಸಾಹಿತಿ ಎಲ್.ಹನುಮಂತಯ್ಯತಿಳಿಸಿದ್ದಾರೆ.
ಶೀಘ್ರ ಸಿಎಂ ಬಳಿಗೆ ನಿಯೋಗ : ಸಮಗ್ರ ಭಾಷಾ ಅಭಿವೃದ್ಧಿ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಮತ್ತು ಸಾಹಿತಿ ಎಲ್.ಹನುಮಂತಯ್ಯ ಅವರ ನೇತೃತ್ವದಲ್ಲಿ ಕನ್ನಡಪರ ಚಿಂತಕರ ಮತ್ತು ಸಾಹಿತಿಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಭಾಷೆ ಬೆಳವಣಿಗೆ ಮತ್ತು ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೇರಳ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆ ಮಾದರಿಕಾಯ್ದೆ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಡಲು ತೀರ್ಮಾನಿ ಸಿದೆ. ಅದಕ್ಕಾಗಿ “ಮಲೆಯಾಳ ಭಾಷೆ ಅಭಿವೃದ್ಧಿ ಮತ್ತು ಪ್ರಸಾರ ಕಾಯ್ದೆ ‘ಯಲ್ಲಿರುವ ಪೂರಕ ಅಂಶಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸ ಕೂಡ ಈಗಾಗಲೇ ನಡೆದಿದೆ.
–ದೇವೇಶ ಸೂರಗುಪ್ಪ